ದಾಂಡೇಲಿ: (ಉತ್ತರ ಕನ್ನಡ): ಭಾರತದ ಸಂಸ್ಕೃತಿ, ಪರಂಪರೆ ಮತ್ತು ಋತುಚಕ್ರದೊಂದಿಗೆ ನೇರವಾಗಿ ಸಂಪರ್ಕ ಹೊಂದಿರುವ ಪ್ರಮುಖ ಹಬ್ಬಗಳಲ್ಲಿ ಮಕರ ಸಂಕ್ರಾಂತಿ ಅತ್ಯಂತ ಮಹತ್ವದ್ದಾಗಿದೆ. ಪ್ರತಿವರ್ಷ ಜನವರಿ 14 ಅಥವಾ 15ರಂದು ಆಚರಿಸಲ್ಪಡುವ ಈ ಹಬ್ಬವು ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದನ್ನು ಸೂಚಿಸುತ್ತದೆ. ಇದು ಖಗೋಳಶಾಸ್ತ್ರೀಯ ಮಹತ್ವ ಹೊಂದಿರುವ ಏಕೈಕ ಭಾರತೀಯ ಹಬ್ಬವಾಗಿದ್ದು, ಸೂರ್ಯನ ಉತ್ತರಾಯಣ ಆರಂಭದ ಸಂಕೇತವೂ ಆಗಿದೆ.
ಸಂಕ್ರಾಂತಿ ಹಬ್ಬವು ಮುಖ್ಯವಾಗಿ ಕೃಷಿಕರ ಹಬ್ಬವಾಗಿದೆ. ಬೆಳೆ ಕಟಾವು ಮುಗಿದು ಹೊಸ ಧಾನ್ಯ ಮನೆಗೆ ಬರುತ್ತಿರುವ ಸಂತಸದ ಸಮಯ ಇದಾಗಿದೆ. ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ದಿನವೆಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ರೈತರು ತಮ್ಮ ಪರಿಶ್ರಮದ ಫಲವನ್ನು ಸಂಭ್ರಮದಿಂದ ಸ್ವಾಗತಿಸುತ್ತಾರೆ
ವಿಡಿಯೋ ನೋಡಿ: ಮಕರ ಸಂಕ್ರಾತಿ ಎಳ್ಳು ಬೆಲ್ಲ ವಿಶೇಷತೆ
ಕರ್ನಾಟಕದಲ್ಲಿ ಸಂಕ್ರಾಂತಿ ವೈಭವ: ಕರ್ನಾಟಕದಲ್ಲಿ ಸಂಕ್ರಾಂತಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಎಳ್ಳು-ಬೆಲ್ಲ ಹಂಚುವ ಸಂಪ್ರದಾಯ ಈ ಹಬ್ಬದ ವಿಶೇಷತೆ. “ಎಳ್ಳು-ಬೆಲ್ಲ ತಿಂದು ಒಳ್ಳೆಯದನ್ನೇ ಮಾತನಾಡಿ” ಎಂಬ ಸಂದೇಶದ ಮೂಲಕ ಪರಸ್ಪರ ಸೌಹಾರ್ದತೆ ಮತ್ತು ಸಿಹಿ ಸಂಬಂಧಗಳ ಮಹತ್ವವನ್ನು ಸಾರಲಾಗುತ್ತದೆ. ಮಹಿಳೆಯರು ಹೊಸ ಬಟ್ಟೆ ಧರಿಸಿ, ಬಣ್ಣಬಣ್ಣದ ತಟ್ಟೆಗಳಲ್ಲಿ ಎಳ್ಳು, ಬೆಲ್ಲ, ಕಡಲೆಕಾಯಿ, ತೆಂಗಿನಕಾಯಿ, ಕಬ್ಬು ಹಂಚಿಕೊಳ್ಳುತ್ತಾರೆ. ಮನೆ ಮುಂದೆ ರಂಗೋಲಿ, ಎತ್ತುಗಳಿಗೆ ಅಲಂಕಾರ, ವಿಶೇಷ ಪೂಜೆಗಳು ನಡೆಯುತ್ತವೆ.
