ಕಠ್ಮಂಡು: ನೇಪಾಳದ ರಾಜಕೀಯದಲ್ಲಿ ಮಹತ್ವದ ತಿರುವು ಸಂಭವಿಸಿದ್ದು, ರಾಷ್ಟ್ರೀಯ ಸ್ವತಂತ್ರ ಪಕ್ಷ (RSP) ನಾಯಕ ಬಾಲೇಂದ್ರ ಶಾ ಇಂದು ದೇಶದ ಹೊಸ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಠ್ಮಂಡುವಿನ ಶೀತಲ್ ನಿವಾಸ್‌ನಲ್ಲಿರುವ ಅಧ್ಯಕ್ಷರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅವರು ಪದಗ್ರಹಣ ಮಾಡಿದರು.
ಯುವ ನಾಯಕನಿಗೆ ಅಧಿಕಾರ : 35 ವರ್ಷದ ಬಾಲೇಂದ್ರ ಶಾ, “ಬಾಲೆನ್” ಎಂದೇ ಪ್ರಸಿದ್ಧರಾಗಿದ್ದು, ನೇಪಾಳದ ಅತ್ಯಂತ ಕಿರಿಯ ಚುನಾಯಿತ ಪ್ರಧಾನಿಯಾಗಿರುವುದು ವಿಶೇಷವಾಗಿದೆ. ಅತ್ಯಂತ ಜನಪ್ರಿಯ ರಾಪರ್ (Rapper) ಮತ್ತು ಸ್ಟ್ರಕ್ಚರಲ್ ಎಂಜಿನಿಯರ್ ಆಗಿದ್ದ ಬಾಲೇಂದ್ರ ಶಾ ರ‍್ಯಾಪರ್‌ನಿಂದ ರಾಜಕಾರಣಿಯಾಗಿ ರೂಪಾಂತರಗೊಂಡ ಅವರು, ಯುವಜನರ ವಿಶ್ವಾಸದ ಪ್ರತೀಕವಾಗಿ ಹೊರಹೊಮ್ಮಿದ್ದಾರೆ.
ಭರ್ಜರಿ ಗೆಲುವು, ಹೊಸ ರಾಜಕೀಯ ಅಲೆ: ಮಾರ್ಚ್ 5ರಂದು ನಡೆದ ಸಂಸತ್ ಚುನಾವಣೆಯಲ್ಲಿ RSP ಪಕ್ಷ ಭರ್ಜರಿ ಜಯ ಸಾಧಿಸಿ, ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ 275 ಸ್ಥಾನಗಳಲ್ಲಿ 182 ಸ್ಥಾನಗಳನ್ನು ಗೆದ್ದಿದೆ. ಇದರೊಂದಿಗೆ ಸಾಂಪ್ರದಾಯಿಕ ರಾಜಕೀಯ ಪಕ್ಷಗಳಿಗೆ ಭಾರೀ ಹೊಡೆತ ನೀಡಿದೆ.
ಕರ್ನಾಟಕದ ನಂಟು: ಬಾಲೇಂದ್ರ ಶಾ ಅವರು ಕರ್ನಾಟಕದ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (VTU) ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿ (M.Tech) ವ್ಯಾಸಂಗ ಮಾಡಿದ್ದಾರೆ.
ಹಿರಿಯ ನಾಯಕರಿಗೆ ಸೋಲು : ಬಾಲೇಂದ್ರ ಶಾ, ನೇಪಾಳ ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಕೆ.ಪಿ. ಶರ್ಮಾ ಓಲಿ ಅವರನ್ನು ಝಾಪಾ-5 ಕ್ಷೇತ್ರದಲ್ಲಿ ಭಾರೀ ಅಂತರದಿಂದ ಸೋಲಿಸಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
ಪ್ರಧಾನಿ ಮೋದಿ ಅಭಿನಂದನೆ: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಾಲೇಂದ್ರ ಶಾ ಅವರಿಗೆ ಅಭಿನಂದನೆ ಸಲ್ಲಿಸಿ, “ಭಾರತ-ನೇಪಾಳ ಸ್ನೇಹ ಮತ್ತು ಸಹಕಾರವನ್ನು ಮತ್ತಷ್ಟು ಬಲಪಡಿಸಲು ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ” ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಪೀಳಿಗೆಯ ಬದಲಾವಣೆಯ ಸಂಕೇತ : ಕಳೆದ ವರ್ಷದ ಜನರಲ್ Z ಪ್ರತಿಭಟನೆಗಳ ನಂತರ ನಡೆದ ಈ ಚುನಾವಣೆಯಲ್ಲಿ ಯುವ ನಾಯಕತ್ವದತ್ತ ಜನರು ತಿರುಗಿರುವುದು ಸ್ಪಷ್ಟವಾಗಿದೆ. ಭ್ರಷ್ಟಾಚಾರ ಮುಕ್ತ ಆಡಳಿತ ಹಾಗೂ ಹೊಸ ದಾರಿಯ ನಿರೀಕ್ಷೆಯಲ್ಲಿ ಜನತೆ ಮತ ನೀಡಿದ್ದಾರೆ.























