ಬೆಂಗಳೂರು: ಕಳೆದ ವರ್ಷ ಸಂಭವಿಸಿದ ದುರಂತದ ಬಳಿಕ ಎಮ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M. Chinnaswamy Stadium) ಐಪಿಎಲ್ ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಇದ್ದ ಅನಿಶ್ಚಿತತೆಗೆ ತೆರೆಬಿದ್ದಿದೆ. ರಾಜ್ಯ ಸರ್ಕಾರ ಸೋಮವಾರ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಲು ಷರತ್ತುಬದ್ಧ ಅನುಮತಿ ನೀಡಿದೆ.
ಗೃಹ ಸಚಿವ ಜಿ ಪರಮೇಶ್ವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕ್ರೀಡಾಂಗಣದ ಭದ್ರತೆ ಮತ್ತು ಮೂಲಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು. ಬಳಿಕ ಭದ್ರತಾ ಕ್ರಮಗಳನ್ನು ಬಲಪಡಿಸಿರುವ ಹಿನ್ನೆಲೆಯಲ್ಲಿ ಪಂದ್ಯಗಳನ್ನು ಆಯೋಜಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿದೆ.
ಕ್ರೀಡಾಂಗಣದಲ್ಲಿ ಹೊಸ ಪ್ರವೇಶ ದ್ವಾರಗಳು, ಅಗಲವಾದ ನಿರ್ಗಮನ ಮಾರ್ಗಗಳು ಹಾಗೂ ಜನಸಂದಣಿ ನಿಯಂತ್ರಣ ವ್ಯವಸ್ಥೆ ಸೇರಿದಂತೆ ಹಲವು ಭದ್ರತಾ ನವೀಕರಣಗಳನ್ನು ಮಾಡಲಾಗಿದೆ. ಉನ್ನತ ಮಟ್ಟದ ಸಮಿತಿಯ ವರದಿ ಆಧಾರದಲ್ಲಿ ಈ ಅನುಮತಿ ನೀಡಲಾಗಿದೆ.
ಈ ನಿರ್ಧಾರದಿಂದಾಗಿ ಬೆಂಗಳೂರಿನಲ್ಲಿ ಒಟ್ಟು 7 ಐಪಿಎಲ್ ಪಂದ್ಯಗಳು ನಡೆಯಲಿವೆ. ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ 5 ತವರು ಪಂದ್ಯಗಳು, ಒಂದು ಪ್ಲೇಆಫ್ ಪಂದ್ಯ ಹಾಗೂ ಮೇ 31ರಂದು ನಡೆಯಬಹುದಾದ ಫೈನಲ್ ಪಂದ್ಯಕ್ಕೂ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸುವ ಸಾಧ್ಯತೆ ಇದೆ.
ಐಪಿಎಲ್ 19ನೇ ಆವೃತ್ತಿ ಮಾರ್ಚ್ 28ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.
ಸಭೆಯಲ್ಲಿ ಡಿಜಿಪಿ ಎಂ ಎ ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಕ್ರೀಡಾಂಗಣದ ಸುತ್ತಮುತ್ತ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಿ ಕಟ್ಟುನಿಟ್ಟಿನ ಭದ್ರತೆ ಒದಗಿಸಲು ಹಾಗೂ ಪ್ರೇಕ್ಷಕರಿಗೆ ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಸೂಚಿಸಲಾಗಿದೆ.
ಐಪಿಎಲ್ ಆರಂಭಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಸಿದ್ಧತೆಗಳನ್ನು ವೇಗಗೊಳಿಸಲಾಗುತ್ತಿದೆ.























