ಮುಂಬಯಿ: ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಲಿಮಿಟೆಡ್ ಹಾಗೂ ಬ್ಲ್ಯಾಕ್‌ರಾಕ್ ಸಂಸ್ಥೆಯ ಜಂಟಿ ಸಹಭಾಗಿತ್ವದ ಜಿಯೋಬ್ಲ್ಯಾಕ್‌ರಾಕ್ ಅಸೆಟ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್, ಜಿಯೋ ಬ್ಲ್ಯಾಕ್‌ರಾಕ್ ಓವರ್‌ನೈಟ್ ಫಂಡ್ ಜತೆಗೆ ‘ಸೇವಿಂಗ್ಸ್ ಪ್ರೊ’ ಎಂಬ ಹೊಸ ಸೇವಿಂಗ್ಸ್–ಪ್ಲಸ್–ಇನ್ವೆಸ್ಟ್‌ಮೆಂಟ್ ಸೌಲಭ್ಯವನ್ನು ಪರಿಚಯಿಸಿದೆ.
ಜಿಯೋ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (JPBL) ಮೂಲಕ ಜಿಯೋ ಫೈನಾನ್ಸ್ ಆ್ಯಪ್‌ನಲ್ಲಿ ಲಭ್ಯವಿರುವ ಈ ಸೌಲಭ್ಯವು ಗ್ರಾಹಕರ ಬ್ಯಾಂಕ್ ಖಾತೆಯಲ್ಲಿರುವ ಹೆಚ್ಚುವರಿ ಹಣವನ್ನು ಸಂಪೂರ್ಣ ಡಿಜಿಟಲ್ ಪ್ರಕ್ರಿಯೆಯ ಮೂಲಕ ಓವರ್‌ನೈಟ್ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸುತ್ತದೆ.
‘ಸೇವಿಂಗ್ಸ್ ಪ್ರೊ’ ವ್ಯವಸ್ಥೆಯಲ್ಲಿ ಗ್ರಾಹಕರು ತಮ್ಮ ಖಾತೆಯಲ್ಲಿ ನಿಗದಿಪಡಿಸಿದ ಮಿತಿಗಿಂತ ಹೆಚ್ಚಿರುವ ಮೊತ್ತವನ್ನು ಸ್ವಯಂಚಾಲಿತವಾಗಿ ಓವರ್‌ನೈಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಅಗತ್ಯವಿದ್ದಾಗ ಹಣವನ್ನು ಸುಲಭವಾಗಿ ಹಿಂಪಡೆಯುವ ವ್ಯವಸ್ಥೆಯೂ ಇದರಲ್ಲಿ ಇದೆ.
ಈ ಯೋಜನೆಯಲ್ಲಿ ‘ಆಟೋ-ಇನ್ವೆಸ್ಟ್’ ಹಾಗೂ ‘ಒನ್-ಟೈಮ್ ಇನ್ವೆಸ್ಟ್‌ಮೆಂಟ್’ ಎಂಬ ಎರಡು ಆಯ್ಕೆಗಳು ಲಭ್ಯವಿವೆ. ಗ್ರಾಹಕರು ₹5,000ರಿಂದ ₹1.50 ಲಕ್ಷದವರೆಗೆ ಮಿತಿಯನ್ನು ನಿಗದಿಪಡಿಸಿಕೊಳ್ಳಬಹುದಾಗಿದ್ದು, ದಿನಕ್ಕೆ ಗರಿಷ್ಠ ₹1.50 ಲಕ್ಷದವರೆಗೆ ಹೂಡಿಕೆ ಮಾಡಲು ಅವಕಾಶವಿದೆ.
