ಕತ್ತಲೆಯ ಪುಟಗಳಲಿ ದೀಪಗಳ ಸಾಲು: ಬೆಳಕಿನ ಆರಾಧನೆ ದೀಪಾವಳಿ

0
3
ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಾಪ್ತಾಹಿಕ ಸೌರಭದಲ್ಲಿ ಪ್ರಕಟವಾದ ಲೇಖನ

ನಿಲ್ಲದೆ ಸುತ್ತುತ್ತಿರುವ ಋತುಮಾನವು ಮತ್ತೊಂದು ಬೆಳಕಿನ ಹಬ್ಬವನ್ನು ನಮ್ಮೆದುರು ತಂದಿದೆ. ಸಂಭ್ರಮ ಸಡಗರಗಳ ಈ ಹಬ್ಬವು ಭಾರತೀಯ ಸಂಸ್ಕೃತಿಯ ಪ್ರಮುಖ ಆಚರಣೆಗಳಲ್ಲೊಂದು. ಅಂತರಂಗದ ಕತ್ತಲನ್ನು ನೀಗಿಸುವ ಈ ದೀಪಾವಳಿಯ ಕುರಿತ ಕಿರುನೋಟ ಇಲ್ಲಿದೆ.

ಸುರೇಶ ಗುದಗನವರ ಧಾರವಾಡ

ಭಾರತೀಯ ಸಂಸ್ಕೃತಿಯಲ್ಲಿ ಸಂಜೆಯ ಹೊತ್ತಿಗೆ ದೀಪ ಬೆಳಗುವ ಸಂಪ್ರದಾಯವಿದೆಯಷ್ಟೇ. ಹೆಣ್ಣುಮಕ್ಕಳು ಸಂಜೆಯಾಗುತ್ತಿದ್ದಂತೆ ಮನೆಯ ಒಳಗಡೆ ದೀಪ ಹಚ್ಚಿ, ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪಾದಾ | ಶತ್ರುಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋsಸ್ತುತೇ || ಎಂಬ ಶ್ಲೋಕವನ್ನು ಹೇಳಿ ನಮಸ್ಕರಿಸುವ ಪರಿಪಾಠವಿದೆ. ಹೀಗೆಯೇ ಕತ್ತಲೆಯನ್ನು, ತಮಸ್ಸನ್ನು, ಅಜ್ಞಾನ – ಅಂಧಕಾರವನ್ನು ಹೋಗಲಾಡಿಸಲು ಬಹಳ ಹಿಂದಿನಿಂದಲೂ ಪ್ರಯತ್ನಿಸಿರುವುದನ್ನು ಗುರುತಿಸಬಹುದು.

ಅಂತೆಯೇ ಬೆಳಕೇ ಪರಬ್ರಹ್ಮ ಮತ್ತು ಪರಂಜ್ಯೋತಿ. ಸೂರ್ಯ, ಚಂದ್ರ, ನಕ್ಷತ್ರ, ಬೆಂಕಿ, ವಿದ್ಯುತ್, ದೀಪ ಇವುಗಳೆಲ್ಲ ಪ್ರಾಕೃತಿಕವಾಗಿರುವ ಜ್ಯೋತಿಗಳು. ನಾವು ಮನೆಗಳಲ್ಲಿ ಹಚ್ಚುವ ದೀಪಗಳು ಆ ಪರಂಜ್ಯೋತಿಯ ಪ್ರತೀಕಗಳು. ನಂದಾದೀಪಗಳ ಬೆಳಗುವಿಕೆಯಿಂದ ಜ್ಯೋತಿತತ್ಸವವು ಪೂಜೆಗೊಳ್ಳುತ್ತದೆ. ದೀಪಾವಳಿಯು ಮುಖ್ಯವಾಗಿ ದೀಪಗಳ ಉತ್ಸವ. ದೀಪವೆಂದರೆ ಬರೀ ಬೆಳಕಲ್ಲ. ಅಜ್ಞಾನ, ಅಂಧಕಾರವನ್ನು ಅಳಿಸಿ, ಜ್ಞಾನದೀವಿಗೆ ಹೊತ್ತಿಸಿ, ಜ್ಞಾನದಿಂದ ಬೆಳಗಬೇಕು ಎನ್ನುವುದೇ ದೀಪಗಳ ಸಂದೇಶ.

ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ. ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ. ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ ಎನ್ನುವ ಬಸವಣ್ಣನವರ ವಚನದಂತೆ ನಮ್ಮಲ್ಲಿರುವ ಅಜ್ಞಾನದ ಕತ್ತಲೆಯನ್ನು ಜ್ಞಾನದ ಬೆಳಕಿನಿಂದ ನಿವಾರಿಸಿಕೊಂಡು, ಅಂತರಂಗದ ಜ್ಯೋತಿಯನ್ನು ಬೆಳಗಿಸಿ ಪರಮಾನಂದವನ್ನು ಪ್ರಾಪ್ತಿ ಮಾಡಿಕೊಳ್ಳುವುದೇ ದೀಪಾವಳಿಯ ಆಚರಣೆಯ ಉದ್ದೇಶ.

ದೀಪಾವಳಿ ಎಂದರೆ ದೀಪಗಳ ಸಾಲು ಎಂದರ್ಥ. ಶರತ್ಕಾಲದಲ್ಲಿ ಆಕಾಶ ನಿರ್ಮಲವಾಗಿರುತ್ತದೆ. ಗಾಳಿಯ ಬಡಿತವಿರುವುದಿಲ್ಲ. ಆದ್ದರಿಂದ ಮನೆಯ ಒಳಗಡೆ, ಹೊರಗಡೆ ಸಾಲುಸಾಲಾಗಿ ದೀಪಗಳನ್ನು ಹಚ್ಚಬಹುದು. ತೈಲದೀಪಗಳ ಅಂದವೇ ಅಂದ. ಅವುಗಳ ಮಂದ ಪ್ರಕಾಶಕ್ಕೆ, ತಿಳಿಗಾಳಿಗೆ ಬಳುಕುವ ಬೆಳಕಿನ ಕುಡಿಗಳಿಗೆ ತಮ್ಮದೇ ವಿಶೇಷ ಶೋಭೆ. ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ.

ಕೇಡಿನ ಮೇಲೆ ಒಳಿತಿನ ವಿಜಯ: ಶತಶತಮಾನಗಳಿಂದ ಆಚರಿಸಲ್ಪಡುತ್ತಿರುವ ದೀಪಾವಳಿ ಹಬ್ಬದ ಬಗ್ಗೆ ಪ್ರಾಚೀನ ಶಿಲಾಶಾಸನಗಳಲ್ಲಿಯೂ ಉಲ್ಲೇಖವಿರುವುದನ್ನು ಗಮನಿಸಬಹುದು. ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಮರಳಿದ ದಿನವಿದು. ಶ್ರೀಕೃಷ್ಣನು ನರಕಾಸುರನನ್ನು ಕೊಂದ ದಿನವೂ ಹೌದು. ಬಲಿ ಚಕ್ರವರ್ತಿಗೆ ಮಹಾವಿಷ್ಣುವು ವರ ನೀಡಿದ ನೆನಪಿಗಾಗಿಯೂ ಈ ಹಬ್ಬವನ್ನು ಆಚರಿಸಲಾಗುತ್ತದೆ.

ರಾಮನು ಅಯೋಧ್ಯೆಗೆ ಮರಳಿದಾಗ ಜನರು ದೀಪಗಳಿಂದ ಸ್ವಾಗತಿಸಿದರು. ಕೃಷ್ಣನು ನರಕಾಸುರನನ್ನು ಸಂಹರಿಸಿದ ನಂತರ, ಜನರು ದೀಪಗಳನ್ನು ಬೆಳಗಿಸಿದರು. ಮಹಾವಿಷ್ಣುವು ಬಲಿ ಚಕ್ರವರ್ತಿ ಭೂಮಿಗೆ ಬಂದು ಜನರನ್ನು ನೋಡಿಕೊಳ್ಳುವ ವರ ನೀಡಿದನು. ಆ ನೆನಪಿಗಾಗಿ ಬಲಿಪಾಡ್ಯಮಿಯನ್ನು ಆಚರಿಸಲಾಗುತ್ತದೆ. ಐಶ್ವರ್ಯದ ದೇವತೆಯಾದ ಮಹಾಲಕ್ಷ್ಮೀ ದೇವಿಯನ್ನು ಪೂಜಿಸುವ ಮೂಲಕ ದೀಪಾವಳಿಯನ್ನು ಆಚರಿಸಲಾಗುತ್ತದೆ. ಒಟ್ಟಾರೆಯಾಗಿ ದೀಪಾವಳಿಯು ದುಷ್ಟತನದ ಮೇಲೆ ಒಳಿತಿನ ವಿಜಯವನ್ನು ಸಾರುತ್ತದೆ.

