ಮುಂಬೈ: ಐಪಿಎಲ್ 2026 ಟೂರ್ನಿಯ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ನಡುವಿನ ಹಣಾಹಣಿಯ ವೇಳೆ ಮೈದಾನದ ಘಟನೆಯೊಂದು ಚರ್ಚೆಗೆ ಕಾರಣವಾಗಿದೆ. ಆರ್‌ಸಿಬಿ ತಂಡದ ಆಟಗಾರ ಟಿಮ್ ಡೇವಿಡ್ ಐಪಿಎಲ್ ನಿಯಮ ಉಲ್ಲಂಘಿಸಿದ ಕಾರಣ ಅವರಿಗೆ ಪಂದ್ಯ ಶುಲ್ಕದ 25% ದಂಡ ವಿಧಿಸಲಾಗಿದೆ.
ಪಂದ್ಯದ ವೇಳೆ ಆರ್‌ಸಿಬಿ ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುತ್ತಿದ್ದಾಗ, ಟಿಮ್ ಡೇವಿಡ್ ಭರ್ಜರಿ ಶಾಟ್‌ಗಳನ್ನು ಹೊಡೆದು ಗಮನ ಸೆಳೆದರು. ಆದರೆ ಆ ಓವರ್‌ನಲ್ಲಿ ಬೌಲಿಂಗ್ ಮಾಡಲಾದ ಚೆಂಡು ಒದ್ದೆಯಾಗಿದ್ದು ಅದರ ಆಕಾರದಲ್ಲಿ ಬದಲಾವಣೆ ಕಂಡುಬಂದ ಕಾರಣ ಅಂಪೈರ್‌ಗಳು ಚೆಂಡನ್ನು ಬದಲಾಯಿಸಲು ನಿರ್ಧರಿಸಿದರು.
ಈ ವೇಳೆ ಮೈದಾನಕ್ಕೆ ತರಲಾದ ಹೊಸ ಚೆಂಡುಗಳಲ್ಲಿ ಒಂದನ್ನು ಟಿಮ್ ಡೇವಿಡ್ ತೆಗೆದುಕೊಂಡು ಅಂಪೈರ್‌ಗಳು ಮರಳಿ ಕೇಳಿದರೂ ತಕ್ಷಣ ಹಿಂತಿರುಗಿಸಲಿಲ್ಲ. ಅಂಪೈರ್‌ಗಳ ಸೂಚನೆಗಳನ್ನು ಪಾಲಿಸದೇ ಆಟಗಾರ ಡೇವಿಡ್ ಮುಂದುವರಿಸಿದ ಈ ವರ್ತನೆ ಐಪಿಎಲ್ ನೀತಿ ಸಂಹಿತೆಯ ಸೆಕ್ಷನ್ 2.4 ಉಲ್ಲಂಘನೆಯಾಗಿ ಪರಿಗಣಿಸಲಾಗಿದೆ.
ನಿಯಮ ಪ್ರಕಾರ, ಅಂಪೈರ್ ಸೂಚನೆಗಳನ್ನು ಪಾಲಿಸದ ಆಟಗಾರರಿಗೆ ಪಂದ್ಯ ಶುಲ್ಕದ 25% ದಂಡ ಹಾಗೂ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗುತ್ತದೆ. ಅದೇ ರೀತಿಯಲ್ಲಿ ಟಿಮ್ ಡೇವಿಡ್‌ಗೂ ಈ ಶಿಕ್ಷೆ ವಿಧಿಸಲಾಗಿದೆ. ನಂತರ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡು ಪಂದ್ಯ ರೆಫರಿಯ ತೀರ್ಪನ್ನು ಅಂಗೀಕರಿಸಿದ್ದಾರೆ.
ಇದೇ ಪಂದ್ಯದಲ್ಲಿ ನಿಧಾನಗತಿಯ ಓವರ್ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಕೂಡ ₹12 ಲಕ್ಷ ದಂಡ ವಿಧಿಸಲಾಗಿದೆ. ಇದು ಈ ಸೀಸನ್‌ನ ಅವರ ಮೊದಲ ತಪ್ಪಾಗಿರುವುದರಿಂದ ಈ ಪ್ರಮಾಣದ ದಂಡ ವಿಧಿಸಲಾಗಿದೆ.























