Home Advertisement
Home ಕ್ರೀಡೆ T20 World Cup: ಭಾರತಕ್ಕೆ ಗೆಲುವಿನ ಸೂರ್ಯೋದಯ

T20 World Cup: ಭಾರತಕ್ಕೆ ಗೆಲುವಿನ ಸೂರ್ಯೋದಯ

0
24

ಮುಂಬೈ: ಟಿ20 ವಿಶ್ವಕಪ್‌ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ನಾಯಕ ಸೂರ್ಯಕುಮಾರ ಯಾದವ್‌ ಅಬ್ಬರಿಸಿದ್ದಾರೆ. ಆರಂಭದಲ್ಲಿಯೇ ಸಂಕಷ್ಟಕ್ಕೆ ಸಿಲುಕಿದ್ದ ಭಾರತ ತಂಡವನ್ನು ಉತ್ತಮ ಮೊತ್ತಕ್ಕೆ ಕೊಂಡೊಯ್ಯದಿದ್ದಾರೆ.

ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಮೋನಾಂಕ್ ಪಟೇಲ್ ಮುಂದಾಳತ್ವದ ಅಮೆರಿಕ ಪಡೆ ಆರಂಭದಲ್ಲಿ ಭಾರತ ತಂಡದ ಮೇಲೆ ಸವಾರಿ ಮಾಡಿ ಆಘಾತ ನೀಡಿದರೂ, ಇನ್ನಿಂಗ್ಸ್ ಅಂತ್ಯದಲ್ಲಿ ಮಾತ್ರ ನಡೆದಿದ್ದು ಭಾರತ ತಂಡದ ಅಬ್ಬರವೇ.

ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ಮೊದಲ ಪವರ್‌ಪ್ಲೇನಲ್ಲೇ ಆಘಾತದ ಮೇಲೊಂದು ಆಘಾತ ಅನುಭವಿಸಿತು. ಸ್ಫೋಟಕ ಬ್ಯಾಟಿಂಗ್‌ನಿಂದಲೇ ಗಮನ ಸೆಳೆಯುತ್ತಿದ್ದ ಅಭಿಷೇಕ್ ಶರ್ಮಾ ಅವರನ್ನು ಗುರಿಯನ್ನಾಗಿಸಿದ್ದ ಅಮೆರಿಕನ್ನರು, ಇನ್ನಿಂಗ್ಸ್‌ನ 2ನೇ ಓವರ್‌ನಲ್ಲೇ ಶೂನ್ಯಕ್ಕೆ ಔಟ್ ಮಾಡಿದರು. ಸಾಲದೆಂಬಂತೆ ಉತ್ತಮವಾಗಿ ಆಡುತ್ತಿದ್ದ ಇಶನ್ ಕಿಶನ್ ಕೂಡ 16 ಎಸೆತಗಳಲ್ಲಿ 20 ರನ್‌ಗಳಷ್ಟೇ ಗಳಿಸಿ ವ್ಯಾನ್ ಚಾಕ್ವೆಕ್ ಬೌಲಿಂಗ್‌ನಲ್ಲಿ ಮಿಲಿಂದ್ ಕುಮಾರ್‌ಗೆ ಕ್ಯಾಚ್ ನೀಡಿದರು.

25 ರನ್‌ಗಳಿಸಿದ್ದ 3ನೇ ಕ್ರಮಾಂಕದ ಆಟಗಾರ ತಿಲಕ್ ವರ್ಮಾ ಅದೇ ಓವರ್‌ನಲ್ಲಿ ಮೋನಾಂಕ್ ಪಟೇಲ್‌ಗೆ ಕ್ಯಾಚ್ ನೀಡುತ್ತಿದ್ದಂತೆ ಭಾರತೀಯರ ಪಾಳಯದಲ್ಲಿ ಆತಂಕ ಆರಂಭವಾಗಿತ್ತು. ಶಿವಂ ದುಬೆ ಕೂಡ ವ್ಯಾನ್ ಚಾಕ್ವೆಕ್‌ಗೆ ಅದೇ ಓವರ್‌ನ ಕೊನೆಯ ಎಸೆತದಲ್ಲಿ ಔಟ್ ಮಾಡಿದರು