ಐದು ದಿನಗಳ ಸಡಗರದ ಹಬ್ಬ: ದೀಪಾವಳಿ ಎಂಬುದು ಐದು ದಿನಗಳ ಸಂಭ್ರಮ ಸಡಗರದ ಹಬ್ಬ. ದೀಪಾವಳಿ ಹಬ್ಬ ಆರಂಭವಾಗುವುದೇ ಆಶ್ವಯುಜ ಮಾಸ ಕೃಷ್ಣಪಕ್ಷದ ತ್ರಯೋದಶಿಯಂದು. ಇದನ್ನು ನೀರು ತುಂಬುವ ಹಬ್ಬ ಎನ್ನುತ್ತಾರೆ. ಈ ದಿನದಂದು ಮನೆಯ ಹೆಣ್ಣುಮಕ್ಕಳು ಮನೆಯಲ್ಲಿಯ ಎಲ್ಲ ಹಂಡೆ, ಕೊಡಗಳನ್ನು ಚೆನ್ನಾಗಿ ಶುಭ್ರಗೊಳಿಸಿ, ಅಲಂಕರಿಸಿ ನೀರು ತುಂಬಿಸಿಡುತ್ತಾರೆ. ಆದರೆ ಇಂದೆಲ್ಲ ಹಂಡೆಗಳೇ ಕಾಣೆಯಾಗಿರುವಾಗ, ಸಾಂಕೇತಿಕವಾಗಿ ಮನೆ ಯಲ್ಲಿರಬಹುದಾದ ಬಾಯ್ಲರ್ ಅಥವಾ ಗೀಸರ್‌ಗಳಿಗೆ ಅಲಂಕಾರ ಮಾಡುತ್ತಾರೆ.

ದೀಪಾವಳಿಯ ಎರಡನೇ ದಿನವಾದ ನರಕ ಚತುದರ್ಶಿಯಂದು ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಮೈತುಂಬ ಚೆನ್ನಾಗಿ ಎಣ್ಣೆ ಹಚ್ಚಿ, ಅಭ್ಯಂಜನ ಮಾಡುವ ರೂಢಿ ಇದೆ. ಮೂರನೆಯ ದಿನ ಅಮಾವಾಸ್ಯೆ. ಪಿತೃಪಕ್ಷ ದಲ್ಲಿ ಪಿತೃ ತರ್ಪಣ ಕೊಡಲು ಸಾಧ್ಯವಾಗದ ವರು ಈ ದಿನ ತಮ್ಮ ಪಿತೃಗಳಿಗೆ ತರ್ಪಣ ಕೊಟ್ಟು ಪಿತೃಋಣವನ್ನು ತೀರಿಸಿಕೊಳ್ಳುತ್ತಾರೆ. ಎಳ್ಳು ಹೋಳಿಗೆ, ಕರೆಗಡಬು ಆ ದಿನದ ವೈಶಿಷ್ಟ್ಯ. ಅಂದಿನ ರಾತ್ರಿ ತಮ್ಮಲ್ಲಿದ್ದ ಎಲ್ಲ ಆಭರಣಗಳು ಮತ್ತು ಧನಕನಕಾದಿಗಳಿಂದ ಮಹಾಲಕ್ಷ್ಮಿಯನ್ನು ಸಿಂಗರಿಸಿ ಪೂಜೆ ಮಾಡುತ್ತಾರೆ. ಎಲ್ಲರಿಗೂ ಸಿಹಿ ತಿಂಡಿಗಳನ್ನು ಹಂಚಿ ಸಂಭ್ರಮಸುತ್ತಾರೆ.

