SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಬಿಡದಿ ವಿವಾದ: ರೈತರ ಆಕ್ರೋಶದ ನಡುವೆ ಪೋಸ್ಟರ್ ರಾಜಕೀಯ

ಬಿಡದಿ ವಿವಾದ: ರೈತರ ಆಕ್ರೋಶದ ನಡುವೆ ಪೋಸ್ಟರ್ ರಾಜಕೀಯ

0
130

ಬಿಡದಿಯಲ್ಲಿ ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ವ್ಯಂಗ್ಯ ಪೋಸ್ಟರ್‌ಗಳು: ರಾಹುಲ್ ಗಾಂಧಿಗೆ ರೈತರ ಪತ್ರ ಚಳುವಳಿ; ಟೌನ್‌ಶಿಪ್ ಯೋಜನೆಗೆ ವಿರೋಧ ಹೆಚ್ಚಳ

ಬೆಂಗಳೂರು: ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ ‘ಬಿಡದಿ ಸಮಗ್ರ ಟೌನ್‌ಶಿಪ್ – AI ಸಿಟಿ’ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ರೈತರ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಯೋಜನೆಗಾಗಿ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವ ಕ್ರಮವನ್ನು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಈ ಹೋರಾಟ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ಬುಧವಾರ ಪ್ರತಿಭಟನಾ ಸ್ಥಳಕ್ಕೆ ಬಿಜೆಪಿ ನಾಯಕರು ಭೇಟಿ ನೀಡಲಿರುವ ಬೆನ್ನಲ್ಲೇ ಬಿಡದಿಗೆ ತೆರಳುವ ಪ್ರಮುಖ ರಸ್ತೆಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ವ್ಯಂಗ್ಯಭರಿತ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದು, ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಬಿಜೆಪಿ ನಾಯಕರ ಭೇಟಿ : ರೈತರ ಹೋರಾಟಕ್ಕೆ ಬೆಂಬಲ ಸೂಚಿಸುವ ಉದ್ದೇಶದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲುವಾದಿ ನಾರಯಾಣಸ್ವಾಮಿ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

ಇದನ್ನೂ ಓದಿ: ಹೃದಯಾಘಾತದಿಂದ ಖ್ಯಾತ ಬಾಡಿ ಬಿಲ್ಡರ್ ಸಾವು

ಬಿಡದಿ ಸಮೀಪದ ಅರಳಾಳುಸಂದ್ರದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ನಾಯಕರು ಆಗಮಿಸುವ ಮಾರ್ಗಗಳಲ್ಲೇ ಅನಾಮಿಕರು ಪೋಸ್ಟರ್‌ಗಳನ್ನು ಅಂಟಿಸಿರುವುದು ಗಮನ ಸೆಳೆದಿದೆ.

ಪೋಸ್ಟರ್‌ಗಳಲ್ಲಿ ನಾಯಕರ ವಿರುದ್ಧ ವ್ಯಂಗ್ಯ : ಪೋಸ್ಟರ್‌ಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಟೀಕೆ ಮತ್ತು ವ್ಯಂಗ್ಯ ವ್ಯಕ್ತಪಡಿಸಲಾಗಿದೆ. ಕೆಲವು ಪೋಸ್ಟರ್‌ಗಳಲ್ಲಿ ಆರ್. ಅಶೋಕ್, ವಿಜಯೇಂದ್ರ ಮತ್ತು ಛಲವಾದಿ ನಾರಾಯಣಸ್ವಾಮಿ ಅವರ ಹೆಸರನ್ನು ಉಲ್ಲೇಖಿಸಿ ಲೇವಡಿ ಮಾಡಲಾಗಿದೆ.

ಇದೇ ವೇಳೆ ಕೇಂದ್ರ ಸಚಿವ ಹೆಚ್‌. ಡಿ. ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರ ವಿರುದ್ಧವೂ ವ್ಯಂಗ್ಯಾತ್ಮಕ ಸಂದೇಶಗಳನ್ನು ಪೋಸ್ಟರ್‌ಗಳಲ್ಲಿ ಪ್ರದರ್ಶಿಸಲಾಗಿದೆ. “ನಮಗೆ ಇರೋದೇ ನೂರು ಎಕರೆ ಭೂಮಿ, ಅದನ್ನಾದರೂ ನಮಗೆ ಬಿಟ್ಟುಕೊಡಿ” ಎಂಬ ಬರಹಗಳ ಮೂಲಕ ರೈತರ ಭಾವನೆಗಳನ್ನು ಪ್ರತಿಬಿಂಬಿಸುವ ಪ್ರಯತ್ನವೂ ಪೋಸ್ಟರ್‌ಗಳಲ್ಲಿ ಕಂಡುಬಂದಿದೆ.

