ದೇಶದ ಸ್ವಚ್ಛ ನಗರಗಳ ಪಟ್ಟಿ: ಮೈಸೂರಿಗೆ 3ನೇ ಸ್ಥಾನ

1
256

ನವದೆಹಲಿ: ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ನೋಯ್ಡಾ ಮೊದಲ ಸ್ಥಾನ ಪಡೆದಿದ್ದು, ಕರ್ನಾಟಕದ ಮೈಸೂರು 3ನೇ ಸ್ಥಾನದಲ್ಲಿದೆ. 2024-25ರ ಸ್ವಚ್ಛ ನಗರಗಳ ಪಟ್ಟಿಯಲ್ಲಿ 3 ರಿಂದ 10 ಲಕ್ಷ ಜನಸಂಖ್ಯೆ ವಿಭಾಗದಲ್ಲಿ ಕರ್ನಾಟಕದ ಮೈಸೂರು ಪ್ರಶಸ್ತಿ ಪಡೆದಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ ಪ್ರದಾನ ಮಾಡಿದರು.

ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿ, “ಸ್ವಚ್ಛತೆಯಡೆಗೆ ನಮ್ಮ ನಗರಗಳು ಮಾಡುತ್ತಿರುವ ಪ್ರಯತ್ನಗಳ ಮೌಲ್ಯಮಾಪನ ಮಾಡುವಲ್ಲಿ ಮತ್ತು ಪ್ರೋತ್ಸಾಹಿಸುವಲ್ಲಿ ಸ್ವಚ್ಛ ಸರ್ವೇ ಯಶಸ್ವಿ ಪ್ರಯೋಗವಾಗಿರುವುದು ಸಾಬೀತಾಗಿದೆ” ಎಂದರು.

ಯಾವ-ಯಾವ ನಗರಗಳು?: 3-10 ಲಕ್ಷ ಜನಸಂಖ್ಯೆಯ ವಿಭಾಗದಲ್ಲಿ, ಉತ್ತರ ಪ್ರದೇಶದ ನೋಯ್ಡಾ ಸ್ವಚ್ಛ ನಗರವಾಗಿ ಅಗ್ರಸ್ಥಾನ ಪಡೆದಿದೆ. ಪಂಜಾಬ್‌ನ ಚಂಡೀಗಢ 2ನೇ ಸ್ಥಾನದಲ್ಲಿದೆ ಮತ್ತು ಕರ್ನಾಟಕ ರಾಜ್ಯದಿಂದ ಏಕೈಕ ನಗರ ಮೈಸೂರು ಸ್ಥಾನ ಪಡೆದಿದ್ದು, 3ನೇ ಸ್ಥಾನದಲ್ಲಿದೆ.

ಕೇಂದ್ರ ಸರ್ಕಾರ ವಾರ್ಷಿಕವಾಗಿ ನಡೆಸುವ ಸ್ವಚ್ಛತಾ ಸಮೀಕ್ಷೆಯನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ 2024ರಲ್ಲಿ ನಡೆಸಿತ್ತು. ರಾಜ್ಯ ಸರ್ಕಾರಗಳು, ನಗರ ಸಂಸ್ಥೆಗಳು ಮತ್ತು ಅಂದಾಜು 14 ಕೋಟಿ ನಾಗರಿಕರ ಪಾಲ್ಗೊಂಡ ವಿಶ್ವದ ಅತಿದೊಡ್ಡ ಸ್ವಚ್ಛತಾ ಸಮೀಕ್ಷೆ ಇದಾಗಿತ್ತು.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಆಯೋಜಿಸಿರುವ ಈ 9ನೇ ಆವೃತ್ತಿಯ ಸ್ವಚ್ಛ ಸರ್ವೇಕ್ಷಣವು 4,500ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳನ್ನು ನಿರ್ಣಯಿಸುವ ಮೂಲಕ ವಿಶ್ವದ ಅತಿದೊಡ್ಡ ಸ್ವಚ್ಛತಾ ಸಮೀಕ್ಷೆಯಾಗಿ ಬೆಳೆದಿದೆ. 3,000ಕ್ಕೂ ಹೆಚ್ಚು ತರಬೇತಿ ಪಡೆದ ಮೌಲ್ಯಮಾಪಕರು 45 ದಿನಗಳ ಅವಧಿಯಲ್ಲಿ ವಿವರವಾದ ಸಮೀಕ್ಷೆ ನಡೆಸಿ ವರದಿ ತಯಾರಿಸಿದ್ದಾರೆ.

