ಬೆಂಗಳೂರು: ವರ್ಷದ ಮೊದಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೆ, ತಾವೇ ಸಿದ್ಧಪಡಿಸಿದ ಭಾಷಣವನ್ನು ಓದಿರುವುದು ಸಂವಿಧಾನಾತ್ಮಕ ವಿಧಿಗಳ ಸ್ಪಷ್ಟ ಉಲ್ಲಂಘನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ನಡೆ ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನವಾಗಿದ್ದು, ಸಂವಿಧಾನದ ಆತ್ಮಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿ ವರ್ಷದ ಆರಂಭದಲ್ಲಿ ಹಾಗೂ ಹೊಸ ಸರ್ಕಾರ ರಚನೆಯಾದ ಸಂದರ್ಭದಲ್ಲಿ ನಡೆಯುವ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದುವುದು ಸಂವಿಧಾನಬದ್ಧ ಕರ್ತವ್ಯವಾಗಿದೆ ಎಂದು ಸ್ಪಷ್ಟಪಡಿಸಿದರು. ಸಂವಿಧಾನದ ಕಲಂ 176 ಮತ್ತು 163ರ ಪ್ರಕಾರ, ರಾಜ್ಯಪಾಲರು ಸರ್ಕಾರದ ಸಲಹೆಯಂತೆ ಮಾತ್ರ ನಡೆದುಕೊಳ್ಳಬೇಕು ಎಂಬ ನಿಯಮವಿದ್ದು, ಸ್ವಂತ ಭಾಷಣವನ್ನು ಓದುವ ಅಧಿಕಾರ ಅವರಿಗೆ ಇಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ: ತಮಿಳುನಾಡು, ಕೇರಳ ಬಳಿಕ ಕರ್ನಾಟಕದಲ್ಲೂ ರಾಜ್ಯಪಾಲ–ಸರ್ಕಾರ ಭಾಷಣ ಸಂಘರ್ಷ
ಇಂದು ನಡೆದ ವರ್ಷದ ಮೊದಲ ಜಂಟಿ ಅಧಿವೇಶನ ಮತ್ತು ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲರು ಈ ಸಂವಿಧಾನಾತ್ಮಕ ಪದ್ಧತಿಯನ್ನು ಉಲ್ಲಂಘಿಸಿದ್ದಾರೆ. ಇದು ಸಂವಿಧಾನ ಸ್ಥಾಪನೆಯಾದಾಗಿನಿಂದ ನಡೆದುಕೊಂಡು ಬಂದಿರುವ ಪರಂಪರೆಗೆ ವಿರುದ್ಧವಾಗಿದೆ ಎಂದು ಮುಖ್ಯಮಂತ್ರಿ ಆರೋಪಿಸಿದರು.
ಈ ವೇಳೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಕಸಿತ ಭಾರತ – ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (VBGRG) ಕಾಯ್ದೆಯನ್ನೂ ಮುಖ್ಯಮಂತ್ರಿ ತೀವ್ರವಾಗಿ ಖಂಡಿಸಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಮನರೇಗಾ) ಯನ್ನು ರದ್ದುಪಡಿಸಿ ಹೊಸ ಕಾಯ್ದೆ ತರಲಾಗಿರುವುದು ಬಡವರ ವಿರೋಧಿ ಕ್ರಮವಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಸರ್ಕಾರದ ಭಾಷಣ ಓದದೆ ವಾಪಸ್ ಆದ ರಾಜ್ಯಪಾಲರು
ಮನರೇಗಾ ಕಾಯ್ದೆಯನ್ನು 2005ರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತಂದಿದ್ದು, ಆಹಾರ ಭದ್ರತೆ, ಮಾಹಿತಿ ಹಕ್ಕು, ಶಿಕ್ಷಣ ಹಕ್ಕು, ಉದ್ಯೋಗ ಹಕ್ಕುಗಳಂತೆ ಸಂವಿಧಾನಾತ್ಮಕ ನಿರ್ದೇಶನ ತತ್ವಗಳ ಭಾಗವಾಗಿತ್ತು. ಈ ಕಾಯ್ದೆಯ ಮೂಲಕ ಬಡ ಕಾರ್ಮಿಕರಿಗೆ ಕನಿಷ್ಠ 100 ದಿನಗಳ ಉದ್ಯೋಗದ ಖಾತರಿ ದೊರಕಿತ್ತು. ವಿಶೇಷವಾಗಿ ದಲಿತರು, ಮಹಿಳೆಯರು, ಸಣ್ಣ ರೈತರು ಮತ್ತು ಗ್ರಾಮೀಣ ಕಾರ್ಮಿಕರಿಗೆ ಇದು ಆರ್ಥಿಕ ಭದ್ರತೆಯನ್ನು ಒದಗಿಸಿತ್ತು ಎಂದು ಸಿದ್ದರಾಮಯ್ಯ ವಿವರಿಸಿದರು.
