ನವದೆಹಲಿ: ಉಪರಾಷ್ಟ್ರಪತಿ ಚುನಾವಣೆ ಮಂಗಳವಾರ ನಿಗದಿಯಾಗಿದ್ದು, ಎನ್‌ಡಿಎ ಮಿತ್ರಕೂಟದ ಸಿ.ಪಿ. ರಾಧಾಕೃಷ್ಣನ್ ಹಾಗೂ ಇಂಡಿಯಾ ಬ್ಲಾಕ್‌ನ ಸುದರ್ಶನ ರೆಡ್ಡಿ ನಡುವೆ ವಿಜಯಮಾಲೆ ಯಾರದು ಎಂಬುದು ಇಂದು (ಸೆ. 9) ತೀರ್ಮಾನವಾಗಲಿದೆ.
ಸಂಖ್ಯಾ ಬಲದ ಆಧಾರದಲ್ಲಿ ಎನ್‌ಡಿಎಯ ರಾಧಾಕೃಷ್ಣನ್ ಗೆಲುವು ಖಚಿತ. ಆದರೆ ಸುದರ್ಶನ ರೆಡ್ಡಿ ಆತ್ಮ ಸಾಕ್ಷಿಯ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಜಗದೀಪ್ ಧನಕರ್ ಜುಲೈ 21ರಂದು ಅನಿರೀಕ್ಷಿತವಾಗಿ ರಾಜೀನಾಮೆ ನೀಡಿರುವ ಕಾರಣ ಚುನಾವಣೆ ನಡೆಯುತ್ತಿದೆ.
ಮಹಾರಾಷ್ಟ್ರ ರಾಜ್ಯಪಾಲರಾಗಿರುವ ಸಿ.ಪಿ. ರಾಧಾಕೃಷ್ಣನ್ ತಮಿಳುನಾಡಿನವರಾಗಿದ್ದರೆ, ಸುಪ್ರೀಂಕೋರ್ಟಿನ ಮಾಜಿ ನ್ಯಾಯಾಧೀಶರಾಗಿರುವ ಸುದರ್ಶನ ರೆಡ್ಡಿ ತೆಲಂಗಾಣದವರು.
ಈ ಚುನಾವಣೆಯಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರು ಮತ ಚಲಾಯಿಸುತ್ತಾರೆ. ಲೋಕಸಭೆಯಲ್ಲಿ 542 ಸದಸ್ಯರಿದು, ಆ ಪೈಕಿ ಎನ್‌ಡಿಎ 293 ಹಾಗೂ ವಿರೋಧ ಪಕ್ಷಗಳು 234 ಸದಸ್ಯರನ್ನು ಹೊಂದಿವೆ.
2022ರಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿದ್ದ ಜಗದೀಪ್ ಧನಕರ್ 528 ಮತಗಳನ್ನು ಪಡೆದಿದ್ದರು. ಆದರೆ ಈಗ ಎನ್‌ಡಿಎ ಅಭ್ಯರ್ಥಿಗೆ ದೊರೆಯುವ ಮತಗಳ ಸಂಖ್ಯೆ ತುಸು ಕುಸಿಯಬಹುದೆಂದು ಹೇಳಲಾಗುತ್ತಿದೆ.
ಬಿಜೆಡಿ, ಬಿಆರ್‌ಎಸ್ ಗೈರಿಗೆ ನಿರ್ಧಾರ: ಬಿಜು ಜನತಾದಳ ಹಾಗೂ ಬಿಆರ್‌ಎಸ್ ಪಕ್ಷಗಳು ಯಾರಿಗೂ ಮತ ಚಲಾಯಿಸದಿರಲು ನಿರ್ಧರಿಸಿವೆ. ಇದೇ ವೇಳೆ ಜಗನ್ ರೆಡ್ಡಿಯವರ ವೈಎಸ್‌ಆರ್ ಕಾಂಗ್ರೆಸ್ ಪಾರ್ಟಿಯು ತೆಲುಗು ಮೂಲದ ಇಂಡಿಯಾ ಕೂಟದ ಸುದರ್ಶನ ರೆಡ್ಡಿಗೆ ಮತ ಚಲಾಯಿಸುವುದಾಗಿ ಘೋಷಿಸಿದೆ. ಹೀಗಾಗಿ ಮೂರು ಪಕ್ಷಗಳ ನಿಲುವಿನಿಂದಾಗಿ ಅಭ್ಯರ್ಥಿಗಳ ಮತಸಂಖ್ಯೆ ತುಸು ಏರುಪೇರಾಗುವ ಸಂಭವವಿದೆ.
ಈ ಮಧ್ಯೆ ಬಿಜೆಪಿಯ ಉನ್ನತ ನಾಯಕತ್ವವು ಸಿ.ಪಿ. ರಾಧಾಕೃಷ್ಣನ್ ಅವರ ಗೆಲುವಿನ ಅಂತರ ಹೆಚ್ಚಿಸಲು ವಿರೋಧ ಪಕ್ಷಗಳ ಬೆಂಬಲ ಗಿಟ್ಟಿಸಲು ಸರ್ವ ರೀತಿಯ ಪ್ರಯತ್ನ ನಡೆಸಿದೆ. ಹಾಗೆಯೇ ತನ್ನ ಪಕ್ಷದ ಸದಸ್ಯರಿಗೆ ಈ ಚುನಾವಣೆಯ ಮತದಾನ ಪ್ರಕ್ರಿಯೆ ಹಾಗೂ ರಹಸ್ಯ ಮತದಾನ ಕುರಿತು ಮನವರಿಕೆ ಮಾಡಿಕೊಡಲು ಎರಡು ದಿನಗಳ ಕಾರ್ಯಾಗಾರವನ್ನೂ ನಡೆಸಿತ್ತು.