ವಿಶ್ವ ಧ್ಯಾನ ದಿನಾಚರಣೆ ತುಂಬ ಯೋಗ್ಯ

0
13

ವಿಶ್ವಸಂಸ್ಥೆಯು ಡಿ. ೨೧ನ್ನು ವಿಶ್ವ ಧ್ಯಾನ ದಿನ'ವನ್ನಾಗಿ ಘೋಷಣೆ ಮಾಡಿದ್ದು, ಅದಕ್ಕೆ ಎಲ್ಲ ಕಡೆಯಿಂದ ಸ್ವಾಗತ ದೊರೆಯುತ್ತಿದೆ. ಯೋಗ ದಿನಾಚರಣೆಯಂತೆ ಧ್ಯಾನ ದಿನಾಚರಣೆಯೂ ಘೋಷಿಸಲ್ಪಟ್ಟಿದ್ದರಿಂದ ಭಾರತೀಯ ಅಧ್ಯಾತ್ಮ ಪರಂಪರೆಗೆ ವಿಶ್ವಮಟ್ಟದಲ್ಲಿ ಇನ್ನಷ್ಟು ಮನ್ನಣೆ ದೊರೆತಿದೆ. ಧ್ಯಾನ’ ಎಂಬ ಸಂಸ್ಕೃತ ಶಬ್ದಕ್ಕೆ `ಚಿಂತನೆ ಮಾಡುವಿಕೆ, ಗಮನಿಸುವಿಕೆ’ ಎಂದರ್ಥ. ಒಂದು ವಿಷಯವನ್ನು ದೀರ್ಘಕಾಲದವರೆಗೆ ಏಕಾಗ್ರತೆಯಿಂದ ಗಮನಿಸುವಿಕೆಯೇ ಧ್ಯಾನ. ದೇವರ ಧ್ಯಾನ ಮುಖ್ಯ. ಹೃದಯ, ಭ್ರೂಮಧ್ಯ ಮುಂತಾದ ಕೇಂದ್ರಗಳಲ್ಲಿ ಮನಸ್ಸನ್ನು ಧಾರಣೆ ಮಾಡಿರಬೇಕು. ಎಲ್ಲಿ ಧಾರಣೆ ಮಾಡಿರುತ್ತೇವೆಯೋ ಅಲ್ಲಿಯೇ ಮತ್ತು ಅದೇ ವಿಷಯದಲ್ಲಿಯೇ ಮನಸ್ಸು ಏಕತಾನತೆಯನ್ನು ಪಡೆದುಕೊಂಡರೆ ಅದೇ ಧ್ಯಾನ. ಏಕತಾನತೆ ಎಂದರೆ ಲಯಬದ್ಧ ಗತಿ. ಒಂದೇ ವಿಷಯದ ಒಂದೇ ವಿಧದ ಚಿಂತನೆಯು ಲಯಬದ್ಧ ಗತಿಯಲ್ಲಿ ದೀರ್ಘಕಾಲ ನಿರಂತರವಾಗಿ ಬರಬೇಕು. ಆಗ ಧ್ಯಾನವಾಗುತ್ತದೆ.
ದೇವರಲ್ಲಿನ ಭಕ್ತಿ ಧ್ಯಾನಯೋಗಕ್ಕೆ ತುಂಬ ಸಹಕಾರಿ. ದೇವರ ನಾಮವನ್ನು ಹೇಳುತ್ತ ದೇವರ ಚಿಂತನೆಯಲ್ಲಿ ತೊಡಗುವುದು ಸುಲಭವಾಗುತ್ತದೆ. ಅದಕ್ಕಾಗಿ ಮೊದಲು ಸ್ವಲ್ಪ ಹೊತ್ತು ದೇವರ ನಾಮಸಂಕೀರ್ತನೆಯನ್ನು ಮಾಡಿಕೊಳ್ಳುವುದು ಉತ್ತಮ. ಆಸನ-ಪ್ರಾಣಾಯಾಮಗಳು ಧ್ಯಾನಕ್ಕೆ ಒಳ್ಳೆಯ ಪೂರ್ವ ಪೀಠಿಕೆಗಳಾಗುತ್ತವೆ. ಸಾತ್ತ್ವಿಕ ಆಹಾರ ಮತ್ತು ಹದವಾದ ನಿದ್ರೆಗಳು ಧ್ಯಾನಯೋಗಕ್ಕೆ ಅತ್ಯಂತ ಆವಶ್ಯಕ. ಬೆಳಗಿನ ಮತ್ತು ಸಂಜೆಯ ಸಂಧ್ಯಾಕಾಲಗಳು ಧ್ಯಾನದಲ್ಲಿ ಏಕಾಗ್ರತೆಯನ್ನು ಬೇಗ ಉಂಟುಮಾಡುತ್ತವೆ.
ಧ್ಯಾನದಲ್ಲಿ ಮನಸ್ಸಿಗೆ ತುಂಬ ಒತ್ತಡ ಹಾಕುವುದು ಒಳ್ಳೆಯದಲ್ಲ. ಅಂದರೆ ದೇವರಲ್ಲಿ ಅಥವಾ ಅಪೇಕ್ಷಿತ ವಿಷಯದಲ್ಲಿ ಬಹುತೇಕ ಜನರಿಗೆ ಒಮ್ಮೆಲೇ ಏಕಾಗ್ರತೆ ಬರಲು ಸಾಧ್ಯವಿಲ್ಲ. ಅಂಥವರು ಒಮ್ಮೆಲೇ ಏಕಾಗ್ರತೆ ಉಂಟಾಗಲೆಂಬ ಒತ್ತಡವನ್ನು ಅತಿಯಾಗಿ ಹಾಕಬಾರದು. ತನಗೆ ಸಾಧ್ಯವಿರುವ ಸುಲಭ ಉಪಾಯಗಳ ಮೂಲಕ ಮನಸ್ಸೆಂಬ ಬಾಲಕನನ್ನು ಮೆತ್ತಗೆ ತನ್ನ ವಶಕ್ಕೆ ಪಡೆದುಕೊಳ್ಳಬೇಕು. ಅಭ್ಯಾಸೇನ ಪ್ರಯತ್ನೇನ ಲಾಲಯೇತ್ ಚಿತ್ತಬಾಲಕಮ್ ಎಂಬುದಾಗಿ ಹಿರಿಯರು ಹೇಳುತ್ತಾರೆ. ಮಕ್ಕಳನ್ನು ಅವರಿಗೆ ಇಷ್ಟವಾದ ಮಾತುಗಳ ಮೂಲಕ ಸಮಾಧಾನಪಡಿಸಿ ವಶಕ್ಕೆ ಪಡೆಯುವಂತೆ ಮನಸ್ಸಿಗೆ ಇಷ್ಟವಾಗುವ ಉಪಾಯಗಳ ಮೂಲಕ ಹಂತಹಂತವಾಗಿ ಮನಸ್ಸನ್ನು ಏಕಾಗ್ರಗೊಳಿಸಬೇಕು.
ಭಕ್ತಿಯನ್ನು ಜಾಗೃತಗೊಳಿಸುವ ಸಂಗೀತದ ರಾಗಗಳು, ದೇವರ ಸುಂದರವಾದ ಚಿತ್ರಗಳು, ದೇವರ ಮಹಿಮೆಗಳನ್ನು ತಿಳಿಸುವ ಘಟನೆಗಳು ಮುಂತಾದ ಉಪಾಯಗಳು ಮನಸ್ಸನ್ನು ಸುಲಭವಾಗಿ ಸಮಾಧಾನಪಡಿಸುತ್ತವೆ. ಅವರವರ ಅರ್ಹತೆಗೆ ತಕ್ಕಂತೆ ಈ ಉಪಾಯಗಳನ್ನು ಸೇರಿಸಿಕೊಂಡರೆ, ಹೆಚ್ಚು
ದೀರ್ಘಕಾಲ ವಿಳಂಬವಾಗದೆ ಏಕಾಗ್ರತೆಯು ಸಿದ್ಧಿಯಾಗುತ್ತದೆ, ಧ್ಯಾನಯೋಗ ಕೈಗೆ ಸಿಗುತ್ತದೆ.

Previous articleಬಣ್ಣಗಳ ಮೂಲಕ ಅತೀಂದ್ರಿಯ ಪ್ರಭಾವ
Next articleಜೋಶಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