ಜನ್ಮ-ಮರಣ, ಪುಣ್ಯ-ಪಾಪಗಳಿಲ್ಲದ ಸ್ಥಿತಿ

0
7

ಹುಟ್ಟಿದವನಿಗೆ ತಾನು ಸಾಯಲಿಕ್ಕಿದ್ದೇನೆ ಎಂಬ ಆತಂಕವಾದರೆ ಮರಣ ಹೊಂದಿದ ಜೀವಿಗಳಿಗೆ ತಾನು ಮತ್ತೆ ಹುಟ್ಟಿ ಬರಬೇಕಾಗಿದೆ ಎಂಬುದು ಆತಂಕ. ಭಗವಂತನ ಸಾನ್ನಿಧ್ಯವನ್ನು ಪಡೆದವರಿಗೆ ಈ ಎರಡೂ ಆತಂಕಗಳಿಲ್ಲ.
`ಇದಂ ಜ್ಞಾನಮುಪಾಶ್ರಿತ್ಯ ಮಮಸಾ ಧರ್ಮ್ಯಮಾಗತಾಃ |
ಸರ್ಗೇಽಪಿ ನೋಪಜಾಯಂತೇ ಪ್ರಲಯೋ ನ ವ್ಯಥಂತಿ ಚ ||’

