ಬೆಂಗಳೂರು: ಕೇರಳ ಸರ್ಕಾರ 2025ರಲ್ಲಿ ಪ್ರಸ್ತಾಪಿಸಿರುವ ಮಲಯಾಳಂ ಭಾಷಾ ಮಸೂದೆ ವಿರುದ್ಧ ಕರ್ನಾಟಕದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ವಿಚಾರದಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್ ನಾಯಕರು, ವಿಶೇಷವಾಗಿ ಸಂಸದೆ ಪ್ರಿಯಾಂಕಾ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ.
ಕೇರಳದಲ್ಲಿ ಆನೆ ತುಳಿತದಿಂದ ಸಾವು ಸಂಭವಿಸಿದಾಗ, ವಯನಾಡಿನಲ್ಲಿ ಪ್ರಕೃತಿ ವಿಕೋಪ ಉಂಟಾದಾಗ ತಕ್ಷಣವೇ ಕರ್ನಾಟಕ ಸರ್ಕಾರದ ವಿರುದ್ಧ ಧ್ವನಿ ಎತ್ತುವ ಪ್ರಿಯಾಂಕಾ ಗಾಂಧಿ ಅವರು, ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ 1ರಿಂದ 10ನೇ ತರಗತಿಯವರೆಗೆ ಮಲಯಾಳಂ ಅನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸುವ ಮಸೂದೆ ವಿರುದ್ಧ ಮೌನ ವಹಿಸಿರುವುದೇಕೆ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕನ್ನಡಿಗರ ಅಸ್ಮಿತೆಗೆ ಕೇರಳದ ಕುತ್ತು: ಪಿಣರಾಯಿ ವಿಜಯನ್‌ಗೆ ಸಿದ್ದರಾಮಯ್ಯ ‘ಖಡಕ್’ ಎಚ್ಚರಿಕೆ!
ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಪ್ರಕಟಿಸಿದ್ದು, “ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸುವ ವಿಚಾರದಲ್ಲಿ ಕೇರಳದ ಪರ ನಿಂತ ಕರ್ನಾಟಕ ಕಾಂಗ್ರೆಸ್ ನಾಯಕರು, ಈಗ ಕಾಸರಗೋಡು ಸೇರಿದಂತೆ ಕೇರಳದ ಕನ್ನಡಿಗರ ಹಕ್ಕುಗಳ ವಿಚಾರದಲ್ಲಿ ಧ್ವನಿ ಎತ್ತುತ್ತಾರಾ?” ಎಂದು ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲದೆ, ಅಕ್ರಮ ವಲಸಿಗರ ವಿಚಾರವನ್ನು ಉಲ್ಲೇಖಿಸಿದ ಅಶೋಕ್, “ಕರ್ನಾಟಕದ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡರೂ ‘ಮಾನವೀಯತೆ’ ಹೆಸರಿನಲ್ಲಿ ಮನೆ ಕೊಡಬೇಕು ಎಂದು ರೋಹಿಂಗ್ಯರು ಮತ್ತು ಬಾಂಗ್ಲಾದೇಶಿಗಳ ಪರವಾಗಿ ಮಿಡಿಯುವ ಕೆ. ವೇಣುಗೋಪಾಲ್ ಅವರ ಹೃದಯ, ಕಾಸರಗೋಡಿನ ಕನ್ನಡಿಗರ ಪರವಾಗಿ ಮಿಡಿಯುವುದಿಲ್ಲವೇ?” ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: WPL 2026: ಆರ್‌ಸಿಬಿಗೆ ಶುಭಾರಂಭದ ಬೆನ್ನಲ್ಲೇ ಬಿಗ್ ಶಾಕ್; ಸ್ಟಾರ್ ವೇಗಿ ಹೊರಕ್ಕೆ!
ಕೇರಳ ಕಾಂಗ್ರೆಸ್ ನಾಯಕರು ಪದೇ ಪದೇ ಕರ್ನಾಟಕದ ಸ್ವಾಭಿಮಾನ ಮತ್ತು ಕನ್ನಡಿಗರ ಆತ್ಮಗೌರವಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿರುವ ಅಶೋಕ್, “ಕಾಂಗ್ರೆಸ್ ಪಕ್ಷದ ರಾಜಕೀಯ ಲಾಭ ಮತ್ತು ಕೆಲವರ ಸ್ವಾರ್ಥಕ್ಕಾಗಿ ಕರ್ನಾಟಕದ ಹಾಗೂ ಕನ್ನಡಿಗರ ಹಿತಾಸಕ್ತಿಯನ್ನು ನಿರಂತರವಾಗಿ ಬಲಿ ಕೊಡಲಾಗುತ್ತಿದೆ. ಇದಕ್ಕೆ ಕನ್ನಡಿಗರು ತಕ್ಕ ಪಾಠ ಕಲಿಸುವ ದಿನ ದೂರವಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಅಧಿವೇಶನದ ಪ್ರತಿಗಂಟೆಗೆ 24 ಲಕ್ಷ ಪೋಲು
ಕೇರಳದ ಮಲಯಾಳಂ ಭಾಷಾ ಮಸೂದೆ–2025 ಕನ್ನಡಿಗರ ಭಾಷಾ ಹಕ್ಕುಗಳ ಮೇಲೆ ನೇರ ದಾಳಿ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗುತ್ತಿದ್ದು, ಈ ವಿಷಯದಲ್ಲಿ ಕರ್ನಾಟಕದ ಕಾಂಗ್ರೆಸ್ ನಾಯಕರು ಯಾವ ನಿಲುವು ತಾಳುತ್ತಾರೆ ಎಂಬುದು ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.





















