SK Home Ad
Home ಸುದ್ದಿ ರಾಜ್ಯ ವಿದ್ಯಾರ್ಥಿಗಳೇ ಗಮನಿಸಿ; ಉಚಿತ ಬಸ್ ಪಾಸ್ ವಿಳಂಬ! ಕೊನೆಗೂ ಸತ್ಯ ಬಿಚ್ಚಿಟ್ಟ ಸಾರಿಗೆ ಸಚಿವರು?

ವಿದ್ಯಾರ್ಥಿಗಳೇ ಗಮನಿಸಿ; ಉಚಿತ ಬಸ್ ಪಾಸ್ ವಿಳಂಬ! ಕೊನೆಗೂ ಸತ್ಯ ಬಿಚ್ಚಿಟ್ಟ ಸಾರಿಗೆ ಸಚಿವರು?

0
52

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಸಚಿವ ಸಂಪುಟ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಣೆ ಮಾಡಿದ್ದರು. ಸರ್ಕಾರದ ಈ ಮಹತ್ವದ ನಿರ್ಧಾರದಿಂದ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಭಾರಿ ಸಂತಸ ಮೂಡಿತ್ತು. ಆದರೆ, ಈಗ ಸಿಗುತ್ತಿರುವ ಲೇಟೆಸ್ಟ್ ಮಾಹಿತಿಯ ಪ್ರಕಾರ, ವಿದ್ಯಾರ್ಥಿಗಳ ಕೈಗೆ ಈ ಉಚಿತ ಬಸ್ ಪಾಸ್ ಸಿಗುವುದು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಹೌದು, ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಈ ತಿಂಗಳೊಳಗೆ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ಸಿಗುವುದು ಅನುಮಾನ ಎನ್ನಲಾಗುತ್ತಿದೆ.

ಸಾರಿಗೆ ಸಚಿವರ ಸಭೆ ಮತ್ತು ಸಿದ್ಧತೆ:

ಯೋಜನೆ ಘೋಷಣೆಯಾದ ಬೆನ್ನಲ್ಲೇ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. ಈ ಉಚಿತ ಬಸ್ ಪಾಸ್ ವಿತರಣೆಗೆ ತಗಲುವ ಒಟ್ಟು ಖರ್ಚು ವೆಚ್ಚ ಎಷ್ಟು? ಮತ್ತು ರಾಜ್ಯಾದ್ಯಂತ ಎಷ್ಟು ವಿದ್ಯಾರ್ಥಿಗಳಿಗೆ ಈ ಸೌಲಭ್ಯವನ್ನು ನೀಡಬೇಕಾಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಅವರು ಪಡೆದುಕೊಂಡಿದ್ದಾರೆ. ಸಭೆಯ ಬಳಿಕ ಮಾತನಾಡಿದ ಸಚಿವರು, ಮುಖ್ಯಮಂತ್ರಿಗಳು ಅಧಿಕೃತವಾಗಿ ಘೋಷಣೆ ಮಾಡಿರುವುದರಿಂದ ಉಚಿತ ಬಸ್ ಪಾಸ್ ಕೊಟ್ಟೇ ಕೊಡ್ತೇವೆ, ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಈ ಪ್ರಸ್ತಾವನೆಯನ್ನು ಮೊದಲು ಕ್ಯಾಬಿನೆಟ್ ಮುಂದೆ ಇಡಬೇಕಾಗಿದೆ. ಅದರೊಂದಿಗೆ ಅಷ್ಟೊಂದು ದೊಡ್ಡ ಸಂಖ್ಯೆಯ ಬಸ್ ಪಾಸ್‌ಗಳನ್ನು ಪ್ರಿಂಟ್ ಮಾಡಲು ಸಾಕಷ್ಟು ಸಮಯಾವಕಾಶ ಬೇಕಾಗುತ್ತದೆ ಎನ್ನುವ ಅರ್ಥದಲ್ಲಿ ಅವರು ಮಾತನಾಡಿದ್ದಾರೆ. ಅಧಿಕಾರಿಗಳು ಮತ್ತು ಸಚಿವರ ಈ ಮಾತುಗಳನ್ನು ಗಮನಿಸಿದರೆ, ಪಾಸ್ ವಿತರಣೆ ಪ್ರಕ್ರಿಯೆ ಸಂಪೂರ್ಣವಾಗಿ ಆರಂಭವಾಗಲು ಕನಿಷ್ಠ ಇನ್ನೂ ಒಂದು ತಿಂಗಳ ಕಾಲ ತಡವಾಗುವ ಸಾಧ್ಯತೆ ದಟ್ಟವಾಗಿದೆ.

ಸರ್ಕಾರಕ್ಕೆ ಕೋಟಿ ಕೋಟಿ ಹೊರೆ:

ಇನ್ನು ಈ ಯೋಜನೆಯ ವ್ಯಾಪ್ತಿ ಮತ್ತು ಆರ್ಥಿಕ ಹೊರೆಯ ಬಗ್ಗೆ ನೋಡುವುದಾದರೆ, ರಾಜ್ಯದಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಉಚಿತ ಬಸ್ ಪಾಸ್ ವ್ಯಾಪ್ತಿಗೆ ಬರುತ್ತಾರೆ ಎಂದು ಅಂದಾಜಿಸಲಾಗಿದೆ. ಇಷ್ಟೊಂದು ಬೃಹತ್ ಸಂಖ್ಯೆಯ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವುದರಿಂದ, ರಾಜ್ಯ ಸರ್ಕಾರಕ್ಕೆ ವಾರ್ಷಿಕವಾಗಿ ಸುಮಾರು 1,500 ಕೋಟಿಯಿಂದ 1,800 ಕೋಟಿ ರೂಪಾಯಿಗಳವರೆಗೆ ಹೆಚ್ಚುವರಿ ವೆಚ್ಚ ಆಗುವ ಸಾಧ್ಯತೆಯಿದೆ. ಸದ್ಯಕ್ಕೆ ಇಲಾಖೆಯ ಮಟ್ಟದಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿದ್ದರೂ, ವಿದ್ಯಾರ್ಥಿಗಳು ಉಚಿತವಾಗಿ ಬಸ್‌ನಲ್ಲಿ ಪ್ರಯಾಣಿಸಲು ಅಧಿಕೃತ ಪಾಸ್ ಕೈ ಸೇರುವವರೆಗೆ ಇನ್ನೂ ಕೆಲವು ದಿನಗಳ ಕಾಲ ಕಾಯಲೇಬೇಕಾಗಿದೆ. ಸರ್ಕಾರ ನಿಖರವಾಗಿ ಯಾವ ದಿನಾಂಕದಿಂದ ಈ ಪಾಸ್ ವಿತರಣೆ ಆರಂಭಿಸಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.