ಮುಂಬೈ: ಐಸಿಸಿ 19ರ ವಯೋಮಿತಿಯ ಏಕದಿನ ಕ್ರಿಕೆಟ್ ವಿಶ್ವಕಪ್ ಪ್ರಶಸ್ತಿಯನ್ನು ದಾಖಲೆಯ ಆರನೇ ಬಾರಿ ಗೆದ್ದುಕೊಂಡಿರುವ ಭಾರತದ ಕಿರಿಯರ ತಂಡವನ್ನು ನೀತಾ ಎಂ. ಅಂಬಾನಿ ಅವರು ಅಭಿನಂದಿಸಿದ್ದಾರೆ. ʻವಿಶ್ವಕಪ್ ಗೆದ್ದ ನಮ್ಮ ಹುಡುಗರ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಇದು ನಿಜವಾಗಿಯೂ ಐತಿಹಾಸಿಕ ಮತ್ತು ಸ್ಫೂರ್ತಿದಾಯಕ ಸಾಧನೆ’ ಎಂದು ಹೇಳಿದರು.
ಜಿಂಬಾಬ್ವೆಯ ಹರಾರೆಯಲ್ಲಿ ಶುಕ್ರವಾರ ನಡೆದ ಐಸಿಸಿ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಯುಷ್ ಮಹಾತ್ರೆ ನೇತೃತ್ವದ ಭಾರತ ತಂಡ ಇಂಗ್ಲೆಂಡ್ ಎದುರು 100 ರನ್ಗಳಿಂದ ಭರ್ಜರಿ ಗೆಲುವು ದಾಖಲಿಸಿ ಟ್ರೋಫಿಗೆ ಮುತ್ತಿಟ್ಟಿತು. ಈ ಮೂಲಕ ಅಜೇಯವಾಗಿ ಪ್ರಶಸ್ತಿ ಜಯಿಸಿದ ಸಾಧನೆಯನ್ನೂ ಮಾಡಿತು.
‘ನೀವು ನಿಮ್ಮ ವಯಸ್ಸನ್ನು ಮೀರಿದ ಧೈರ್ಯ, ಶಿಸ್ತು ಮತ್ತು ನಂಬಿಕೆಯೊಂದಿಗೆ ಆಡಿದ್ದೀರಿ. ಈ ಗೆಲುವು ಬರೀ ಟ್ರೋಫಿಯದ್ದಲ್ಲ. ಇದು ಯುವ ಭಾರತದ ಚೈತನ್ಯದ ಪ್ರಬಲ ಸಂಕೇತವಾಗಿದೆ. ನಿರ್ಭೀತಿಯ ಮಹತ್ವಾಕಾಂಕ್ಷೆ, ಸಂಘಟಿತ ಒಗ್ಗಟ್ಟು ಮತ್ತು ಶ್ರೇಷ್ಠತೆಯ ಅನ್ವೇಷಣೆಯಲ್ಲಿ ನಿರಂತರತೆಯನ್ನೂ ಪ್ರತಿಬಿಂಬಿಸಿದೆ’ ಎಂದು ನೀತಾ ಅಂಬಾನಿ ಅವರು ಪ್ರಶಂಸಿಸಿದರು.
ಈ ಗೆಲುವು ಮುಂದಿನ ಹಲವು ದೊಡ್ಡ ಮೈಲಿಗಲ್ಲುಗಳ ಆರಂಭವಾಗಲಿ’ ಎಂದು ಹಾರೈಸಿರುವ ನೀತಾ ಅಂಬಾನಿ ಅವರು, ನಿಮ್ಮ ಕಾರಣದಿಂದಾಗಿ ಭಾರತೀಯ ಕ್ರಿಕೆಟ್‌ನ ಭವಿಷ್ಯವು ಉಜ್ವಲವಾಗಿ ಹೊಳೆಯುತ್ತಿದೆ ಎಂದರು.
ಯುವ ಬ್ಯಾಟಿಂಗ್ ಸೆನ್ಸೇಶನ್ ವೈಭವ್ ಸೂರ್ಯವಂಶಿ (175 ರನ್, 80 ಎಸೆತ, 15 ಬೌಂಡರಿ, 15 ಸಿಕ್ಸರ್) ಸ್ಫೋಟಕ ಶತಕದ ಸಾಹಸದಿಂದ ಭಾರತ ಕಿರಿಯರ ತಂಡ 50 ಓವರ್ಗಳಲ್ಲಿ 9 ವಿಕೆಟ್ಗೆ 411 ರನ್ ಕಲೆಹಾಕಿತು. ಪ್ರತಿಯಾಗಿ ಇಂಗ್ಲೆಂಡ್ ತಂಡ 40.2 ಓವರ್ಗಳಲ್ಲಿ 311 ರನ್ಗಳಿಗೆ ಆಲೌಟ್ ಆಗಿ ಸೋಲು ಅನುಭವಿಸಿತು. ಭಾರತ 2022ರ ಕಿರಿಯರ ವಿಶ್ವಕಪ್ನಲ್ಲೂ ಇಂಗ್ಲೆಂಡ್ ವಿರುದ್ಧವೇ ಫೈನಲ್ನಲ್ಲಿ ಗೆಲುವು ಸಾಧಿಸಿ ಪ್ರಶಸ್ತಿ ಒಲಿಸಿಕೊಂಡಿತ್ತು. 14 ವರ್ಷದ ವೈಭವ್ ಸೂರ್ಯವಂಶಿ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗಳಿಗೆ ಭಾಜನರಾದರು.






