ಭಾರತದ ವಿವಿಧ ಭಾಗಗಳಲ್ಲಿ ವಿಭಿನ್ನ ಹೆಸರುಗಳೊಂದಿಗೆ ಆಚರಿಸುವ ಸಂಕ್ರಾತಿ: ತಮಿಳುನಾಡಿನಲ್ಲಿ ‘ಪೊಂಗಲ್’ ಹೊಸ ವರ್ಷದ ಹಬ್ಬವಾಗಿ ಆಚರಿಸಲಾಗುತ್ತದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ‘ಸಂಕ್ರಾಂತಿ’ ದೊಡ್ಡ ಕುಟುಂಬ ಹಬ್ಬವಾಗಿದೆ. ಮಹಾರಾಷ್ಟ್ರದಲ್ಲಿ ಸಂಕ್ರಾಂತಿ ಹಬ್ಬದಲ್ಲಿ‘ತಿಳಗುಳ’ ಹಂಚುವ ಪದ್ಧತಿ ಇದೆ.
ಇದನ್ನೂ ಓದಿ: ತೇಜಸ್ವಿ – ವಿಸ್ಮಯ : ಲಾಲ್‌ಬಾಗ್‌ನಲ್ಲಿ ಜ.14ರಿಂದ ಫಲಪುಷ್ಪ ಪ್ರದರ್ಶನ
ಪಂಜಾಬ್‌ನಲ್ಲಿ ಮ್ಯಾಘಿ ಲೋಹ್ರಿ ಬೆಂಕಿಯ ಸುತ್ತ ನೃತ್ಯ ಮತ್ತು ಹಾಡುಗಳೊಂದಿಗೆ ಸಂಭ್ರಮಿಸ ಲಾಗುತ್ತಿದೆ. ರಾಜಸ್ಥಾನ ಗುಜರಾತಿನಲ್ಲಿ (ಉತ್ತರಾಯಣ) ಗಾಳಿಪಟ ಹಾರಿಸುವ ಉತ್ಸವ ವಿಶ್ವವಿಖ್ಯಾತ ವಾಗಿದೆ. ಅಸ್ಸಾಂನಲ್ಲಿ ಮಾಘ ಬಿಹು, ಕಾಶ್ಮೀರದಲ್ಲಿ ,’ಶಿಶುರ ಸೇಕ್ರಾಂತ ‘ಶಬರಿಮಲೆ ಬೆಟ್ಟದಲ್ಲಿ ‘ಮಕರ ವಿಲಕ್ಕೂ’ ಎಂದು ಭಾರತಾದ್ಯಂತ ಸಂಕ್ರಾಂತಿ ಹಬ್ಬ ಆಚರಿಸಲಾಗುತ್ತದೆ. ಈ ಹಬ್ಬದ ಮೊದಲನೇ ದಿನ ಭೋಗಿ ಮಾರನೇ ದಿನ ಕರಿ ಎಂದು ಹೇಳಲಾಗುತ್ತದೆ.
ಭಾರತೀಯ ಹಬ್ಬಗಳು ಕೇವಲ ಸಂಭ್ರಮದ ಆಚರಣೆಗಳಲ್ಲ: ಹಬ್ಬಗಳು ಜೀವನದ ಆಂತರಿಕ ಅರ್ಥವನ್ನು ತಿಳಿಸುವ ಆಧ್ಯಾತ್ಮಿಕ ಸಂದೇಶಗಳ ಸಂಕೇತಗಳು. ಅಂತಹ ಹಬ್ಬಗಳಲ್ಲಿ ಮಕರ ಸಂಕ್ರಾಂತಿ ವಿಶೇಷ ಸ್ಥಾನವನ್ನು ಹೊಂದಿದೆ. ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಈ ಪವಿತ್ರ ಕ್ಷಣವು ಪ್ರಕೃತಿಯಲ್ಲಿ ಮಾತ್ರವಲ್ಲ, ಮಾನವನಲ್ಲಿಯೂ ಹೊಸ ಬೆಳಕನ್ನು ಉಂಟುಮಾಡುವ ಕಾಲವಾಗಿದೆ.