ಇದನ್ನೂ ಓದಿ: ವಿಶ್ವಕಪ್‌ನಲ್ಲಿ ಹೊಸ ಅಧ್ಯಾಯ: Messi ಐತಿಹಾಸಿಕ ಹ್ಯಾಟ್ರಿಕ್ ಗೋಲು

ಯಾರು ಅಂಟಿಸಿದ್ದಾರೆ? : ಈ ಪೋಸ್ಟರ್‌ಗಳನ್ನು ಯಾರು ಅಂಟಿಸಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ರಾತ್ರೋರಾತ್ರಿ ಅನಾಮಿಕರು ಈ ಪೋಸ್ಟರ್‌ಗಳನ್ನು ಅಂಟಿಸಿರುವ ಸಾಧ್ಯತೆ ಇದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಈ ಸಂಬಂಧ ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷ ಅಧಿಕೃತವಾಗಿ ಹೊಣೆ ಹೊತ್ತಿಲ್ಲ.

ರೈತರ ಹೋರಾಟಕ್ಕೆ ಹೊಸ ರೂಪ : ಬಿಡದಿ ಪ್ರದೇಶದಲ್ಲಿ ಪ್ರಸ್ತಾಪಿತ AI ಸಿಟಿ ಮತ್ತು ಸಮಗ್ರ ಟೌನ್‌ಶಿಪ್ ಯೋಜನೆಗಾಗಿ ಸಾವಿರಾರು ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಭೂಮಿ ಕಳೆದುಕೊಂಡರೆ ತಮ್ಮ ಜೀವನಾಧಾರವೇ ಸಂಕಷ್ಟಕ್ಕೆ ಸಿಲುಕಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿಗೆ ಪತ್ರ ಚಳುವಳಿ : ಈ ನಡುವೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು ಇತ್ತೀಚೆಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಗೆ ಪತ್ರ ಬರೆದು ರೈತರ ಸಮಸ್ಯೆಯಲ್ಲಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದರು.

ಇದನ್ನೂ ಓದಿ: ಆತ್ಮನಿರ್ಭರ ಬಲ: ಭಾರತದ ರಕ್ಷಣಾ ಉತ್ಪಾದನೆ ₹1.78 ಲಕ್ಷ ಕೋಟಿಗೆ

ನಿಖಿಲ್ ಕುಮಾರಸ್ವಾಮಿ ಅವರ ಮನವಿಗೆ ಸ್ಪಂದಿಸಿರುವ ಬಿಡದಿ ಭಾಗದ 100ಕ್ಕೂ ಹೆಚ್ಚು ರೈತರು ಕೂಡ ರಾಹುಲ್ ಗಾಂಧಿಗೆ ಪ್ರತ್ಯೇಕ ಪತ್ರಗಳನ್ನು ಬರೆದು, ಭೂಸ್ವಾಧೀನ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ.

ರಾಜಕೀಯ ಕಾವು ಹೆಚ್ಚಿಸಿದ AI ಸಿಟಿ ಯೋಜನೆ : ಒಂದೆಡೆ ರಾಜ್ಯ ಸರ್ಕಾರ ಅಭಿವೃದ್ಧಿಯ ದೃಷ್ಟಿಯಿಂದ ಯೋಜನೆ ಮಹತ್ವದ್ದೆಂದು ಪ್ರತಿಪಾದಿಸುತ್ತಿದ್ದರೆ, ಮತ್ತೊಂದೆಡೆ ರೈತರು ತಮ್ಮ ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರೈತರ ಪರ ನಿಂತಿರುವುದಾಗಿ ಹೇಳಿಕೊಂಡಿದ್ದು, ಕಾಂಗ್ರೆಸ್ ಸರ್ಕಾರ ಯೋಜನೆ ಮುಂದುವರಿಸಲು ಸಜ್ಜಾಗಿದೆ.

ಈ ಬೆಳವಣಿಗೆಗಳ ನಡುವೆ ಬಿಡದಿ AI ಸಿಟಿ ಯೋಜನೆ ರಾಜ್ಯ ರಾಜಕೀಯದ ಪ್ರಮುಖ ಚರ್ಚಾವಿಷಯವಾಗಿ ಹೊರಹೊಮ್ಮಿದ್ದು, ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.