Home Advertisement
Home ಕ್ರೀಡೆ ಭಾರತಕ್ಕೆ ಮತ್ತೊಂದು ವಿಶ್ವಕಪ್‌ ಕಿರೀಟ

ಭಾರತಕ್ಕೆ ಮತ್ತೊಂದು ವಿಶ್ವಕಪ್‌ ಕಿರೀಟ

0
70

ಹರಾರೆ: ವೈಭವ್ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್ ನೆರವಿನಿಂದಾಗಿ ಅಂಡರ್ – 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು 100 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಟಾಸ್‌ ಗೆದ್ದು ಮೊದಲ ಬ್ಯಾಟಿಂಗ್‌ ಮಾಡಿದ ಭಾರತ ನಿಗದಿತ 50 ಓವರ್‌ಗಳಲ್ಲಿ ಬರೋಬ್ಬರಿ 411 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ 40.2 ಓವರ್‌ಗಳಲ್ಲಿ 311 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡು ಸೋಲೊಪ್ಪಿಕೊಂಡಿತು.

ದಾಖಲೆಯ ರನ್:‌ ಅಂಡರ್‌ 19 ವಿಶ್ವಕಪ್ ಫೈನಲ್​ನಲ್ಲಿಯೇ ಅತಿದೊಡ್ಡ ಮೊತ್ತ ಕಲೆಹಾಕಿದ ವಿಶ್ವ ದಾಖಲೆಯನ್ನು ಭಾರತ ನಿರ್ಮಿಸಿದೆ. ಇದುವರೆಗೂ ವಿಶ್ವಕಪ್ ಫೈನಲ್‌ ಇತಿಹಾಸದಲ್ಲಿ ಇದುವರೆಗೂ ಯಾವ ತಂಡವೂ ಕೂಡ 300 ರನ್​ಗಳ ಗಡಿಯನ್ನು ತಲುಪಿರಲಿಲ್ಲ. ಭಾರತ 400ರ ಗಡಿ ದಾಟಿ ನೂತನ ದಾಖಲೆ ನಿರ್ಮಿಸಿದೆ.

ವೈಭವ್‌ ಸ್ಫೋಟಕ ಬ್ಯಾಟಿಂಗ್:‌ ಆರಂಭಿಕರಾಗಿ ಮೈದಾನಕ್ಕಿಳಿದ ವೈಭವ್‌ ಸೂರ್ಯವಂಶಿ ಇಂಗ್ಲೆಂಡ್‌ ಬೌಲರ್‌ಗಳನ್ನು ಮನಸೋಇಚ್ಛೆ ಬಾರಿಸಿದರು. ಕೇವಲ 55 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಫೈನಲ್ ಪಂದ್ಯವೊಂದರಲ್ಲಿ ಅತಿ ವೇಗದ ಶತಕ ಸಿಡಿಸಿದ ದಾಖಲೆಗೂ ವೈಭವ್ ಭಾಜನರಾದರು.‌ ಕೇವಲ 80 ಎಸೆತಗಳಲ್ಲಿ 175 ರನ್ ಸಿಡಿಸಿ ವಿಶ್ವದಾಖಲೆ ಬರೆದರು.

ಭಾರತ 6ನೇ ಬಾರಿಗೆ ಚಾಂಪಿಯನ್: 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ 6ನೇ ಬಾರಿಗೆ ಟೀಮ್ ಇಂಡಿಯಾ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 2000 ರಲ್ಲಿ ಮೊದಲ ಬಾರಿಗೆ ಭಾರತ ಚಾಂಪಿಯನ್‌ ಆಗಿದ್ದು, ನಂತರ 2008, 2012, 2018 ಹಾಗೂ 2022 ರಲ್ಲಿ ವಿಶ್ವಕಪ್‌ನಲ್ಲಿ ಪ್ರಶಸ್ತಿ ಎತ್ತಿ ಹಿಡಿದಿತ್ತು. ಈ ಬಾರಿ ಆಯುಷ್ ಮ್ಹಾತ್ರೆ ನಾಯಕತ್ವದಲ್ಲಿ ಚಾಂಪಿಯನ್‌ ಆಗುವ ಮೂಲಕ ಭಾರತ 6 ಬಾರಿ ವಿಶ್ವಕಪ್‌ ಗೆದ್ದ ಮೊದಲ ತಂಡ ಎಂಬ ದಾಖಲೆ ಬರೆದಿದೆ.

Previous article14 ಹೆಚ್ಚುವರಿ ರೈಲುಗಳ ಕಾರ್ಯಾಚರಣೆಗೆ ನೈರುತ್ಯ ರೈಲ್ವೆ ಪ್ರಸ್ತಾವನೆ
Next articleಚಿತ್ರ ನಿರ್ದೇಶಕ ಆರ್. ಚಂದ್ರುಗೆ ಗೌರವ ಡಾಕ್ಟರೇಟ್