Home Advertisement
Home ಸುದ್ದಿ ವಿದೇಶ ಯುದ್ಧದ ಭೀತಿ ನಡುವೆ ಶಾಂತಿಯತ್ತ ಹೆಜ್ಜೆ: ಇರಾನ್ ಮೇಲಿನ ಬಾಂಬ್ ದಾಳಿ ನಿರ್ಧಾರ ಹಿಂಪಡೆದ ಅಮೆರಿಕ

ಯುದ್ಧದ ಭೀತಿ ನಡುವೆ ಶಾಂತಿಯತ್ತ ಹೆಜ್ಜೆ: ಇರಾನ್ ಮೇಲಿನ ಬಾಂಬ್ ದಾಳಿ ನಿರ್ಧಾರ ಹಿಂಪಡೆದ ಅಮೆರಿಕ

0
21

ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿದ್ದ ಯುದ್ಧದ ಭೀತಿಯ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ. ಇರಾನ್ ವಿರುದ್ಧ ಘೋಷಿಸಲಾಗಿದ್ದ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮವು ಅಂತ್ಯಗೊಳ್ಳಲು ಕೆಲವೇ ಗಂಟೆಗಳು ಬಾಕಿ ಇರುವಾಗ, ಅದನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ.

ಹಾಗೆ ಶಾಂತಿ ಮಾತುಕತೆಗಾಗಿ ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನದ ಮನವಿಗೆ ಸ್ಪಂದಿಸಿ, ಈ ನಿರ್ಧಾರ ಕೈಗೊಂಡಿರುವುದಾಗಿ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಾಕುವ ಮುಲಕ ತಿಳಿಸಿದ್ದಾರೆ. “ಇರಾನ್ ನಾಯಕರು ಮತ್ತು ಪ್ರತಿನಿಧಿಗಳು ಒಂದು ಸಮಗ್ರ ಹಾಗೂ ಏಕರೂಪದ ಪ್ರಸ್ತಾವನೆಯೊಂದಿಗೆ ಬರುವವರೆಗೆ ಈ ಕದನ ವಿರಾಮ ಮುಂದುವರಿಯಲಿದೆ. ಚರ್ಚೆಗಳು ಒಂದು ನಿರ್ಣಾಯಕ ಹಂತ ತಲುಪುವವರೆಗೆ ದಾಳಿ ನಡೆಸುವುದಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.

ವಿಶೇಷವೆಂದರೆ ಕೇವಲ ಒಂದು ದಿನದ ಹಿಂದೆಯಷ್ಟೇ “ಯುದ್ಧ ವಿರಾಮ ವಿಸ್ತರಣೆ ಇಲ್ಲ, ಇರಾನ್ ಮೇಲೆ ಬಾಂಬ್ ದಾಳಿ ನಡೆಸುತ್ತೇವೆ” ಎಂದು ಟ್ರಂಪ್ ಗುಡುಗಿದ್ರು. ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸುವುದಾಗಿ, ನೀಡಿದ್ದ ಹೇಳಿಕೆಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಸೇರಿದಂತೆ ಜಾಗತಿಕ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇಂತಹ ದಾಳಿಗಳು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಉಲ್ಲಂಘನೆಯಾಗುತ್ತವೆ ಎಂಬ ಎಚ್ಚರಿಕೆಯ ಬೆನ್ನಲ್ಲೇ ಟ್ರಂಪ್ ತಮ್ಮ ನಿಲುವು ಬದಲಿಸಿರುವುದು ಗಮನಾರ್ಹವಾಗಿದೆ.

ಫೆಬ್ರುವರಿ 28ರಂದು ಇಸ್ರೇಲ್ ಜೊತೆಗೂಡಿ ಇರಾನ್ ವಿರುದ್ಧ ಯುದ್ಧ ಆರಂಭಿಸಿದ್ದ ಅಮೆರಿಕ, ಸದ್ಯ ಕದನ ವಿರಾಮ ಘೋಷಿಸಿದ್ದರೂ ತನ್ನ ಬಿಗಿಹಿಡಿತವನ್ನು ಸಡಿಲಿಸಿಲ್ಲ. “ಇರಾನ್ ಸರ್ಕಾರ ಈಗಾಗಲೇ ಗಂಭೀರವಾಗಿ ಹಾನಿಗೊಳಗಾಗಿದೆ. ಮಾನವೀಯ ದೃಷ್ಟಿಯಿಂದ ಕದನ ವಿರಾಮ ವಿಸ್ತರಿಸುತ್ತಿದ್ದೇವೆಯೇ ಹೊರತು, ಇರಾನ್‌ನ ಬಂದರುಗಳು ಮತ್ತು ಕರಾವಳಿಯ ಮೇಲೆ ಅಮೆರಿಕ ನೌಕಾಪಡೆಯ ದಿಗ್ಬಂಧನವು ಮುಂದುವರಿಯಲಿದೆ,” ಎಂದು ಟ್ರಂಪ್ ಎಚ್ಚರಿಸಿದ್ದಾರೆ.

ಈ ಬೆಳವಣಿಗೆಯು ಪಶ್ಚಿಮ ಏಷ್ಯಾದಲ್ಲಿ ಸದ್ಯಕ್ಕೆ ಉಂಟಾಗಿದ್ದ ಉದ್ವಿಗ್ನತೆಯನ್ನು ತುಸು ತಣಿಸಿದ್ದು, ಮುಂದಿನ ಶಾಂತಿ ಮಾತುಕತೆಗಳ ಮೇಲೆ ಜಗತ್ತಿನ ಕಣ್ಣು ನೆಟ್ಟಿದೆ ಎನ್ನಬಹುದು.