ಬಲಿಪಾಡ್ಯಮಿ: ದೀಪಾವಳಿಯ ನಾಲ್ಕನೇ ದಿನವೇ ಬಲಿಪಾಡ್ಯಮಿ. ಅಂದು ಜೇಡಿಮಣ್ಣಿನಲ್ಲಿ ಅಥವಾ ಆಕಳ ಸೆಗಣಿಯಲ್ಲಿ ಮಾಡಿದ ಬಲಿ ಹಾಗೂ ಅವನ ಹೆಂಡತಿ ವಿಂಧ್ಯಾವಳಿಯ ಮೂರ್ತಿಗಳನ್ನು ಹೂವುಗಳಿಂದ ಅಲಂಕರಿಸಿ ಪೂಜಿಸಲಾಗುತ್ತದೆ. ಕತ್ತಲಾಗುತ್ತಿದ್ದಂತೆ ಸಾಲುದೀಪಗಳನ್ನು ಬೆಳಗುತ್ತಾರೆ. ದೀಪಾವಳಿ ಐದನೇ ದಿನ ಸೋದರ ಬಿದಿಗೆ ಅಥವಾ ಭ್ರಾತೃ ದ್ವಿತೀಯಾ ಎಂದು ಆಚರಿಸಲಾಗುತ್ತದೆ.

ಈ ದಿನ ಯಮ ತನ್ನ ತಂಗಿ ಯಮಿಯ ಮನೆಗೆ ಭೇಟಿ ಕೊಡುತ್ತಾನೆಂಬ ನಂಬಿಕೆ ಇರುವುದರಿಂದ ಬಹುತೇಕ ಸಹೋದರರು ತಮ್ಮ ಸಹೋದರಿಯರಿರ ಮನೆಗೆ ಭೇಟಿ ನೀಡುತ್ತಾರೆ. ಹಾಗೆ ಮನೆಗೆ ಬಂದ ಸಹೋದರನಿಗೆ ಸಹೋದರಿ ತಿಲಕವಿಟ್ಟು, ಸಿಹಿ ತಿನ್ನಿಸಿ, ಆರತಿ ಮಾಡುವ ಸಂಪ್ರದಾಯವಿದೆ. ಉತ್ತರ ಭಾರತ ಹಾಗೂ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ದೀಪಾವಳಿಯ ಆಚರಣೆಗಳಲ್ಲಿ ವೈವಿಧ್ಯ ಹಾಗೂ ಭಿನ್ನತೆಗಳಿವೆ. ನರಕ ಚತುದರ್ಶಿಯಂದು ನರಕಾಸುರನ ಬೃಹತ್ ಪ್ರತಿಕೃತಿಯನ್ನು ದಹಿಸುವ ಆಚರಣೆ ಗೋವಾದಲ್ಲಿದೆ.

ಗುಜರಾತಿಗಳ ವರ್ಷ ದೀಪಾವಳಿಯ ಮೂಲಕ ಕೊನೆಗೊಳ್ಳುತ್ತದೆ. ದೀಪಾವಳಿಯ ನಂತರದ ದಿನದಂದು ಹೊಸ ವರ್ಷ ಅಡಿಯಿಡುತ್ತದೆ. ಮಹಾರಾಷ್ಟçದಲ್ಲಿ ಧನ ತೇರಸ್ ಆಚರಣೆಯ ಮೂಲಕ ಮೊದಲ ವೈದ್ಯ ಧನ್ವಂತರಿಯನ್ನು ಸ್ಮರಿಸಲಾಗುತ್ತದೆ. ದೀಪಾವಳಿ ಚಾ ಪಾಡ್ವಾ, ಭಾವ್ ಬೀಜ್ ಮತ್ತು ತುಳಸಿಹಬ್ಬ ಇಲ್ಲಿನ ವೈಶಿಷ್ಟ್ಯಗಳು. ಪಶ್ಚಿಮ ಬಂಗಾಳದಲ್ಲಿ ಕಾಳಿಯ ಆರಾಧನೆಗೆ ಪ್ರಾಧಾನ್ಯವಿದೆ. ಇದು ದುರ್ಗಾಪೂಜೆಯಷ್ಟೇ ಸಂಭ್ರಮದಿಂದ ನಡೆಯುತ್ತದೆ.