ಸಂಕ್ರಾಂತಿಯಲ್ಲಿ ಸೂರ್ಯ ಉತ್ತರಾಯಣಕ್ಕೆ ತಿರುಗುತ್ತಾನೆ. ಇದು ಕತ್ತಲೆಯಿಂದ ಬೆಳಕಿನತ್ತ ಸಾಗುವ ಸಂಕೇತ. ಆಧ್ಯಾತ್ಮಿಕ ದೃಷ್ಟಿಯಿಂದ ಇದು ಅಜ್ಞಾನದಿಂದ ಜ್ಞಾನದತ್ತ, ನಿರಾಶೆಯಿಂದ ಆಶೆಯತ್ತ, ದುಃಖದಿಂದ ಶಾಂತಿಯತ್ತ ನಡೆಯುವ ಪಯಣವನ್ನು ಸೂಚಿಸುತ್ತದೆ. ಸೂರ್ಯನಂತೆ ನಮ್ಮ ಅಂತರಂಗವೂ ಪ್ರಕಾಶಮಾನವಾಗಬೇಕು ಎಂಬ ಸಂದೇಶವನ್ನು ಸಂಕ್ರಾಂತಿ ನೀಡುತ್ತದೆ.
ಇದನ್ನೂ ಓದಿ: ನಮ್ಮ ಧಾರ್ಮಿಕ ಶ್ರದ್ಧೆ ಸರ್ಕಾರದ ಆಟದ ವಸ್ತುವಲ್ಲ : ಸಿ.ಟಿ.ರವಿ
ಸಂಕ್ರಾಂತಿಯ ಅವಿಭಾಜ್ಯ ಭಾಗವಾದ ಎಳ್ಳು–ಬೆಲ್ಲ ಕೇವಲ ತಿನಿಸಲ್ಲ: ಎಳ್ಳು–ಬೆಲ್ಲ ಎಂಬುದು ಜೀವನದ ತತ್ತ್ವ. ಎಳ್ಳು ಜೀವನದ ಕಠಿಣತೆಗಳನ್ನು, ಬೆಲ್ಲ ಜೀವನದಲ್ಲಿನ ಸಿಹಿತನವನ್ನು ಪ್ರತಿನಿಧಿಸುತ್ತದೆ. ಎರಡನ್ನೂ ಒಟ್ಟಿಗೆ ಸ್ವೀಕರಿಸುವಂತೆ, ಜೀವನದಲ್ಲಿ ಸುಖ–ದುಃಖ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುವ ಮನೋಭಾವವನ್ನು ಇದು ಕಲಿಸುತ್ತದೆ. “ಒಳ್ಳೆಯದನ್ನೇ ಮಾತನಾಡಿ” ಎಂಬ ಸಂದೇಶ ಆತ್ಮಶುದ್ಧಿಗೆ ದಾರಿ ಮಾಡಿಕೊಡುತ್ತದೆ.
