Home Advertisement
Home ಸುದ್ದಿ ದೇಶ ಕೋಮಾದಲ್ಲಿದ್ದ ವ್ಯಕ್ತಿಯ ದಯಾಮರಣಕ್ಕೆ ಸುಪ್ರೀಂ ಐತಿಹಾಸಿಕ ತೀರ್ಪು

ಕೋಮಾದಲ್ಲಿದ್ದ ವ್ಯಕ್ತಿಯ ದಯಾಮರಣಕ್ಕೆ ಸುಪ್ರೀಂ ಐತಿಹಾಸಿಕ ತೀರ್ಪು

0
140

ಘನತೆಯಿಂದ ಸಾಯುವ ಹಕ್ಕಿಗೆ (Right to Die with Dignity) ಮತ್ತೊಂದು ಮಾನ್ಯತೆ: ಹರೀಶ್ ರಾಣಾ ಪ್ರಕರಣದಲ್ಲಿ ಸುಪ್ರೀಂ ಆದೇಶ

ನವ ದೆಹಲಿ: ಸುಮಾರು 13 ವರ್ಷಗಳಿಂದ ಕೋಮಾದಲ್ಲಿದ್ದ ಯುವಕನಿಗೆ ನಿಷ್ಕ್ರಿಯ ದಯಾಮರಣ (Passive Euthanasia) ನೀಡಲು Supreme Court of India ಅನುಮತಿ ನೀಡಿದ್ದು, ಇದನ್ನು ಮಹತ್ವದ ಮತ್ತು ಐತಿಹಾಸಿಕ ತೀರ್ಪು ಎಂದು ಪರಿಗಣಿಸಲಾಗುತ್ತಿದೆ.

ಈ ಪ್ರಕರಣದಲ್ಲಿ 31 ವರ್ಷದ ಹರೀಶ್ ರಾಣಾ (Harish Rana) ಎಂಬ ಯುವಕನ ಜೀವ ಬೆಂಬಲವನ್ನು ಹಿಂತೆಗೆದುಕೊಳ್ಳಲು ನ್ಯಾಯಾಲಯ ಅನುಮೋದನೆ ನೀಡಿದೆ. 2018ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಪ್ಯಾಸಿವ್ ಯೂಥನೇಷಿಯಾ ಮಾರ್ಗಸೂಚಿಗಳ ಅಡಿಯಲ್ಲಿ ಅನುಮೋದನೆ ಪಡೆದ ಮೊದಲ ಪ್ರಕರಣ ಇದಾಗಿದೆ.

ಎರಡು ವೈದ್ಯಕೀಯ ಮಂಡಳಿಗಳ ಅಭಿಪ್ರಾಯ : ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರ ಪೀಠವು ಪ್ರಕರಣವನ್ನು ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದೆ.

ರೋಗಿಯ ಆರೋಗ್ಯ ಸ್ಥಿತಿಯ ಕುರಿತು ಎರಡು ವೈದ್ಯಕೀಯ ಮಂಡಳಿಗಳು ಪರಿಶೀಲನೆ ನಡೆಸಿ, ಹರೀಶ್ ರಾಣಾ ಸಂಪೂರ್ಣ ಕ್ವಾಡ್ರಿಪ್ಲೆಜಿಯಾ (ನಾಲ್ಕು ಅಂಗಗಳ ಕಾರ್ಯನಿರ್ವಹಣೆಯ ನಷ್ಟ) ಸ್ಥಿತಿಯಲ್ಲಿದ್ದು ಚೇತರಿಕೆಯ ಯಾವುದೇ ನಿರೀಕ್ಷೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದವು. ಅದರಿಂದ ಚಿಕಿತ್ಸೆಯನ್ನು ಹಿಂತೆಗೆದುಕೊಳ್ಳುವ ನಿರ್ಧಾರ ನೀಡಿದ್ದವು.

