ಮುಂಬೈ: ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಅಜೇಯ 47 ಹಾಗೂ ಆರಂಭಿಕ ಆಟಗಾರ್ತಿ ಗ್ರೇಸ್ ಹ್ಯಾರಿಸ್‌ನ 85 ರನ್‌ಗಳ ಅದ್ಭುತ ಆಟದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಡಬ್ಲುಪಿಎಲ್‌ನಲ್ಲಿ 2ನೇ ಗೆಲುವು ಸಾಧಿಸಿದೆ.
ಯುಪಿ ವಾರಿಯರ್ಸ್ ನೀಡಿದ್ದ 144 ರನ್‌ಗಳ ಗೆಲುವಿನ ಗುರಿಯನ್ನು ಆರ್‌ಸಿಬಿ ಇನ್ನು 47 ಎಸೆತಗಳು ಬಾಕಿಯಿರುವಂತೆಯೇ 9 ವಿಕೆಟ್‌ಗಳನ್ನು ಉಳಿಸಿಕೊಂಡು ತಲುಪಿದೆ. ಈ ಮೂಲಕ ಯುಪಿ ಮತ್ತೆ ಸೋಲು ಕಹಿ ಅನುಭವಿಸಿದೆ.
ಟಾಸ್ ಗೆದ್ದು ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ವಾರಿಯರ್ಸ್‌ಗೆ ಮೊದಲು ಬ್ಯಾಟಿಂಗ್ ಮಾಡಲು ಸೂಚಿಸಿದರು. ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 197 ರನ್‌ಗಳಿಸಿದ್ದ ಯುಪಿ, ಈ ಪಂದ್ಯದಲ್ಲಿ ಗೆಲ್ಲಲು ಶತಾಯ ಗತಾಯ ದೊಡ್ಡ ಮೊತ್ತ ಪೇರಿಸಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದ್ರೆ, ಆರಂಭದಿಂದಲೇ ವಾರಿಯರ್ಸ್‌ನ ಒಬ್ಬೊಬ್ಬ ಬ್ಯಾಟರ್ ಪೆವಿಲಿಯನ್ ಪರೇಡ್ ನಡೆಸಿದರು.
ಆರಂಭಿಕರಾಗಿ ಕಣಕ್ಕಿಳಿದ ನಾಯಕಿ ಮೆಗ್ ಲಾನಿಂಗ್ ಹಾಗೂ ಹರ್ಲಿನ್ ಡಿಯೋಲ್ ಸಮಾಧಾನಕರ 21 ರನ್‌ಗಳಿಸಿದರಾದರೂ, ವೇಗಿ ಲೌರೆನ್ ಬೆಲ್ ಹರ್ಲಿನ್ ಡಿಯೋಲ್ ಅವರನ್ನು ಕ್ಯಾಚ್ ನೀಡುವಂತೆ ಮಾಡಿದರು. ನಾಯಕಿ ಮೆಗ್ ಲಾನಿಂಗ್ ಅವರನ್ನು ಶ್ರೇಯಾಂಕ ಪಾಟೀಲ್ ಔಟ್ ಮಾಡಿದರೆ, 20 ರನ್ ಗಳಿಸಿದ್ದ ಫೋಬೆ ಲಿಚ್ಚಿಫೀಲ್ಡ್ ಅವರನ್ನು ಮತ್ತೆ ಲೌರೆನ್ ಬೆಲ್ ಔಟ್ ಮಾಡಿದರು.
ಕಿರಣ್ ನಾವ್ಗೆರೆ ಹಾಗೂ ಶ್ವೇತಾ ಶೆರಾವತ್ ಡಿ ಕ್ಲರ್ಕ್ ಬೌಲಿಂಗ್‌ನಲ್ಲಿ ಒಂದೇ ಓವರ್‌ನಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡರು. ಇದರಿಂದ ಕೇವಲ 50 ರನ್‌ಗಳಿಗೆ ಯುಪಿ ತನ್ನ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
6ನೇ ವಿಕೆಟ್‌ಗೆ ಜೊತೆಯಾದ ದಿಯೇಂದ್ರ ಡಾಟ್ಟಿನ್ ಹಾಗೂ ದೀಪ್ತಿ ಶರ್ಮಾ ನಿಧಾನವಾಗಿ ರನ್ ಕದಿಯುತ್ತಾ ಸಾಗಿದರು. ಸುಮಾರು ಇನ್ನಿಂಗ್ಸ್ 15 ಓವರ್‌ಗಳವರೆಗೂ ಈ ಜೋಡಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ. ಈ ವೇಳೆ ಕಳಪೆ ಕ್ಷೇತ್ರರಕ್ಷಣೆಯಿಂದಾಗಿ ಒಂದಷ್ಟು ರನ್‌ಗಳು ಹರಿದು ಬಂದಿದ್ದು, ವಾರಿಯರ್ಸ್ ತಂಡವನ್ನು ನೂರರ ಗಡಿ ದಾಟುವಂತೆ ಮಾಡಿತು.
ಆದ್ರೆ, ಕೊನೆಯ 4 ಓವರ್‌ಗಳಲ್ಲಿ ಈ ಜೋಡಿ 44 ರನ್‌ಗಳನ್ನು ಗಳಿಸಿದ್ದು, ತಂಡಕ್ಕೆ ಸವಾಲಿನ ಮೊತ್ತ ಕಲೆ ಹಾಕುವಂತೆ ಮಾಡಿತು. ಇದರ ಮಧ್ಯೆ ಕೊನೆ ಓವರ್‌ನಲ್ಲಿ ಬೌಲಿಂಗ್ ಮಾಡಿದ ಶ್ರೇಯಾಂಕ ಪಾಟೀಲ್ ದುಬಾರಿಯಾದರು. ಕೊನೆ ಎಸೆತದಲ್ಲಿ ದೀಪ್ತಿ ಬೌಂಡರಿ ಬಾರಿಸುವುದರೊಂದಿಗೆ ಅಂತಿಮವಾಗಿ 5 ವಿಕೆಟ್‌ಗಳನ್ನು ಕಳೆದುಕೊಂಡ ಯುಪಿ ವಾರಿಯರ್ಸ್ 143 ರನ್‌ಗಳಿಸಿದರು.
ಬ್ಯಾಟಿಂಗ್‌ನಲ್ಲಿ ಆರ್‌ಸಿಬಿ ಉತ್ತಮ ಆರಂಭ ಪಡೆದುಕೊಂಡಿತು. ನಾಯಕಿ ಸ್ಮೃತಿ ಮಂಧಾನ ಹಾಗೂ ಗ್ರೇಸ್ ಹ್ಯಾರಿಸ್ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಕೇವಲ 12.1 ಓವರ್‌ಗಳಲ್ಲಿಯೇ ತಂಡಕ್ಕೆ ಗೆಲುವು ತಂದುಕೊಟ್ಟರು.









