ಸಾವಿರ ಅಶ್ವಮೇಧಯಾಗಗಳ ಫಲವನ್ನು ಮತ್ತು ಸತ್ಯವನ್ನು ನುಡಿದಾಗ ಬರುವ ಫಲವನ್ನು ತಕ್ಕಡಿಯಲ್ಲಿ ಹಾಕಿ ತೂಗಿದರೆ ಸತ್ಯವೇ ಶ್ರೇಷ್ಠವೆಂದು ನಿರ್ಣಯವಾಗುತ್ತದೆ. ಸಾವಿರ ಅಶ್ವಮೇಧಯಾಗಗಳಿಗಿಂತಲೂ ಸತ್ಯವೇ ಶ್ರೇಷ್ಠವಾದುದು. ಯಾರು ಸತ್ಯವನ್ನು ಹೇಳುವುದಿಲ್ಲವೋ, ಅವರು ಅಶ್ವಮೇಧಯಾಗವನ್ನು ಮಾಡಿಯೂ ಕೂಡ ವ್ಯರ್ಥ. ಆದ್ದರಿಂದ ಎಂದೆಂದೂ ಸತ್ಯವನ್ನೇ ಹೇಳಬೇಕು. ಸುಳ್ಳು ಸರ್ವಥಾ ಹೇಳಬಾರದು.
ದುರಹಂಕಾರಿಯಾಗ ಬೇಡ: ವೃದ್ಧಾಪ್ಯವು ರೂಪವನ್ನು ಅಪಹಾರ ಮಾಡುತ್ತದೆ. ಆಸೆಯನ್ನು ಧೈರ್ಯವನ್ನು ಅಪಹಾರ ಮಾಡುತ್ತದೆ. ಮೃತ್ಯುವು ಪ್ರಾಣಗಳನ್ನು ಅಪಹಾರ ಮಾಡುತ್ತದೆ. ಅಸೂಯೆಯು ಧರ್ಮಾಚರಣೆಯನ್ನು ಅಪಹಾರ ಮಾಡುತ್ತದೆ. ಕ್ರೋಧವು ಸಂಪತ್ತನ್ನು ಅಪಹರಿಸುತ್ತದೆ. ಅಯೋಗ್ಯರ ಸೇವೆಯು ಶೀಲವನ್ನು ಅಪಹಾರ ಮಾಡುತ್ತದೆ. ಕಾಮವು ನಾಚಿಕೆಯನ್ನು ಅಪಹಾರ ಮಾಡುತ್ತದೆ. ದುರಹಂಕಾರವೆಂಬ ಒಂದೇ ದೋಷವು ರೂಪ ಧೈರ್ಯ ಮೊದಲಾದ ಎಲ್ಲಾ ಗುಣಗಳನ್ನು ಏಕಕಾಲದಲ್ಲಿ ಅಪಹಾರ ಮಾಡುತ್ತದೆ.
ಕಾಲ ವ್ಯರ್ಥ ಮಾಡಬೇಡ: ಯಾವುದೇ ಖಾಯಿಲೆಗಳು ಅಥವಾ ಯಮಧರ್ಮರಾಜನು ಜೀವಿಗಳಿಗೆ ಕಾಲಾವಕಾಶವನ್ನು ಕೊಡುವುದಿಲ್ಲ. ಯಾವಾಗ ಬೇಕಾದರೂ ಆಕ್ರಮಣ ಮಾಡುತ್ತಾರೆ. ಆಕ್ರಮಣ ಮಾಡಿದ ಮೇಲೆ ಕಾರುಣ್ಯವನ್ನೂ ಕೂಡ ತೋರುವುದಿಲ್ಲ. ಆದ್ದರಿಂದ ಅವಕಾಶವಿದ್ದಾಗಲೆಲ್ಲಾ ಒಳ್ಳೆಯ ಕೆಲಸಗಳನ್ನೇ ಮಾಡಬೇಕು. ಒಳ್ಳೆಯ ಕೆಲಸಗಳನ್ನು ಮುಂದೂಡುವುದು ಅಥವಾ ಉದಾಸೀನ ಮಾಡುವುದು ಸರ್ವಥಾ ತಪ್ಪು.
ದುಶ್ಚಟಗಳಿಗೆ ಬಲಿಯಾಗಬೇಡ: ಯಾವುದೇ ಕೆಲಸವಿಲ್ಲದಿದ್ದರೂ ಕೆಲಸವಿದೆಯೆಂದು ಮನೆಬಿಟ್ಟು ಹೋಗುವುದು ತಪ್ಪು, ಪಾಪಿಗಳ ಜೊತೆ ಸ್ನೇಹ ಮಾಡುವುದು ಬಿಟ್ಟು. ಹೆಂಡತಿಯನ್ನು ಬಿಟ್ಟು ಮತ್ತೊಂದು ಸ್ತ್ರೀಯನ್ನು ಕಾಮಿಸುವುದು ತಪ್ಪು. ಸಣ್ಣವನಾದರೂ ದೊಡ್ಡವನಂತೆ ಬೀಗುವುದು ಕಳ್ಳತನ ಮಾಡುವುದು ಮಾದಕದ್ರವ್ಯಗಳನ್ನು ಸೇವನೆ ಮಾಡುವುದು ತಂಬಾಕು ಸೇವನೆ ಮಾಡುವುದು, ಧೂಮಪಾನ ಮಾಡುವುದು, ಮದ್ಯಪಾನ ಮಾಡುವುದು ಇವೆಲ್ಲವೂ ಕೂಡ ದೊಡ್ಡ ತಪ್ಪುಗಳು. ಇದನ್ನು ಯಾರು ಮಾಡುವುದಿಲ್ಲವೋ, ಅವನಷ್ಟೇ ಸುಖಿಯಾಗಿರುತ್ತಾನೆ.