ರಿಂಕು ಸಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ಕ್ರಮವಾಗಿ 6 ಮತ್ತು 5 ರನ್‌ಗಳಿಸಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಇದರಿಂದ ಟೀಮ್ ಇಂಡಿಯಾ ಕೇವಲ 77 ರನ್‌ಗಳಿಗೆ ತನ್ನ ಪ್ರಮುಖ 6 ಮಂದಿ ಬ್ಯಾಟರ್‌ಗಳನ್ನು ಕಳೆದುಕೊಂಡಿತು.

ಭಾರತ ತಂಡದಲ್ಲಿ ಒಬ್ಬೊಬ್ಬರೇ ವಿಕೆಟ್ ಉಳಿಸಿಕೊಳ್ಳದೇ ಔಟಾಗುತ್ತಿದ್ದಾಗ, ಸೂರ್ಯ ಮಾತ್ರ ಏಕಾಂಗಿಯಾಗಿ ಹೋರಾಡಿದರು. 36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸೂರ್ಯ ನಂತರದ 13 ಎಸೆತಗಳಲ್ಲಿ 34 ರನ್ ಗಳಿಸಿದರು. ಅದರಲ್ಲೂ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ 21 ರನ್‌ಗಳನ್ನು ಬಾರಿಸಿದ್ದರಿಂದ, ಭಾರತ 160ರ ಗಡಿ ದಾಟಿತು.

ಅಮೆರಿಕಗೆ ಭಾರತದ ತಿರುಗೇಟು: ಇನ್ನು 162 ರನ್‌ಗಳ ಗುರಿಯನ್ನು ಬೆನ್ನಟ್ಟಲು ಕಣಕ್ಕಿಳಿದ ಅಮೆರಿಕ ಮೊದಲ 20 ಎಸೆತಗಳಲ್ಲೇ 3 ವಿಕೆಟ್ ಕಳೆದುಕೊಂಡಿತು. ಬಳಿಕ ಮಿಲಿಂದ್ ಕುಮಾರ್ ಮತ್ತು ಸಂಜಯ್ ಕೃಷ್ಣಮೂರ್ತಿ ಜೋಡಿ 58 ರನ್‌ಗಳ ಜತೆಯಾಟ ನಡೆಸಿ ತಂಡವನ್ನು ಸಂಕಷ್ಟದಿಂದ ಹೊರತರುವ ಪ್ರಯತ್ನ ಮಾಡಿದರು. ಆಗ ವರುಣ ಚಕ್ರವರ್ತಿ ಎಸೆತದಲ್ಲಿ ಮಿಲಿಂದ್ ಕುಮಾರ್ (34) ವಿಕೆಟ್‌ ಒಪ್ಪಿಸಿ ಹೊರನಡೆದರು.

ಸಂಜಯ್ ಕೃಷ್ಣಮೂರ್ತಿ (37) ಮತ್ತು ಶುಭಂ ರಂಜನೆ (37) ಅವರ ಹೋರಾಟ ಕೂಡ ವ್ಯರ್ಥವಾಯಿತು. ಈ ಮೂವರು ಆಟಗಾರರನ್ನು ಹೊರತುಪಡಿಸಿದರೆ ಉಳಿದಂತೆ ಯಾವೊಬ್ಬ ಆಟಗಾರನೂ ಕೂಡ ಒಂದಂಕಿಯನ್ನು ದಾಟದಿರುವುದು ಅಮೆರಿಕ ತಂಡದ ಸೋಲಿಗೆ ಕಾರಣವಾಯಿತು.

Previous articleಕರ್ನಾಟಕ ಮೂಲದ ಒಂದೇ ಕುಟುಂಬದ ನಾಲ್ವರು ಬಿಹಾರದಲ್ಲಿ ಆತ್ಮಹತ್ಯೆ