ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ “ಕದನ ವಿರಾಮ” ಜಾರಿಗೆ ಸಂಬಂಧಿಸಿದಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಯಾವುದೇ ದೂರವಾಣಿ ಸಂಭಾಷಣೆ ನಡೆದಿಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಆಪರೇಷನ್ ಸಿಂದೂರ ಕುರಿತ ಚರ್ಚೆಯ ಸಂದರ್ಭದಲ್ಲಿ ಮಾತನಾಡಿರುವ ಅವರು, ಭಾರತ ಮತ್ತು ಅಮೆರಿಕ ನಡುವಿನ ಯಾವುದೇ ಸಂಭಾಷಣೆಯಾಗಲಿ ಅಥವಾ ವ್ಯಾಪಾರಕ್ಕೆ ಸಂಬಂಧಿಸಿದಂತೆ ಅಮೆರಿಕದ ಜೊತೆ ಯಾವುದೇ ಹಂತದಲ್ಲೂ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಹಲ್ಲಾಮ್ ದಾಳಿಗೆ ಸಂತಾಪ ಸೂಚಿಸಿ ಏಪ್ರಿಲ್ 22ರಂದು ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ಮೋದಿಯವರಿಗೆ ಕರೆ ಮಾಡಿದ್ದರು. ಅದಾದ ಬಳಿಕ ಜೂನ್ 17ರವೆರೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಯಾವುದೇ ಸಂಭಾಷಣೆ ನಡೆದಿಲ್ಲ ಎಂದು ಅವರು ತಿಳಿಸಿದರು.
ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿದ ನಮ್ಮ ಮಿಲಿಟರಿ ಪಡೆಗಳು ಅಮಾಯಕ ನಾಗರಿಕರಿಗೆ ಯಾವುದೇ ಹಾನಿಯಾಗದಂತೆ ಕಾರ್ಯಾಚರಣೆ ನಡೆಸಿದೆ. ಪ್ರತೀಕಾರ ತೀರಿಸಿಕೊಂಡ ಬಳಿಕ ಪಾಕಿಸ್ತಾನ ಯುದ್ಧ ನಿಲ್ಲಿಸಲು ಸಿದ್ಧವಿದೆ ಎಂಬ ಕರೆಗಳು ಬಂದಿದ್ದವು.
ಹಲವಾರು ದೇಶಗಳು ಮೇ 10ರಂದು ಭಾರತವನ್ನು ಸಂಪರ್ಕಿಸಿ, ಕದನ ವಿರಾಮಕ್ಕೆ ಪಾಕಿಸ್ತಾನ ಸಿದ್ಧವಾಗಿದೆ ಎಂದು ತಿಳಿಸಿವೆ. ಆದರೆ, ಆ ಕರೆಗಳು ಡಿಜಿಎಂಒ ಮೂಲಕವೇ ಬರಬೇಕೆಂದು ಸ್ಪಷ್ಟವಾಗಿ ತಿಳಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಜಾಗತಿಕ ರಾಷ್ಟ್ರಗಳಿಂದ ವ್ಯಾಪಕ ಬೆಂಬಲವೂ ದೊರಕಿತ್ತು. ಯಾವುದೇ ಒತ್ತಡದಿಂದಾಗಿ ಈ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿಲ್ಲ, ಒತ್ತಡದಿಂದ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು ಎನ್ನುವುದು ಸತ್ಯಕ್ಕೆ ದೂರವಾದದ್ದು ಅದು ಆಧಾರರಹಿತವಾಗಿದೆ ಎಂದರು.
ಪಹಲ್ಲಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿ ಬಳಿಕ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸುವುದು ಭಾರತಕ್ಕೆ ಅನಿವಾರ್ಯವಾಗಿತ್ತು. ಆಪರೇಷನ್ ಸಿಂಧೂರ ಆರಂಭಿಸಿ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ ಭಯೋತ್ಪಾದಕರ ನೆಲೆ ನಾಶ ಮಾಡುವುದು ನಮ್ಮ ಮೊದಲ ಗುರಿಯಾಗಿತ್ತು ಎಂದು ಜೈ ಶಂಕರ್ ಹೇಳಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವೆ ವ್ಯಾಪಾರ ವಿಷಯ ಮುಂದಿಟ್ಟುಕೊಂಡು ಕದಮ ವಿರಾಮದ ಒಪ್ಪಂದ ಏರ್ಪಟ್ಟಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ವಾದ ಮಂಡಿಸಿದ್ದರು. ಶ್ವೇತಭವನದ ಓವಲ್ ಕಚೇರಿಯಲ್ಲಿ ಮಾತನಾಡಿದ್ದ ಟ್ರಂಪ್, “ನಾವು ಪಾಕಿಸ್ತಾನ ಮತ್ತು ಭಾರತದೊಂದಿಗೆ ಕದನವನ್ನು ಇತ್ಯರ್ಥಪಡಿಸಿದ್ದೇವೆ, ನಾನು ಅದನ್ನು ವ್ಯಾಪಾರದ ಮೂಲಕ ಇತ್ಯರ್ಥಪಡಿಸಿದೆ ಎಂದು ನಾನು ಭಾವಿಸುತ್ತೇನೆ.” ಎಂದು ಹೇಳಿಕೊಂಡಿದ್ದರು.