ಯಾಕೆ ಅವರಿಗೆ ಆತಂಕವಿಲ್ಲವೆಂದರೆ ಯಾವುದಕ್ಕೆ ಹುಟ್ಟು-ಸಾವುಗಳಿಲ್ಲವೋ, ಯಾವುದಕ್ಕೆ ಸೃಷ್ಟಿ-ಪ್ರಳಯಗಳಿಲ್ಲವೋ ಅದನ್ನು ಅವರು ಪಡೆದಿರುತ್ತಾರೆ.
ಹುಟ್ಟಿದವರಿಗೆ ತನ್ನ ಮರಣದ ಬಗ್ಗೆ ಆತಂಕವಿದ್ದಂತೆ ಮರಣ ಹೊಂದಿದವರಿಗೆ ತನ್ನ ಪುನರ್ಜನ್ಮದ ಬಗ್ಗೆಯೂ ಆತಂಕವಿರುತ್ತದೆ. ಯಾಕೆಂದರೆ ಪುನಃ ಗರ್ಭವೆಂಬ ಸೆರೆಮನೆಯ ವಾಸ ಅನುಭವಿಸಬೇಕಾಗುತ್ತದೆ. ಅಲ್ಲದೆ ಮರಣದಂತೆಯೆ ಕ್ಲಿಷ್ಟತಮವಾದ ಜನನವನ್ನು ಅನುಭವಿಸಬೇಕಾಗುತ್ತದೆ. ಸಾಮಾನ್ಯ ಜನರಿಗೆ ಈಗ ಮರಣದ ಬಗ್ಗೆ ಮಾತ್ರವೇ ಆತಂಕವಿರುತ್ತದೆ. ಪುನಃ ಹುಟ್ಟಿನ ಬಗ್ಗೆ ಇಲ್ಲ. ಯಾಕೆಂದರೆ ಅವರ ದೃಷ್ಟಿ ಮರಣಾನಂತರದ ಸ್ಥಿತಿಯವರೆಗೆ ಹೋಗುತ್ತಿಲ್ಲ. ಸ್ವಲ್ಪ ಆಳವಾಗಿ ಗಮನಿಸುವವರಿಗೆ, ಅಥವಾ ಶಾಸ್ತ್ರಗಳನ್ನು ಓದಿಕೊಂಡು ಅದರಂತೆ ಆಲೋಚಿಸುವವರಿಗೆ ಮುಂದಿನ ಹುಟ್ಟಿನ ಬಗ್ಗೆಯೂ ಊಹೆ ಬರುತ್ತದೆ, ಅದರ ಬಗ್ಗೆಯೂ ಆತಂಕವಿರುತ್ತದೆ. ಪರಮಾತ್ಮ ಜ್ಞಾನದ ಸಾಧನೆಗಳನ್ನು ಮಾಡಿಕೊಂಡು ಪರಮಾತ್ಮ ಜ್ಞಾನದಲ್ಲಿಯೆ ನಿಂತುಕೊಳ್ಳಲು ಸಾಧ್ಯವಾಗುವ ಜ್ಞಾನಿಗಳಿಗೆ ಜನ್ಮ-ಮರಣಗಳ ಆತಂಕವಿಲ್ಲ. ಅದು ಎಂತಹ ಪರಮಾತ್ಮ ಜ್ಞಾನ? ೧೪ನೇ ಅಧ್ಯಾಯದಲ್ಲಿ ಹೇಳಿದಂತೆ ತ್ರಿಗುಣಾತ್ಮಕ
ಪರಮಾತ್ಮನ ಜ್ಞಾನ.
ಪರಮಾತ್ಮ ಜ್ಞಾನದಲ್ಲಿ ನಿಂತವರಿಗೆ ಮರಣ-ಪುನರ್ಜನ್ಮಗಳ ಬಗ್ಗೆ ಭವವಿಲ್ಲ ಎಂಬುದಕ್ಕೆ ಒಂದು ಉದಾಹರಣೆ ಕೊಡಬಹುದು. ಭೂಮಿಗಿಂತ ಮೇಲೆ ಎತ್ತರವಾದ ಮರವನ್ನು ಹತ್ತಿದವರಿಗೆ ತಾನು ಕೆಳಕ್ಕೆ ಬೀಳಬಹುದೆಂಬ ಬಗ್ಗೆ ಆತಂಕವಿರುತ್ತದೆ. ಹಾಗೆಯೇ ಭೂಮಿಯ ಮಟ್ಟಕ್ಕಿಂತ ಕೆಳಗೆ ಸುರಂಗದಲ್ಲಿ ಇಳಿದವರಿಗೆ ತನ್ನ ಮೇಲೆ ಭೂಮಿ ಕುಸಿದು ಬೀಳಬಹುದೆಂಬ ಆತಂಕವಿರುತ್ತದೆ. ಭೂಮಿಯ ಮಟ್ಟದಲ್ಲಿಯೇ ಇದ್ದವನಿಗೆ ಈ ಎರಡೂ ಆತಂಕಗಳಿಲ್ಲ.
ಹಾಗೆಯೇ ಪರಮಾತ್ಮ ಜ್ಞಾನದಲ್ಲಿ ನಿಂತವನು ಪುಣ್ಯದ ಕಾರಣದಿಂದ ಸ್ವರ್ಗಕ್ಕೆ ಏರುವುದೂ ಇಲ್ಲ, ಪಾಪದ ಕಾರಣದಿಂದ ನರಕಕ್ಕೆ ಬೀಳುವುದೂ ಇಲ್ಲ. ಸ್ವರ್ಗವೂ ಕೂಡ ಸಂಸಾರವೇ ಆಗಿದೆ. ಅದು ಶಾಶ್ವತವಲ್ಲ. ಜ್ಞಾನಿಗಳು ಅದನ್ನು ಬಯಸುವದಿಲ್ಲ. ಪುಣ್ಯ-ಪಾಪಗಳೆರಡನ್ನೂ ತೊಳೆದುಕೊಂಡು ಪರಮಾತ್ಮ ಸಾಯುಜ್ಯದಲ್ಲಿ ನಿಲ್ಲಲು ಬಯಸುತ್ತಾರೆ. ಸೃಷ್ಟಿ-ಪ್ರಳಯಗಳಿಗೊಳಪಡದ, ಪುಣ್ಯ-ಪಾಪಗಳಿಗೊಳಪಡದ ನಿರಂಜನ ಸಮತ್ವವನ್ನು ಅಲ್ಲಿ ಪಡೆಯುತ್ತಾರೆ. ಅದು ಅನಂತ.

Previous articleಗ್ಯಾರಂಟಿ ಯೋಜನೆಗಳಿಗೆ ಆ್ಯಪ್‌ಗಳ ಅಡ್ಡಗಾಲು
Next articleರೈಲು‌ ಹತ್ತುವಾಗ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು