ಸಂಸ್ಕಾರದಿಂದ ಸದ್ಗುಣಿ ಸಾಧ್ಯ

0
22
Annadanishwara Swami

ಇದ್ದಿಲು ಕಪ್ಪಾಗಿದ್ದರೇನು?
ಅಗ್ನಿ ಸಂಗದಲಿ ಶುಭ್ರವಾಗಲಾರದೇನಯ್ಯ?
ಮಾನವ ದುರ್ಗುಣಿಯಾದರೇನು? ಸದ್ಗುಣ ಜ್ಞಾನ ಸಂಗದಿಂದ
ಶುದ್ಧನಾಗಲಾರನೇನಯ್ಯಾ? ಮೃಡಗಿರಿ ಅನ್ನದಾನೀಶ.

ಯಾವುದೇ ವಸ್ತುವನ್ನು ಅಗ್ನಿಯಲ್ಲಿ ಸುಟ್ಟಾಗ ಕಪ್ಪಾಗುವದರಿಂದ ಅದರಲ್ಲೂ ಕಟ್ಟಿಗೆಯನ್ನು ಸುಟ್ಟರೆ ಇದ್ದಲಿಯನ್ನು ಅಗ್ನಿಯಾಗಿ ಪರಿವರ್ತಿಸಿದರೆ ಇದ್ದಲಿಯೂ ಕೂಡ ಶುಭ್ರ ಬೂದಿಯಾಗುತ್ತದೆ ಅದರಂತೆ ಮಾನವನು ದುರ್ಜನರ ಸಂಗದಿಂದ ದುರ್ಗುಣಿಯಾಗುತ್ತಾನೆ. ದುವ್ಯಸನ ದುರಾಚಾರಗಳ ಅಭ್ಯಾಸದಲ್ಲಿ ತೊಡಗುತ್ತಾನೆ. ಅದರಿಂದ ಜೀವನವನ್ನು ಹಾಳು ಮಾಡಿಕೊಳ್ಳುವನು.
ಇಂಥ ಸಂದರ್ಭದಲ್ಲಿ ಸದ್ಗುರುಗಳ ಸತ್ ಹೃದಯಿಗಳ ಸಹವಾಸವಾದರೆ ದುರ್ಗುಣಿಯೂ ಕೂಡ ಸನ್ಮಾರ್ಗದಲ್ಲಿ ನಡೆಯುತ್ತಾನೆ. ಆತನಿಗೆ ಸತ್ಸಂಗ ದೊರೆತು ಉತ್ತಮ ಸಂಸ್ಕಾರವಂತನಾಗುತ್ತಾನೆ. ಮಾನವ ಜೀವನದಲ್ಲಿ ಸತ್ಸಂಗವೆಂಬುದು ಅಪರೂಪವಾದುದು. ಸದ್ಗುರುಗಳ ಮಾರ್ಗದರ್ಶನ ದೊರೆತರೆ ನಿಶ್ಚಯವಾಗಿ ಆ ವ್ಯಕ್ತಿ ಶುದ್ಧ ಸನ್ಮಾರ್ಗದಲ್ಲಿ ನಡೆಯಲಾರಂಭಿಸುವನು.
ಸನ್ಮಾರ್ಗವೂ ಎಲ್ಲರ ಜೀವನದಲ್ಲಿ ಅತಿ ಅವಶ್ಯಕ. ಇದ್ದಲಿಯಂಥ ವಸ್ತು ಅಗ್ನಿ ಸಂಸ್ಕಾರದಿಂದ ಶುದ್ಧವಾಗುವದಾದರೆ ಅಗ್ನಿರೂಪದ ಸನ್ಮಾರ್ಗ ಸಂಸ್ಕಾರದ ಸತ್ಪಥ ಎಂಥ ವ್ಯಕ್ತಿಯನ್ನು ತನ್ನೊಳಗೆ ತೆಗೆದುಕೊಂಡು ಆತನನ್ನು ಸುಗುಣಿಯನ್ನಾಗಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಅಂಥ ಸತ್ಸಂಗವೂ ಪುಣ್ಯವಶದಿಂದ ಪ್ರಾಪ್ತವಾಗುತ್ತದೆ. ಪುಣ್ಯ ಪ್ರಾಪ್ತಿಗೆ ಸಂಸ್ಕಾರವೆಂಬುದು ತೀರಾ ಅಗತ್ಯ. ಸಂಸ್ಕಾರವನ್ನು ಪಡೆದಾಗ ಪ್ರಪಂಚದಲ್ಲಿ ಮಾನಾಭಿಮಾನ ಮತ್ತು ಗೌರವಗಳು ಪ್ರಾಪ್ತಿಯಾಗುತ್ತದೆ. ಅಲ್ಲದೇ ಅಧ್ಯಾತ್ಮದಿಂದ ಒಲವು ಬೆಳೆದು ಶಿವಪಥದಲ್ಲಿ ನಡೆಯುವಂತಾಗುತ್ತದೆ.

Previous articleಚಿಲ್ಲರೆ ಮಾತುಗಳಿಗೆ ಯಾವುದೇ ಬೆಲೆ ಇಲ್ಲ
Next articleಸರ್ದಾರ್ ವಲ್ಲಭಭಾಯಿ ಪಟೇಲ್ ಮೂರ್ತಿಗೆ ಸಿಎಂ ಮಾಲಾರ್ಪಣೆ