ಕಾಠ್ಮಂಡು: ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧ ಪ್ರತಿಭಟಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆ ನಂತರ ಬುಧವಾರ ಕಾಠ್ಮಂಡವಿನಲ್ಲಿ ಬೆಂಕಿ ಮುಚ್ಚಿದ ಕೆಂಡದಂತಿದೆ. ಎರಡು ದಿನಗಳ ಹಿಂಸಾಚಾರದಲ್ಲಿ ಒಟ್ಟು ಸತ್ತವರ ಸಂಖ್ಯೆ 29ಕ್ಕೆ ಏರಿದ್ದು, ರಾಜಕಾರಣಿಗಳ ನಿವಾಸಗಳು, ಸರ್ಕಾರಿ ಕಚೇರಿಗಳು ಧ್ವಂಸಗೊಂಡು ಅಗ್ನಿಗಾಹುತಿಯಾಗಿವೆ.
ಬುಧವಾರ ಸೇನೆಯಿಂದ ಬಿಗಿ ಬಂದೋಬಸ್ತ್ ಏರ್ಪಾಡಾಗಿದ್ದು, ಗುರುವಾರ ಬೆಳಗಿನವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಬೆಂಕಿ ಹಚ್ಚಲಾಗಿದ್ದ ಕಟ್ಟಡಗಳಿಂದ ಇನ್ನೂ ಹೊಗೆ ಏಳುತ್ತಿದ್ದು, ಜನ ನಿಷೇಧಾಜ್ಞೆ ಒಪ್ಪಿಕೊಂಡು ಮನೆ ಸೇರಿಕೊಂಡಿದ್ದರು. ಹೀಗಾಗಿ ಬುಧವಾರ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.
ಪರಿಸ್ಥಿತಿಯನ್ನು ತಹಬಂದಿಗೆ ತರಲು ಮಿಲಿಟರಿ ಪ್ರಯತ್ನಿಸುತ್ತಿದ್ದು, ವಿದ್ಯಾರ್ಥಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ವಿದ್ಯಾರ್ಥಿ ನಾಯಕರು ತಮ್ಮ ಬೇಡಿಕೆಗಳ ಹೊಸ ಪಟ್ಟಿಯನ್ನು ನೀಡಿದ್ದಾರೆ. ನೇಪಾಳ ಪ್ರತಿಭಟನೆಯನ್ನು ಅವಕಾಶವಾದಿಗಳು ಹೈಜಾಕ್ ಮಾಡಿದ್ದು, ಹಿಂಸಾಚಾರಕ್ಕೆ ತಾವು ಕಾರಣವಲ್ಲ ಎಂದು ಜೆನ್ ಝೀ ನಾಯಕರು ಹೇಳಿದ್ದಾರೆ.
ನಗರದೆಲ್ಲೆಡೆ ಮಿಲಿಟರಿ ಚೆಕ್‌ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಹಾದುಹೋಗುವ ಪ್ರತಿಯೊಂದು ವಾಹನವನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಅತ್ಯಗತ್ಯ ಕಾರಣಕ್ಕೆ ಹೊರತಾಗಿ ಯಾರೂ ಮನೆಯಿಂದ ಹೊರಗೆ ಬಾರದಂತೆ ಲೌಡ್‌ಸ್ಪೀಕರ್‌ಗಳ ಮೂಲಕ ಜನರಿಗೆ ಕರೆ ನೀಡಲಾಗುತ್ತಿದೆ.
ವಿವಿಧ ಕಾರಾಗೃಹಗಳಿಂದ 13,500 ಕೈದಿಗಳು ಪರಾರಿ: ದೇಶಾದ್ಯಂತ ವಿವಿಧ ಜೈಲುಗಳಿಂದ 13,500 ಕೈದಿಗಳು ಪರಾರಿಯಾಗಿದ್ದಾರೆ. ಸುಂಧರ ಸೆಂಟ್ರಲ್ ಜೈಲಿನ 3800 ಕೈದಿಗಳ ಪೈಕಿ 3300 ಜನ ತಪ್ಪಿಸಿಕೊಂಡಿದ್ದಾರೆ. ಲಲಿತ್‌ಪುರದ ನಾಖು ಕಾರಾಗೃಹದಿಂದ 1500, ಸುನ್ಸಾರಿಯ ಝುಮ್ಕಾ ಕಾರಾಗೃಹದಿಂದ 1575, ಕಸ್ಕಿ ಜಿಲ್ಲಾ ಜೈಲಿನಿಂದ 773 ಕೈದಿಗಳು ಪರಾರಿಯಾಗಿದ್ದಾರೆ.
