ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರವಾಗಿ ನಡೆದಿರುವ ಹೋರಾಟ ಬೆಂಬಲಿಸಲು ಬಂದಿದ್ದ ಮಾಜಿ ಡಿಸಿಎಂ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಭಾಷಣದ ವೇಳೆ ಗೊಂದಲ, ಗಲಾಟೆ ನಡೆಯಿತು.
ತಾವು ಜಲಸಂಪನ್ಮೂಲ ಸಚಿವರಾಗಿದ್ದ ವೇಳೆ ೫೨೨ ಮೀಟರ್ ವರೆಗೆ ಪರಿಹಾರ ವಿತರಣೆ ಬಗ್ಗೆ ಸಭೆಯಲ್ಲಿ ಕೇವಲ ಚರ್ಚೆ ನಡೆದಿತ್ತು ಆದರೆ ಸಭೆಯ ತೀರ್ಮಾನವಾಗಲಿ, ಸರ್ಕಾರದ ಆದೇಶವಾಗಲಿ ಅದಾಗಿಲ್ಲ ಈ ಬಗ್ಗೆ ಗೊಂದಲ ಬೇಡ ಎಂದರು.
ಜೆ.ಎಚ್.ಪಟೇಲ್ ಸರ್ಕಾರದ ನಂತರ ರೈತರಿಗೆ ಪರಿಹಾರ ವಿತರಿಸಲು ಭೂದರ ನಿಗದಿಯಾಗಿರಲಿಲ್ಲ. ನಮ್ಮ ಅವಧಿಯಲ್ಲಿ ನೀರಾವರಿಗೆ ೨೪ ಲಕ್ಷ ರೂ., ಒಣಬೇಸಾಯಕ್ಕೆ ೨೦ ಲಕ್ಷ ರೂ. ಘೋಷಿಸಲಾಗಿತ್ತು ಅಂದು ೪೦ ಲಕ್ಷ ಕೊಡ್ತೀವಿ ಅಂದವರು ಈಗ ನಿಮ್ಮದೆ ಸರ್ಕಾರವಿದೆ ಕೊಟ್ಟು ತೋರಿಸಿ ಎಂದು ಸವಾಲೆಸೆದರು.
ಆಗ ಸಭೆಯಲ್ಲಿದ್ದ ಕೆಲವರು ೫೨೨ ಮೀಟರ್ ವರೆಗಿನ ತೀರ್ಮಾನ ನಿಮ್ಮದೇ ಸರ್ಕಾರದ ತೀರ್ಮಾನ ಎಂದರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆರಳಿದ ಕಾರಜೋಳ ಅವರು, ಅನಗತ್ಯ ಪಕ್ಷ ರಾಜಕಾರಣ ತರಬೇಡಿ ನಾನು ಇತಿಹಾಸ ಬಿಚ್ಚಿಟ್ಟರೆ ಕಾಂಗ್ರೆಸ್ನವರು ರಾಜ್ಯದಲ್ಲೇ ಇರುವುದಿಲ್ಲ ಎಂದರು. ವೇದಿಕೆಯಲ್ಲಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಅವರನ್ನುದ್ದೇಶಿಸಿ ಮಾತನಾಡಿದ ಕಾರಜೋಳ ಅವರು ಎಕರೆಗೆ ೪೦ ಲಕ್ಷ ರೂ. ನಿಮ್ಮ ಸರ್ಕಾರ ನೀಡಿದರೆ ನಿಮಗೆ ಇದೇ ವೇದಿಕಯಲ್ಲಿ ಬಂಗಾರದ ಕಿರೀಟ ತೊಡಿಸುವೆ, ಮುಖ್ಯಮಂತ್ರಿಗಳನ್ನು ಸನ್ಮಾನಿಸುವೆ ಎಂದರು.