Home Advertisement
Home ಸುದ್ದಿ ವಿದೇಶ ಶಾಲೆಯಲ್ಲಿ ಗುಂಡಿನ ದಾಳಿ: ಗನ್‌ಮ್ಯಾನ್ ಸೇರಿ 10 ಮಂದಿ ಸಾವು

ಶಾಲೆಯಲ್ಲಿ ಗುಂಡಿನ ದಾಳಿ: ಗನ್‌ಮ್ಯಾನ್ ಸೇರಿ 10 ಮಂದಿ ಸಾವು

0
57

ಕೆನಡಾ: ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಟಂಬರ್ ರಿಡ್ಜ್ ಪಟ್ಟಣದಲ್ಲಿರುವ ಟಂಬರ್ ರಿಡ್ಜ್ ಸೆಕೆಂಡರಿ ಶಾಲೆಯಲ್ಲಿ ಬುಧವಾರ ಮಧ್ಯಾಹ್ನ ನಡೆದ ಗುಂಡಿನ ದಾಳಿಯಲ್ಲಿ ಗನ್‌ಮ್ಯಾನ್ ಸೇರಿ ಒಟ್ಟು 10 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್‌ (RCMP) ಅಧಿಕಾರಿಗಳ ಮಾಹಿತಿ ಪ್ರಕಾರ, ಶಂಕಿತ ಗನ್‌ಮ್ಯಾನ್ ಸೇರಿದಂತೆ ಆರು ಮಂದಿ ಶಾಲಾ ಆವರಣದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದರೆ, ಉಳಿದ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಹಿರಿಯ ಪತ್ರಕರ್ತ, ಮಾಜಿ ವಿಧಾನ ಪರಿಷತ್ ಸದಸ್ಯ ಪಿ. ರಾಮಯ್ಯ ನಿಧನ

ಘಟನೆ ಸ್ಥಳೀಯ ಕಾಲಮಾನ ಮಧ್ಯಾಹ್ನ 1.20ರ ಸುಮಾರಿಗೆ ನಡೆದಿದ್ದು, ಏಕಾಏಕಿ ಗುಂಡಿನ ಸದ್ದು ಕೇಳಿಬಂದ ನಂತರ ಶಾಲಾ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಸುರಕ್ಷತೆಗಾಗಿ ವಿವಿಧ ಕೊಠಡಿಗಳಲ್ಲಿ ಆಶ್ರಯ ಪಡೆದಿದ್ದರು.

ಘಟನೆಯ ಬಳಿಕ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ, ಸುತ್ತಮುತ್ತಲಿನ ಪ್ರದೇಶದಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಿದ್ದಾರೆ. ಟಂಬರ್ ರಿಡ್ಜ್ ಪಟ್ಟಣವು ಸುಮಾರು 2,400 ಜನಸಂಖ್ಯೆ ಹೊಂದಿದ್ದು, ನಿವಾಸಿಗಳು ಮನೆಯಿಂದ ಹೊರಬರದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸಂಪೂರ್ಣ ಪಟ್ಟಣವನ್ನು ಅಲರ್ಟ್‌ನಲ್ಲಿಡಲಾಗಿದೆ.

ಇದನ್ನೂ ಓದಿ: ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ನ 6 ಚರಣ ಕಡ್ಡಾಯ

ಇನ್ನೂ ತನಿಖೆ ಮುಂದುವರಿಸಿರುವ ಪೊಲೀಸರು, ಈ ಕೃತ್ಯದಲ್ಲಿ ಮತ್ತೊಬ್ಬ ಗನ್‌ಮ್ಯಾನ್ ಭಾಗಿಯಾಗಿದ್ದಾನೆಯೇ ಎಂಬ ಕುರಿತು ಶೋಧ ಕಾರ್ಯ ನಡೆಸುತ್ತಿದ್ದಾರೆ. ಜೊತೆಗೆ, ಮೃತರ ಅಧಿಕೃತ ಸಂಖ್ಯೆಯನ್ನು ದೃಢಪಡಿಸುವ ಕಾರ್ಯವೂ ಮುಂದುವರಿದಿದೆ.

ಈ ಘಟನೆಯ ಕುರಿತು ಕೆನಡಾ ಪ್ರಧಾನಿ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಬಳ್ಳಾರಿ: ಮತ್ತೊಂದು ಆದಿಮಾನವನ ಅಸ್ಥಿಪಂಜರ ಪತ್ತೆ – ಪ್ರಾಗೈತಿಹಾಸಿಕ ಅಧ್ಯಯನಕ್ಕೆ ಹೊಸ ಆಯಾಮ

ಟಂಬರ್ ರಿಡ್ಜ್ ಸೆಕೆಂಡರಿ ಶಾಲೆಯಲ್ಲಿ 7ರಿಂದ 12ನೇ ತರಗತಿ ವರೆಗೆ ಒಟ್ಟು 175 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸದ್ಯ ಶಾಲೆಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಮನೋವೈಜ್ಞಾನಿಕ ಸಹಾಯ ನೀಡಲು ವಿಶೇಷ ತಂಡವನ್ನು ನಿಯೋಜಿಸಲಾಗಿದೆ.

ಈ ಭೀಕರ ದಾಳಿಯಿಂದಾಗಿ ಕೆನಡಾದಾದ್ಯಂತ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕ ವಲಯದಲ್ಲಿ ಗನ್ ನಿಯಂತ್ರಣ ಕುರಿತು ಮತ್ತೆ ಚರ್ಚೆ ಆರಂಭವಾಗಿದೆ.

Previous articleಹಿರಿಯ ಪತ್ರಕರ್ತ, ಮಾಜಿ ವಿಧಾನ ಪರಿಷತ್ ಸದಸ್ಯ ಪಿ. ರಾಮಯ್ಯ ನಿಧನ
Next articleಹುಬ್ಬಳ್ಳಿಯಲ್ಲಿ ಮತ್ತೆ ಚಿರತೆ ಆತಂಕ: ಸಭಾಪತಿ ಹೊರಟ್ಟಿ ಅವರ ತೋಟದಲ್ಲಿ ಪ್ರತ್ಯಕ್ಷ