SK Home Ad
Home ಸಿನಿ ಮಿಲ್ಸ್ ಆಮೀರ್ ಖಾನ್‌ಗೆ ಮೂರನೇ ಬಾರಿಗೆ ಒಲಿದ ಭಾಗ್ಯ: ಬೆಂಗಳೂರಿನ ವೆಲ್ನೆಸ್ ಉದ್ಯಮಿ ಗೌರಿ ಸ್ಪ್ರಾಟ್ ಜೊತೆ...

ಆಮೀರ್ ಖಾನ್‌ಗೆ ಮೂರನೇ ಬಾರಿಗೆ ಒಲಿದ ಭಾಗ್ಯ: ಬೆಂಗಳೂರಿನ ವೆಲ್ನೆಸ್ ಉದ್ಯಮಿ ಗೌರಿ ಸ್ಪ್ರಾಟ್ ಜೊತೆ ಜುಲೈನಲ್ಲಿ ಮದುವೆ!

0
32

ಮುಂಬೈ: ಬಾಲಿವುಡ್‌ನ ʻಮಿಸ್ಟರ್‌ ಪರ್ಫೆಕ್ಟ್‌ಶನಿಸ್ಟ್‌ʼ ಎಂದೇ ಖ್ಯಾತರಾಗಿರುವ ನಟ ಆಮೀರ್‌ ಖಾನ್‌ ಮೂರನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ತಮ್ಮ ಮದುವೆಯ ವದಂತಿಗಳಿಗೆ ಸ್ವತಃ ಆಮೀರ್ ಖಾನ್ ಇದೀಗ‌ ಅಧಿಕೃತ ಮುದ್ರೆ ಒತ್ತಿದ್ದಾರೆ. ಬೆಂಗಳೂರು ಮೂಲದ ವೆಲ್ನೆಸ್‌ ಉದ್ಯಮಿ ಗೌರಿ ಸ್ಪ್ರಾಟ್‌ ಅವರೊಂದಿಗೆ ಜುಲೈ 5ರಂದು ಅತ್ಯಂತ ಆಪ್ತರ ಸಮ್ಮುಖದಲ್ಲಿ ವಿವಾಹವಾಗುತ್ತಿರುವುದಾಗಿ ನಟ ಖಚಿತಪಡಿಸಿದ್ದಾರೆ.

ಸದ್ಯ ಅಮೆರಿಕ ಪ್ರವಾಸದಲ್ಲಿರುವ ಆಮೀರ್‌ ಖಾನ್‌, ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. “ನನ್ನ ಮದುವೆಯ ಬಗ್ಗೆ ಕೇಳಿಬರುತ್ತಿರುವ ಸುದ್ದಿಗಳು ಸಂಪೂರ್ಣ ನಿಜ. ಜುಲೈ 5ರಂದು ನಮ್ಮ ವಿವಾಹ ನಡೆಯಲಿದೆ” ಎಂದು ಹೇಳುವ ಮೂಲಕ ತಮ್ಮ ಅಭಿಮಾನಿಗಳಲ್ಲಿ ಹಾಗೂ ಬಾಲಿವುಡ್‌ ವಲಯದಲ್ಲಿದ್ದ ತೀವ್ರ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಈ ಹಿಂದೆ ಮದುವೆಯ ಬಗ್ಗೆ ಭಿನ್ನ ನಿಲುವು ಹೊಂದಿದ್ದ ಆಮೀರ್, “ತಾವಿಬ್ಬರೂ ಹೊಸದಾಗಿ ಖರೀದಿಸಿದ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದು, ಸದ್ಯಕ್ಕೆ ಮದುವೆ ತಮ್ಮ ಆದ್ಯತೆಯಲ್ಲ” ಎಂದು ಹೇಳಿದ್ದರು. ಈಗ ಒಮ್ಮಿಂದೊಮ್ಮೆಲೇ ನಿರ್ಧಾರ ಬದಲಾದ ಕುರಿತು ಉತ್ತರಿಸಿ, “ನಾನು ಹಿಂದೆ ಹಾಗೆ ಹೇಳಿದ್ದು ನಿಜ. ಆದ್ರೆ ಈಗ ನಾವಿಬ್ಬರೂ ನಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ ಎಂದು ನಮಗೆ ಅನಿಸುತ್ತಿದೆ. ಪ್ರಸ್ತುತ ನಾನು ಮಾನಸಿಕವಾಗಿ ಶಾಂತಿಯಿಂದ ಇದ್ದೇನೆ. ಗೌರಿ ಮತ್ತು ನಾನು ಒಬ್ಬರನ್ನೊಬ್ಬರು ತುಂಬಾ ಅರ್ಥ ಮಾಡಿಕೊಂಡಿದ್ದೇವೆ” ಎಂದು ಜೀವನದ ಹೊಸ ಅಧ್ಯಾಯದ ಕುರಿತು ಮಾತನಾಡಿದ್ದಾರೆ.

ಆಮೀರ್‌ ಖಾನ್‌ ಮನಗೆದ್ದ ಗೌರಿ ಸ್ಪ್ರಾಟ್‌ ಮೂಲತಃ ಬೆಂಗಳೂರಿನವರಾಗಿದ್ದು, ವೆಲ್ನೆಸ್‌ ಮತ್ತು ಬ್ಯೂಟಿ ಉದ್ಯಮದಲ್ಲಿ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ ಮಾರ್ಚ್‌ನಲ್ಲಿ ನಡೆದ ತಮ್ಮ 60ನೇ ವರ್ಷದ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಆಮೀರ್‌ ಖಾನ್‌, ಗೌರಿನ್ನು ಮೊದಲ ಬಾರಿಗೆ ಜಗತ್ತಿಗೆ ಪರಿಚಯಿಸಿದ್ದರು. ಸದ್ಯ ಈ ಜೋಡಿಯ ಮದುವೆ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.