ಇದಲ್ಲದೆ ಜಾಲೇಶ್ವರ್, ಬೈತಾಡಿ, ಡಾಂಗ್ ಸೇರಿದಂತೆ ಇನ್ನೂ ಕೆಲವು ಜೈಲುಗಳಲ್ಲಿ ಇದೇ ರೀತಿ ಘಟನೆ ನಡೆದಿದೆ. ಗೋಡೆಗಳನ್ನು ಒಡೆದು, ಬಾಗಿಲುಗಳನ್ನು ಮುರಿದು ಕೈದಿಗಳು ಹೊರಬಂದಿದ್ದಾರೆ. ಪ್ರತಿಭಟನಾಕಾರರೇ ಕೈದಿಗಳು ಹೊರಬರಲು ನೆರವು ನೀಡಿದ್ದಾರೆ. ಪರಾರಿಯಾದ ಕೈದಿಗಳ ಪೈಕಿ ಮಾಜಿ ಸಚಿವರಾದ ರವಿ ಲಮಿಚ್ಚಾನೆ, ಸಂಜಯ್ ಕುಮಾರ್ ಸಾಹ್, ಟೋಪ್ ಬಹದ್ದೂರ್ ರಾಯಮಂಝಿ ಸೇರಿದ್ದಾರೆ.
ಕಾಠ್ಮಂಡುವಿನ ದಿಲ್ಲಿ ಬಜಾರ್ ಜೈಲಿನಿಂದ ಪರಾರಿಯಾದ ಕೈದಿಗಳ ಪೈಕಿ ಕೆಲವರನ್ನು ಭಾರತದ ಗಡಿಯಲ್ಲಿ ಬಂಧಿಸಲಾಗಿದೆ. ಡಡೆಲ್ದುರಾರ ಜೈಲಿನಿಂದ ತಪ್ಪಿಸಿಕೊಂಡ 85 ಕೈದಿಗಳ ಪೈಕಿ 33 ಕೈದಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಜೈಲಿನಲ್ಲಿ 127 ಕೈದಿಗಳಿದ್ದರು.
ಕಾಠ್ಮಂಡುವಿನಲ್ಲಿ ಸಿಲುಕಿದ 400 ಭಾರತೀಯರು: ಹಿಂಸಾಗ್ರಸ್ತ ಕಾಠ್ಮಂಡುವಿನಲ್ಲಿ 400 ಭಾರತೀಯರು ಸಿಲುಕಿಕೊಂಡಿದ್ದಾರೆ. ಅವರನ್ನು ವಾಪಸ್ ಕರೆತರಲು ಪ್ರಯತ್ನ ನಡೆಯುತ್ತಿದ್ದು, ವಿದೇಶಾಂಗ ಸಚಿವಾಲಯ ಮತ್ತು ಭಾರತೀಯ ರಾಯಭಾರ ಕಚೇರಿ ಈ ದಿಕ್ಕಿನಲ್ಲಿ ಪ್ರಯತ್ನ ನಡೆಸಿದೆ.
ವಾಯುಪಡೆಯ ವಿಶೇಷ ವಿಮಾನಗಳನ್ನು ಕಾಠ್ಮಂಡುವಿಗೆ ಕಳುಹಿಸಲು ಭಾರತ ಸಿದ್ಧತೆ ನಡೆಸಿದೆ. ಈ ಕುರಿತು ನೇಪಾಳದ ಸೇನೆಯೊಂದಿಗೂ ಮಾತುಕತೆ ನಡೆಯುತ್ತಿದೆ. ಮಧ್ಯಪ್ರದೇಶದ ಛತರ್‌ಪುರ್ ಜಿಲ್ಲೆಯ ನಾಲ್ಕು ಕುಟುಂಬಗಳು ಹೋಟೆಲೊಂದರಲ್ಲಿ ಸಿಕ್ಕಿ ಹಾಕಿಕೊಂಡಿದ್ದು ನೆರವು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ಉದ್ಯೋಗಕ್ಕಾಗಿ: ಅತ್ತ ನೇಪಾಳದಲ್ಲಿ ಹಿಂಸಾಚಾರ ನಡೆಯುತ್ತಿದ್ದರೆ, ಇತ್ತ ನೇಪಾಳದಿಂದ 900 ಕಿ.ಮೀ. ದೂರದ ಭಾರತದ ನಗರದಲ್ಲಿ ಉದ್ಯೋಗಕ್ಕಾಗಿ 3000 ನೇಪಾಳಿಗರು ಒಡಿಶಾದ ಝಾರ್ಸುಗುಡಾದಲ್ಲಿನ ವಿಶೇಷ ಸಶಸ್ತ್ರ ಪೊಲೀಸ್ 2ನೇ ಬೆಟಾಲಿಯನ್ ಕಚೇರಿಯಲ್ಲಿ ಉದ್ಯೋಗಕ್ಕಾಗಿ ಸರತಿಯಲ್ಲಿ ನಿಂತಿದ್ದರು. ಅಲ್ಲಿ ಉದ್ಯೋಗವಿಲ್ಲ ಎಂದು ಗೋಳನ್ನು ತೋಡಿಕೊಂಡರು.