ಹೊಸ ಕಾಯ್ದೆಯಲ್ಲಿ ಶೇ.53 ಮಹಿಳೆಯರು ಹಾಗೂ ಶೇ.28 ದಲಿತರು ಸೇರಿರುವ ದೊಡ್ಡ ವರ್ಗಕ್ಕೆ ಉದ್ಯೋಗದ ಖಾತರಿ ಇಲ್ಲದಂತಾಗಿದೆ. ಹಿಂದಿನ ಕಾಯ್ದೆಯಲ್ಲಿ ಕಾರ್ಮಿಕರು ತಮ್ಮ ಅಪೇಕ್ಷಿತ ಸ್ಥಳದಲ್ಲೇ, ತಮ್ಮ ಗ್ರಾಮ ಅಥವಾ ಜಮೀನಿನಲ್ಲಿಯೇ ಕೆಲಸ ಮಾಡುವ ಅವಕಾಶವಿತ್ತು. ಆದರೆ ಹೊಸ ಕಾಯ್ದೆಯಲ್ಲಿ ಕೆಲಸದ ಸ್ಥಳವನ್ನು ಕೇಂದ್ರ ಸರ್ಕಾರವೇ ನಿರ್ಧರಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಬಡ ಕಾರ್ಮಿಕರಿಗೆ ತೀವ್ರ ಅನಾನುಕೂಲ ಉಂಟಾಗಲಿದೆ ಎಂದು ಮುಖ್ಯಮಂತ್ರಿ ಎಚ್ಚರಿಸಿದರು.
ಇದನ್ನೂ ಓದಿ: ಅಂಕಣ ಬರಹ: ಗ್ರಾಮ ಸ್ವರಾಜ್ – ಪಂಚಾಯತರಾಜ್ ಕತ್ತಿಗೆ ಕೈ
ಇದಲ್ಲದೆ, ಹಿಂದಿನ ಮನರೇಗಾ ಕಾಯ್ದೆಯಲ್ಲಿ ವರ್ಷಪೂರ್ತಿ ಉದ್ಯೋಗ ಒದಗಿಸುವ ಹೊಣೆ ಸರ್ಕಾರದ ಮೇಲಿದ್ದು, ಗ್ರಾಮಸಭೆ ಹಾಗೂ ಪಂಚಾಯಿತಿಗಳಿಗೆ ಕ್ರಿಯಾ ಯೋಜನೆ ರೂಪಿಸುವ ಅಧಿಕಾರವಿತ್ತು. ಆದರೆ ಹೊಸ ಕಾಯ್ದೆಯಲ್ಲಿ ಈ ಎಲ್ಲಾ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ ಎಂದು ಅವರು ಆರೋಪಿಸಿದರು.
ರಾಜ್ಯಪಾಲರು ಈ ಹೊಸ ಕಾಯ್ದೆಯನ್ನು ಉದ್ದೇಶಪೂರ್ವಕವಾಗಿ ಸಮರ್ಥಿಸುತ್ತಿದ್ದಾರೆ. ಅವರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದು, ಕೇಂದ್ರದ ನೀತಿಗಳಿಗೆ ಮಾತ್ರ ಬೆಂಬಲ ನೀಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದರು. ಆದರೆ ಆಡಳಿತ ಪಕ್ಷವಾಗಿ ಮತ್ತು ರಾಜ್ಯ ಸರ್ಕಾರವಾಗಿ ಈ ಕಾಯ್ದೆಗೆ ನಮ್ಮ ಸ್ಪಷ್ಟ ವಿರೋಧವಿದೆ. ಆ ಕಾರಣದಿಂದಲೇ ಈ ವಿಷಯಗಳನ್ನು ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ಸೇರಿಸಲಾಗಿತ್ತು ಎಂದು ಅವರು ಹೇಳಿದರು.
ಇದನ್ನೂ ಓದಿ: ಬಡವರ ಕನಸು ನನಸಾಗಿಸುವ ಗುರಿ: ಜಮೀರ್ ಅಹ್ಮದ್
ಮನರೇಗಾ ಕಾಯ್ದೆಯನ್ನು ಮರುಸ್ಥಾಪಿಸುವುದು ಹಾಗೂ ಹೊಸ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವುದು ನಮ್ಮ ಪಕ್ಷ ಮತ್ತು ಸರ್ಕಾರದ ದೃಢ ನಿರ್ಧಾರವಾಗಿದೆ. ಈ ಹಿಂದೆ ರೈತ ವಿರೋಧಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ಸು ಪಡೆದಂತೆ, ಈ ಹೊಸ ಕಾಯ್ದೆಯನ್ನೂ ವಾಪಸ್ಸು ಪಡೆಯುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಘೋಷಿಸಿದರು.
ರಾಜ್ಯಪಾಲರ ನಡೆ ಸಂವಿಧಾನಬಾಹಿರವಾಗಿದ್ದು, ಜನಪ್ರತಿನಿಧಿಗಳ ಗೌರವಕ್ಕೆ ಧಕ್ಕೆ ತಂದಿದೆ. ಇದನ್ನು ವಿರೋಧಿಸಿ ಪಕ್ಷ, ಸರ್ಕಾರ, ಶಾಸಕರು ಹಾಗೂ ಎಂಎಲ್ಸಿಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ. ಈ ವಿಷಯದ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವ ಕುರಿತು ಚರ್ಚೆ ನಡೆಯುತ್ತಿದ್ದು, ಅಗತ್ಯವಿದ್ದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ನಿರ್ಧಾರವೂ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಸರ್ಕಾರ ಸಿದ್ಧಪಡಿಸಿರುವ ಭಾಷಣದ ಪ್ರತಿಯನ್ನು ಎಲ್ಲಾ ಶಾಸಕರು ಮತ್ತು ಎಂಎಲ್ಸಿಗಳಿಗೆ ವಿತರಿಸಲಾಗಿದ್ದು, ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.





















