Home Advertisement
Home ಸುದ್ದಿ ರಾಜ್ಯ HSRP ನಂಬರ್ ಪ್ಲೇಟ್ ವದಂತಿಗಳಿಗೆ ಸಾರಿಗೆ ಇಲಾಖೆ ಬ್ರೇಕ್!

HSRP ನಂಬರ್ ಪ್ಲೇಟ್ ವದಂತಿಗಳಿಗೆ ಸಾರಿಗೆ ಇಲಾಖೆ ಬ್ರೇಕ್!

0
134

ಬೆಂಗಳೂರು: ರಾಜ್ಯದಲ್ಲಿ 2019ರ ಏಪ್ರಿಲ್ 1 ಕ್ಕಿಂತ ಮುಂಚೆ ನೋಂದಾಯಿಸಲ್ಪಟ್ಟ ವಾಹನಗಳಿಗೆ ಹೈ ಸೆಕ್ಯುರಿಟಿ ನೋಂದಣಿ ಫಲಕ (HSRP) ಅಳವಡಿಕೆ ಕಡ್ಡಾಯವಲ್ಲ ಎಂಬಂತೆ ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ಸುದ್ದಿಗಳಿಗೆ ಕರ್ನಾಟಕ ಸಾರಿಗೆ ಇಲಾಖೆ ಸ್ಪಷ್ಟನೆ ನೀಡಿದ್ದು, ಸಾರ್ವಜನಿಕರಲ್ಲಿ ಉಂಟಾಗಿದ್ದ ಗೊಂದಲಕ್ಕೆ ತೆರೆ ಎಳೆದಿದೆ.

ಸಾರಿಗೆ ಇಲಾಖೆಯ ಪ್ರಕಾರ, ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989ರ ನಿಯಮ 50 ಅಡಿಯಲ್ಲಿ ಕೇಂದ್ರ ಸರ್ಕಾರವು 2018ರ ಡಿಸೆಂಬರ್ 4ರಂದು ಅಧಿಸೂಚನೆ ಹೊರಡಿಸಿ, 2019ರ ಏಪ್ರಿಲ್ 1ಕ್ಕೂ ಮುಂಚೆ ನೋಂದಾಯಿಸಲ್ಪಟ್ಟ ಎಲ್ಲಾ ವಾಹನಗಳಿಗೆ HSRP ಅಳವಡಿಕೆಯನ್ನು ಕಡ್ಡಾಯಗೊಳಿಸಿದೆ. ಇದಕ್ಕೆ ಅನುಗುಣವಾಗಿ ಕರ್ನಾಟಕ ಸರ್ಕಾರವೂ 2023ರ ಆಗಸ್ಟ್ 17ರಂದು ಅಧಿಸೂಚನೆ ಹೊರಡಿಸಿತ್ತು.

ಇತ್ತೀಚೆಗೆ ಕೆಲವು ಮಾಧ್ಯಮಗಳಲ್ಲಿ “ಹಳೆಯ ವಾಹನಗಳಿಗೆ HSRP ಕಡ್ಡಾಯವಲ್ಲ” ಎಂಬ ಸುದ್ದಿ ಪ್ರಸಾರವಾಗುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದ್ದು, ಈ ಮಾಹಿತಿಯು ತಪ್ಪು ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಕಾನೂನಾತ್ಮಕವಾಗಿ HSRP ಅಳವಡಿಕೆ ಕಡ್ಡಾಯ : HSRP ಅಳವಡಿಕೆ ಸಂಬಂಧ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. WA No.1361/2023 ಪ್ರಕರಣದಲ್ಲಿ ನ್ಯಾಯಾಲಯವು ಕೆಲವು ನಿರ್ದಿಷ್ಟ ನಿರ್ದೇಶನಗಳನ್ನು ನೀಡಿದ್ದು, HSRP ಜಾರಿಗೆ ಸಂಬಂಧಿಸಿದಂತೆ ತಕ್ಷಣದ ಕ್ರಮ ಕೈಗೊಳ್ಳಬಾರದು ಎಂದು ರಾಜ್ಯಕ್ಕೆ ಸೂಚಿಸಿದೆ.

ಆದರೆ, ಈ ಆದೇಶವು HSRP ಕಡ್ಡಾಯಗೊಳಿಸಿದ ಅಧಿಸೂಚನೆಯನ್ನು ರದ್ದುಪಡಿಸಿರುವುದಿಲ್ಲ. ಅಂದರೆ, ಕಾನೂನಾತ್ಮಕವಾಗಿ HSRP ಅಳವಡಿಕೆ ಇನ್ನೂ ಕಡ್ಡಾಯವಾಗಿಯೇ ಉಳಿದಿದೆ.

ಸಾರಿಗೆ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದ್ದು, “ಸಾಮಾಜಿಕ ಜಾಲತಾಣ ಹಾಗೂ ಕೆಲ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ತಪ್ಪು ಮಾಹಿತಿಗೆ ಒಳಗಾಗದೆ, ತಮ್ಮ ವಾಹನಗಳಿಗೆ HSRP ಅಳವಡಿಸಿಕೊಳ್ಳಬೇಕು” ಎಂದು ತಿಳಿಸಿದೆ.