ಸಂಕ್ರಾಂತಿಯ ದಿನ ದಾನಕ್ಕೆ ವಿಶೇಷ ಮಹತ್ವವಿದೆ: ಆಹಾರ, ವಸ್ತ್ರ, ಧಾನ್ಯಗಳನ್ನು ದಾನ ಮಾಡುವುದರಿಂದ ಅಹಂಕಾರ ಕಡಿಮೆಯಾಗುತ್ತದೆ, ಕರುಣೆ ಬೆಳೆಯುತ್ತದೆ. ಆಧ್ಯಾತ್ಮಿಕ ಜೀವನದಲ್ಲಿ ತ್ಯಾಗವೇ ಶ್ರೇಷ್ಠ ಸಾಧನೆ. ಕೊಡುವುದರಲ್ಲಿ ಇರುವ ಆನಂದವೇ ನಿಜವಾದ ಸಂಪತ್ತು ಎಂಬ ಸತ್ಯವನ್ನು ಈ ಹಬ್ಬ ಸ್ಮರಿಸುತ್ತದೆ
ಇದನ್ನೂ ಓದಿ: ಲಕ್ಕುಂಡಿ ನಿಧಿ ಸರ್ಕಾರಕ್ಕೆ ನೀಡಿದ ಪ್ರಾಮಾಣಿಕತೆಗೆ ಗೌರವ: ಉಚಿತ ಶಿಕ್ಷಣ – ಕುಟುಂಬಕ್ಕೆ ಮನೆ–ಉದ್ಯೋಗದ ಭರವಸೆ
ಸಂಕ್ರಾಂತಿ ಹೊಸ ಆರಂಭದ ಸೂಚಕ: ಹಳೆಯ ದೋಷಗಳು, ನಕಾರಾತ್ಮಕ ಚಿಂತನೆಗಳನ್ನು ಬಿಟ್ಟು ಪವಿತ್ರ ಚಿಂತನೆ, ಶುದ್ಧ ಭಾವನೆ ಮತ್ತು ಸತ್ಕರ್ಮಗಳತ್ತ ಮುಖ ಮಾಡುವ ಸಮಯ ಇದು. ನಮ್ಮಲ್ಲಿ ಪ್ರೀತಿ ಸ್ನೇಹ ಬೆಳೆಯಬೇಕೆಂದರೆ ದೇಹದ ಧರ್ಮಗಳನ್ನು ಮರೆತು ವಿಶ್ವಕ್ಕೆ ಒಡೆಯನಾಗಿರುವ ಒಬ್ಬ ನಿರಾಕಾರ ಭಗವಂತನ ಮಕ್ಕಳು ನಾವೆಲ್ಲ ಎಂಬುದನ್ನು ಅರಿಯಬೇಕು.
ಮಹಾತ್ಮ ಬಸವಣ್ಣವರ ವಚನದಲ್ಲಿರುವ ಇವನಾರು ಇವನಾರು ಎಂದೆನಿಸುತ್ತಿರಯ್ಯ ಇವ ನಮ್ಮವ ಇವ ನಮ್ಮವ ಎಂದು ತಿಳಿದು ಸರ್ವರನ್ನು ಪ್ರೀತಿಯಿಂದ ಕಾಣಬೇಕಾಗಿದೆ. ನಮ್ಮ ಮಾತುಗಳು ಮುತ್ತಿನಂತೆ ಇರಬೇಕು, ಮಿತ ಮತ್ತು ಮಧುರವಾಗಿರಬೇಕು. ಕಟುವಚನ ಆಗಿರಬಾರದು. ಆದ್ದರಿಂದಲೇ ಹಿಂದಿಯಲ್ಲಿ ಗೂಡ್ ನಹಿ ದೋ ಲೆಕಿನ್ ಗೂಡ್ ಜೈಸಾ ಮೀಠಾ ತೋ ಬೋಲೋ ಎಂಬ ಗಾದೆ ಇದೆ.
ಇದನ್ನೂ ಓದಿ: ಅನ್ನದಾತೆಯ ಸಂಕ್ರಾಂತಿ: ರೈತ ಮಹಿಳೆಯರಿಗೆ ಸಮರ್ಪಿತ ಸಂಭ್ರಮ
ಹೀಗೆ ನಾವೆಲ್ಲರೂ ಭಗವಂತನ ಮಕ್ಕಳು ಎಂದು ತಿಳಿದು ಅವನ ಛತ್ರ ಛಾಯೆಯಲ್ಲಿ ಇದ್ದರೆ ಭೂಕಂಪ, ಯುದ್ಧಗಳು, ಅತಿವೃಷ್ಟಿ ಅನಾವೃಷ್ಟಿ ಮತ್ತು ಅನೇಕ ಪ್ರಕೋಪ ವಿಕೋಪಗಳಿಂದ ಭಯಪಡದೆ ಅರ್ಥಗರ್ಭಿತವಾದ ಸಂಕ್ರಾಂತಿ ಹಬ್ಬವನ್ನು ಆಚರಿಸಬಹುದು.























