ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರುಕ್ಮಿಣಿ ವಸಂತ್ ನಕಲಿ ಬಿಕಿನಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ ಮೂವರು ಕಾಮುಕರನ್ನು ಸೈಬರ್ ಕಮಾಂಡ್ ಪೊಲೀಸರು ಯಶಸ್ವಿಯಾಗಿ ಪತ್ತೆ ಹಚ್ಚಿದ್ದು, ಬಂಧಿಸಿದ್ದಾರೆ. ನಟಿಯ ಫೋಟೋ ಹಾಗೂ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಈ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಇದೀಗ ತಾಂತ್ರಿಕ ಆಧಾರದ ಮೇಲೆ ಖದೀಮರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ನಂತರ ಬಂಧಿತ ಆರೋಪಿಗಳನ್ನು ಬಾಗಲಕೋಟೆ ನಿವಾಸಿ ರವಿಕುಮಾರ್ (24), ಮತ್ತು ಬೆಂಗಳೂರು ನಿವಾಸಿಗಳಾದ ಚಂದ್ರಕಾಂತ (33) ಮತ್ತು ರಂಜಿತ್ (25) ಎಂದು ಗುರುತಿಸಲಾಗಿದೆ. ಈ ಮೂವರು ಆರೋಪಿಗಳು ನಟಿಯ ಘನತೆಗೆ ಕುಂದು ತರುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿತನ ಪ್ರದರ್ಶಿಸಿದ್ದರು. ಕೃತ್ಯಕ್ಕೆ ಬಳಸಿದ್ದ ಮೂರು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳ ತೇಜೋವಧೆ ಮಾಡುವವರ ವಿರುದ್ಧ ಪೊಲೀಸರು ಕಠಿಣ ಎಚ್ಚರಿಕೆ ನೀಡಿದ್ದಾರೆ. ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಇಂತಹ ವಿಕೃತ ಕೃತ್ಯ ಎಸಗುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸೈಬರ್ ಕಮಾಂಡ್ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಮುಖಪುಟದಲ್ಲಿ ಸೌಮ್ಯವಾಗಿ ಕಾಣುವ ಸಾಮಾಜಿಕ ಜಾಲತಾಣಗಳ ಹಿಂದಿನ ಇಂತಹ ವಿಕೃತ ಮುಖಗಳನ್ನು ಪತ್ತೆ ಹಚ್ಚಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.






