ಒಡಿಶಾದ ಜನರು ಸೆಣಬಿನ ಕಟ್ಟಿಗೆ ಸುಡುವ ಮೂಲಕ ಹಿರಿಯರನ್ನು ಸ್ಮರಿಸುತ್ತಾರೆ. ವಾರಾಣಸಿಯಲ್ಲಿ ದೇವತೆಗಳು ಗಂಗಾನದಿಯಲ್ಲಿ ಮುಳುಗುಹಾಕಲು ಬರುತ್ತಾರೆ ಎಂಬ ಪ್ರತೀತಿ ಇದೆ. ಹೀಗಾಗಿ ಗಂಗಾನದಿಯ ತಟದಲ್ಲಿ ಪ್ರಜ್ವಲಿಸುವ ದೀಪಗಳನ್ನು ಬೆಳಗಿಸಲಾಗುತ್ತದೆ. ತಮಿಳುನಾಡಿನಲ್ಲಿ ಎಣ್ಣೆ ಸ್ನಾನ ಮಾಡುವ ಸಂಪ್ರದಾಯವಿದೆ. ಇಲ್ಲಿನ ಜನ ದೀಪಾವಳಿಗೆಂದೇ ವಿಶೇಷವಾಗಿ ತಯಾರಿಸಲಾದ ಲೇಹ್ಯವನ್ನು ಸೇವಿಸುತ್ತಾರೆ.

ವಿವಿಧ ಮತಧರ್ಮಗಳಲ್ಲಿ ದೀಪಾವಳಿ: ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಸಮುದಾಯದವರು ಈ ಹಬ್ಬವನ್ನು ಬಹಳ ಸಡಗರದಿಂದ ಆಚರಿಸುತ್ತಾರೆ. ಸಿಂಗಾಪುರ, ಮಲೇಷ್ಯಾ, ಫಿಜಿ, ಮಾಟಿಪಸ್‌ನಲ್ಲಿ ಸಡಗರದಿಂದ ಆಚರಿಸುತ್ತಾರೆ. ನೇಪಾಳದಲ್ಲಿ ತಿಹಾರ್ ಎಂಬ ಹೆಸರಿನಲ್ಲಿ ಆಚರಣೆ ನಡೆಯುತ್ತದೆ. ಕೆನಡಾ, ಬ್ರಿಟನ್, ಟ್ರೆನಿಡಾಡ್ ಮತ್ತು ಟೊಬ್ಯಾಗೊ ದ್ವೀಪ ರಾಷ್ಟçಗಳು ಪ್ರತಿ ವರ್ಷ ದೀಪದ ಹಬ್ಬಕ್ಕೆ ಸಾಕ್ಷಿಯಾಗುತ್ತವೆ. ಸಿಕ್ಖ್ ಧರ್ಮದಲ್ಲಿಯೂ ದೀಪಾವಳಿಯನ್ನು ಪ್ರಮುಖ ಹಬ್ಬವನ್ನಾಗಿ ಆಚರಿಸುತ್ತಾರೆ.

ಸಿಕ್ಖ ಗುರುಗಳಾದ ಹರಗೋವಿಂದ ಸಿಂಗ್‌ರು ಗ್ವಾಲಿಯರ್‌ನ ಕೋಟೆಯಲ್ಲಿ ಬಂಧಿತರಾಗಿದ್ದ 52 ರಾಜರನ್ನು ಬಿಡಿಸಿ ತಂದ ದಿನವೆಂದು ಆಚರಿಸಲಾಗುತ್ತದೆ. ಅಲ್ಲದೆ ಜೈನಧರ್ಮದಲ್ಲಿ ಕಡೆಯ ತೀರ್ಥಂಕರ ಮಹಾವೀರರು ಕಾರ್ತಿಕ ಚತುದರ್ಶಿಯಂದು ಪಾವಾಪುರಿಯಲ್ಲಿ ಮೋಕ್ಷ ಹೊಂದಿದ ದಿನವಾಗಿ ದೀಪಾವಳಿಯನ್ನು ಆಚರಿಸುತ್ತಾರೆ. ಜೈನರಿಗೆ ಇದು ವರ್ಷದ ಪ್ರಾರಂಭ.