ಕೇಂದ್ರದ ವಸತಿ ಮತ್ತು ನಗರಾಭಿವೃದ್ದಿ ಇಲಾಖೆಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಟಿ ಮತ್ತು ನಗರ ಸ್ಢಳೀಯ ಸಂಸ್ಥೆಗಳಿಗೆ ನಗರಗಳ ಸ್ವಚ್ಛತೆ ಕಾಪಾಡಿದ್ದಕ್ಕಾಗಿ ಸ್ವಚ್ಛ ಭಾರತ್ ಮಿಷನ್ ಆರ್ಬನ್ ಯೋಜನೆಯಡಿ ಪ್ರಶಸ್ತಿ ನೀಡಲಾಗುತ್ತಿದೆ. ನಗರಗಳು ಉತ್ತಮ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂಬ ಉದ್ದೇಶದಿಂದ ಕೇಂದ್ರದ ನಗರಾಭಿವೃದ್ದಿ ಇಲಾಖೆಯು ಪ್ರತಿ ವರ್ಷ ಸ್ವಚ್ಛತೆಯ ರ‍್ಯಾಂಕಿಂಗ್‌ ನೀಡುತ್ತಿದೆ.

10 ಲಕ್ಷ ಜನಸಂಖ್ಯೆಗಿಂತ ಹೆಚ್ಚಿನ ನಗರಗಳಲ್ಲಿ ಅಹಮದಾಬಾದ್, ಭೋಪಾಲ್ ಮತ್ತು ಲಕ್ನೋ ನಗರಗಳು ಅಗ್ರ 3 ಸ್ವಚ್ಛ ನಗರ ಪ್ರಶಸ್ತಿಯನ್ನು ಪಡೆದಿವೆ. ಮಧ್ಯಪ್ರದೇಶದ ಇಂದೋರ್‌ ನಗರವು ಭಾರತದ ಅತ್ಯಂತ ಸ್ವಚ್ಛ ನಗರ ಎಂದು ಗುರುತಿಸಲ್ಪಟ್ಟಿದ್ದು, ಇದು ಸತತ ಎಂಟನೇ ಬಾರಿಯ ಸಾಧನೆಯಾಗಿದೆ.

ಕರ್ನಾಟಕದಿಂದ ಸ್ವಚ್ಛ ಲೀಗ್ ನಗರಗಳ ಪೈಕಿ ಮೈಸೂರು ಏಕೈಕ ನಗರವಾಗಿದೆ. 3 ರಿಂದ 10 ಲಕ್ಷ ಜನಸಂಖ್ಯೆ ವಿಭಾಗದ ನಗರಗಳ ಪಟ್ಟಿಯಲ್ಲಿ ಮೈಸೂರು ಸ್ಥಾನ ಪಡೆದಿದೆ. 2016 ರಲ್ಲಿ ದೇಶದಲ್ಲಿಯೇ ನಂಬರ್​ 1 ಸ್ಥಾನವನ್ನು ಮೈಸೂರು ನಗರ ಪಡೆದಿತ್ತು, ನಂತರದ ದಿನಗಳಲ್ಲಿ ಕುಸಿತ ಕಾಣುತ್ತ ಬಂದು 2023ನೇ ಸಾಲಿನಲ್ಲಿ 27ನೇ ಸ್ಥಾನಕ್ಕೆ ಕುಸಿದಿತ್ತು.

Previous articleAnushree: ಆ್ಯಂಕರ್ ಅನುಶ್ರೀಗೆ ಕಂಕಣ ಭಾಗ್ಯ, ಹುಡುಗನ ಹೆಸರು ರಿವೀಲ್!
Next articleಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಆಸ್ತಿ ಜಪ್ತಿ ಮಾಡಿದ ಇಡಿ

1 COMMENT

  1. ಮೈಸೂರಿಗೆ ಮೂರನೇ ಸ್ಥಾನ ಅನ್ನೋದಾದರೆ ಬೇರೆ ನಗರಗಳು ಎಷ್ಟು ಗಲೀಜು ಇದ್ದವು ಅಂತ

LEAVE A REPLY

Please enter your comment!
Please enter your name here