ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ UGCET 2026 (ಸಾಮಾನ್ಯ ಪ್ರವೇಶ ಪರೀಕ್ಷೆ) ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಏಪ್ರಿಲ್ 23 ಮತ್ತು 24ರಂದು ರಾಜ್ಯಾದ್ಯಂತ ಪರೀಕ್ಷೆ ನಡೆಯಲಿದ್ದು, ಗಡಿನಾಡು ಹಾಗೂ ಹೊರನಾಡು ಕನ್ನಡಿಗರಿಗೆ ಏಪ್ರಿಲ್ 22ರಂದು ವಿಶೇಷ ಪರೀಕ್ಷೆಯನ್ನು ಆಯೋಜಿಸಲಾಗಿದೆ.
ಈ ಬಾರಿ ಸುಮಾರು 3.3 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ರಾಜ್ಯದ 745 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಯನ್ನು ಪಾರದರ್ಶಕವಾಗಿ ಮತ್ತು ಅಕ್ರಮ ರಹಿತವಾಗಿ ನಡೆಸಲು KEA ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.
ಬಿಗಿ ಭದ್ರತೆ, ಕಟ್ಟುನಿಟ್ಟಿನ ನಿಯಮಗಳು : ಪರೀಕ್ಷಾ ಕೇಂದ್ರಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆ (Dress Code) ಕಡ್ಡಾಯಗೊಳಿಸಲಾಗಿದೆ. ಸರಳ ಉಡುಪು ಧರಿಸಬೇಕು ಎಂದು ಸೂಚಿಸಲಾಗಿದೆ. ಇದಲ್ಲದೆ, ಮೊಬೈಲ್ ಫೋನ್, ಎಲೆಕ್ಟ್ರಾನಿಕ್ ಸಾಧನಗಳು, ಬ್ಲೂಟೂತ್, ಇಯರ್‌ಫೋನ್ ಮುಂತಾದ ಶ್ರವಣ ಸಾಧನಗಳು ಇವುಗಳನ್ನು ಪರೀಕ್ಷಾ ಕೇಂದ್ರದೊಳಗೆ ತೆಗೆದುಕೊಂಡು ಹೋಗುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಪಾರದರ್ಶಕತೆಗೆ ಒತ್ತು: KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಮಾತನಾಡಿ, ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳು ನೀಡಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಮುಖ ಪರೀಕ್ಷಾ ವಿವರಗಳು : ಪರೀಕ್ಷಾ ದಿನಾಂಕ: ಏಪ್ರಿಲ್ 23 & 24 (ಸಾಮಾನ್ಯ ವಿದ್ಯಾರ್ಥಿಗಳು), ವಿಶೇಷ ದಿನಾಂಕ: ಏಪ್ರಿಲ್ 22 (ಗಡಿನಾಡು/ಹೊರನಾಡು ಕನ್ನಡಿಗರು), ಪರೀಕ್ಷಾ ಕೇಂದ್ರಗಳು: 745, ಅಭ್ಯರ್ಥಿಗಳ ಸಂಖ್ಯೆ: 3.3 ಲಕ್ಷ
ವಿದ್ಯಾರ್ಥಿಗಳಿಗೆ ಸೂಚನೆ: ಪರೀಕ್ಷಾ ಕೇಂದ್ರಕ್ಕೆ ಸಮಯಕ್ಕಿಂತ ಮುಂಚೆಯೇ ಆಗಮಿಸುವುದು, ಗುರುತಿನ ಚೀಟಿ ಮತ್ತು ಅಗತ್ಯ ದಾಖಲೆಗಳನ್ನು ತರಿಕೊಳ್ಳುವುದು ಕಡ್ಡಾಯ. ನಿಯಮ ಉಲ್ಲಂಘನೆ ಮಾಡಿದರೆ ಪರೀಕ್ಷೆಯಿಂದ ಅನರ್ಹಗೊಳಿಸುವ ಸಾಧ್ಯತೆ ಇದೆ.