ಈ ಸಮಯದಲ್ಲಿ ಮಹಾವೀರರ ಉಪದೇಶಗಳನ್ನು ಪಠಣ ಮಾಡುವುದರ ಜೊತೆಗೆ ಕೆಲವರು ಮಹಾವೀರರ ನಿರ್ವಾಣ ಸ್ಥಳವಾದ ಬಿಹಾರ ರಾಜ್ಯದ ಪಾವಾಪುರಿಗೆ ಯಾತ್ರೆ ಕೈಗೊಳ್ಳುತ್ತಾರೆ. ಮಹಾವೀರನ ಜ್ಞಾನೋದಯದ ಸಂದರ್ಭವನ್ನು ಗುರುತಿಸಲು ಸ್ವರ್ಗ ಮತ್ತು ಭೂಮಿಗಳನ್ನು ದೀಪಗಳಿಂದ ಅಲಂಕರಿಸಲಾಗಿತ್ತು ಎಂಬುದು ಜೈನರ ನಂಬಿಕೆ.

ಪಟಾಕಿ ಎಂಬ ಮುಗಿಯದ ಆಕರ್ಷಣೆ: ದೀಪಾವಳಿ ಹಬ್ಬದ ವಿಶೇಷ ಆಕರ್ಷಣೆ ಪಟಾಕಿ ಸಿಡಿಸುವುದು. ಈ ದಿನ ಯುವಕರು ವಿವಿಧ ಬಗೆಯ ದೃಶ್ಯವೈಭವ ಹಾಗೂ ಶಬ್ದವೈಭವವನ್ನು ಉಂಟುಮಾಡುವ ಬಗೆಬಗೆಯ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುವುದು ಸಾಮಾನ್ಯ. ಬದಲಾದ ಕಾಲಘಟ್ಟದಲ್ಲಿ ಹಬ್ಬದ ಆಚರಣೆಗಿಂತ ಪಟಾಕಿಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಕಂಡುಬರುತ್ತದೆ.

ಪಟಾಕಿ ಸಿಡಿಸುವುದು ಪ್ರಿಯವಾದ ಕೆಲಸವಾದರೂ ಅದರಿಂದ ಇತ್ತೀಚಿನ ವರ್ಷಗಳಲ್ಲಿ ಆಗುತ್ತಿರುವ ಆಘಾತಗಳ ದೃಷ್ಟಿಯಿಂದ ಅವುಗಳನ್ನು ಸಿಡಿಸದಿರುವುದೇ ಕ್ಷೇಮಕರ. ಬೆಳಕಿನ ಹಬ್ಬ ಎಂದು ಜನಪ್ರಿಯವಾಗಿರುವ ದೀಪಾವಳಿಯು ಧರ್ಮ, ಸಂಸ್ಕೃತಿ, ಸಂಪ್ರದಾಯ, ಪುರಾಣಗಳ ಜೊತೆಗೆ ಬೆಸೆದುಕೊಂಡಿದೆ. ಸಂಬಂಧಗಳು ದೂರವಾಗುತ್ತಿರುವ ಈ ಕಾಲದಲ್ಲಿ ಎಲ್ಲರೂ ಒಟ್ಟಾಗಿ ಸೇರಿ, ಸಂತಸಪಡುವುದೇ ದೀಪಾವಳಿ. ಇದು ತ್ಯಾಗ, ಬಲಿದಾನಗಳನ್ನು ನೆನಪಿಸಿಕೊಳ್ಳುವ, ಇತಿಹಾಸ-ಪುರಾಣ ಕಥೆಗಳನ್ನು ಮೆಲುಕು ಹಾಕುವ ಹಬ್ಬವಾಗಬೇಕು. ನಾವೆಲ್ಲ ಖುಷಿಯಿಂದ, ಸಂಭ್ರಮ ಸಡಗರಗಳಿಂದ ದೀಪಾವಳಿಯನ್ನು ಸುರಕ್ಷಿತವಾಗಿ ಆಚರಿಸೋಣ.

Previous articleಹಬ್ಬಗಳು ಸಂಪ್ರದಾಯಗಳ ದಿಬ್ಬಣ ಹೊತ್ತೊಯ್ಯಲಿ

LEAVE A REPLY

Please enter your comment!
Please enter your name here