ಹೂಡಿಕೆ ಮಾಡಿದ ಮೊತ್ತದಲ್ಲಿ ಗರಿಷ್ಠ ₹50,000 ಅಥವಾ ಶೇ 90ರಷ್ಟು ಹಣವನ್ನು (ಯಾವುದು ಕಡಿಮೆಯೋ ಅದನ್ನು) ತಕ್ಷಣವೇ ಹಿಂಪಡೆಯಬಹುದಾಗಿದೆ. ಇದಕ್ಕಿಂತ ಹೆಚ್ಚಿನ ಮೊತ್ತದ ಹಿಂಪಡೆಯುವಿಕೆಗಳನ್ನು ನಿಯಂತ್ರಕ ಮಾರ್ಗಸೂಚಿಗಳಂತೆ ಮುಂದಿನ ಕೆಲಸದ ದಿನ (T+1) ಪೂರ್ಣಗೊಳಿಸಲಾಗುತ್ತದೆ. ಯೋಜನೆಗೆ ಯಾವುದೇ ಎಂಟ್ರಿ ಅಥವಾ ಎಕ್ಸಿಟ್ ಲೋಡ್, ಲಾಕ್-ಇನ್ ಅವಧಿ ಅಥವಾ ಗುಪ್ತ ಶುಲ್ಕಗಳಿಲ್ಲ ಎಂದು ಸಂಸ್ಥೆ ತಿಳಿಸಿದೆ.
ಜಿಯೋಬ್ಲ್ಯಾಕ್‌ರಾಕ್ ಅಸೆಟ್ ಮ್ಯಾನೇಜ್‌ಮೆಂಟ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಸಿದ್ದಾರ್ಥ್ ಸ್ವಾಮಿನಾಥನ್ ಮಾತನಾಡಿ, ಗ್ರಾಹಕರ ಹೆಚ್ಚುವರಿ ಹಣವನ್ನು ಸರಳ ಹಾಗೂ ಪರಿಣಾಮಕಾರಿ ರೀತಿಯಲ್ಲಿ ನಿರ್ವಹಿಸಲು ಈ ಸೌಲಭ್ಯ ನೆರವಾಗಲಿದೆ ಎಂದು ಹೇಳಿದರು.
ಜಿಯೋ ಪೇಮೆಂಟ್ಸ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ವಿನೋದ್ ಈಶ್ವರನ್, ಡಿಜಿಟಲ್ ಆಧಾರಿತ ಹಣಕಾಸು ಸೇವೆಗಳನ್ನು ಮತ್ತಷ್ಟು ಸುಲಭಗೊಳಿಸುವ ಉದ್ದೇಶದಿಂದ ‘ಸೇವಿಂಗ್ಸ್ ಪ್ರೊ’ ರೂಪಿಸಲಾಗಿದೆ ಎಂದು ತಿಳಿಸಿದರು.
ಜಿಯೋ ಪೇಮೆಂಟ್ಸ್ ಬ್ಯಾಂಕ್‌ನ ಉಳಿತಾಯ ಹಾಗೂ ಸಂಬಳ ಖಾತೆದಾರರು ಈ ಸೇವೆಯ ಪ್ರಯೋಜನ ಪಡೆಯಬಹುದಾಗಿದೆ. ಜಿಯೋ ಫೈನಾನ್ಸ್ ಆ್ಯಪ್‌ನಲ್ಲಿ ಆಧಾರ್ ಮತ್ತು ವಿಡಿಯೊ ಕೆವೈಸಿ ಮೂಲಕ ಸಂಪೂರ್ಣ ಡಿಜಿಟಲ್ ವಿಧಾನದಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಗ್ರಾಹಕರು ತಮ್ಮ ಹೂಡಿಕೆ ಮಿತಿಯನ್ನು ನಿಗದಿಪಡಿಸುವುದು, ಬದಲಾಯಿಸುವುದು ಹಾಗೂ ವ್ಯವಹಾರಗಳನ್ನು ಮೇಲ್ವಿಚಾರಣೆ ಮಾಡುವ ಸೌಲಭ್ಯವೂ ಈ ವೇದಿಕೆಯಲ್ಲಿ ಲಭ್ಯವಿದೆ.






