ಹರೀಶ್ ರಾಣಾಗೆ ಏನಾಗಿತ್ತು? : ಹರೀಶ್ ರಾಣಾ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿದ್ದ ವೇಳೆ 2013ರಲ್ಲಿ ಚಂಡೀಗಢದಲ್ಲಿ ಪೇಯಿಂಗ್ ಗೆಸ್ಟ್ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಅವರು ಕೋಮಾಗೆ ಜಾರಿದ್ದರು. ಬಳಿಕ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಯಿತು. ಹರೀಶ್ ರಾಣಾಗೆ. ಪಿಜಿಐ, ಚಂಡೀಗಢ, ಏಮ್ಸ್, ದೆಹಲಿ, ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದರೂ ಯಾವುದೇ ಚೇತರಿಕೆ ಕಂಡುಬರಲಿಲ್ಲ.

ಕುಟುಂಬದ ಮನವಿ: ದೀರ್ಘಕಾಲದ ಚಿಕಿತ್ಸೆಯಿಂದ ಕುಟುಂಬಕ್ಕೆ ಭಾರೀ ಆರ್ಥಿಕ ಮತ್ತು ಮಾನಸಿಕ ಒತ್ತಡ ಉಂಟಾಗಿದ್ದರಿಂದ ಹರೀಶ್ ರಾಣಾ ಪೋಷಕರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ದಯಾಮರಣಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದ್ದರು.

ಘನತೆಯಿಂದ ಸಾಯುವ ಹಕ್ಕು (Right to Die with Dignity) : ತೀರ್ಪಿನಲ್ಲಿ ನ್ಯಾಯಾಲಯವು ಸಂವಿಧಾನದ ಆರ್ಟಿಕಲ್ 21 ಅಡಿಯಲ್ಲಿ ಘನತೆಯಿಂದ ಬದುಕುವ ಹಾಗೆಯೇ ಘನತೆಯಿಂದ ಸಾಯುವ ಹಕ್ಕು ಕೂಡ ವ್ಯಕ್ತಿಗೆ ಇದೆ ಎಂದು ಪುನರುಚ್ಚರಿಸಿದೆ. ಸಕ್ರಿಯ ದಯಾಮರಣ ಇನ್ನೂ ಕಾನೂನುಬಾಹಿರವಾಗಿದ್ದರೂ, ನಿಷ್ಕ್ರಿಯ ದಯಾಮರಣ ಕುರಿತು ಸ್ಪಷ್ಟ ಕಾನೂನು ತರಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

ಹರೀಶ್ ರಾಣಾ ಅವರ ಪೋಷಕರು ಹಲವು ವರ್ಷಗಳಿಂದ ಮಗನನ್ನು ಬಿಡದೆ ನೋಡಿಕೊಂಡಿದ್ದನ್ನು ನ್ಯಾಯಾಲಯ ಶ್ಲಾಘಿಸಿದ್ದು, ಜೀವ ಬೆಂಬಲ ಹಿಂತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಗೌರವಯುತವಾಗಿ ನಡೆಸುವಂತೆ ಏಮ್ಸ್‌ಗೆ ನಿರ್ದೇಶನ ನೀಡಿದೆ.

ಜೀವ ರಕ್ಷಕ ವ್ಯವಸ್ಥೆ ಸ್ಥಗಿತ: ಹರೀಶ್ ರಾಣಾ ಅವರಿಗೆ ನೀಡಲಾಗುತ್ತಿರುವ ವೈದ್ಯಕೀಯ ಚಿಕಿತ್ಸೆ ಮತ್ತು ಕೃತಕ ಪೌಷ್ಟಿಕಾಂಶ (CAN) ಪೂರೈಕೆಯನ್ನು ಸ್ಥಗಿತಗೊಳಿಸಲು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು ಅನುಮತಿ ನೀಡಿದೆ.

AIIMSಗೆ ದಾಖಲಾತಿ: ಚಿಕಿತ್ಸೆಯನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಘನತೆಯಿಂದ ಮತ್ತು ಮಾನವೀಯತೆಯಿಂದ ನಿರ್ವಹಿಸಲು ದೆಹಲಿಯ AIIMS ಆಸ್ಪತ್ರೆಯ ಪಾಲಿಯೇಟಿವ್ ಕೇರ್ ವಿಭಾಗಕ್ಕೆ ದಾಖಲಿಸುವಂತೆ ನ್ಯಾಯಾಲಯ ಸೂಚಿಸಿದೆ.

ಮೊದಲ ಪ್ರಾಯೋಗಿಕ ಜಾರಿ: 2018ರ ‘ಕಾಮನ್ ಕಾಸ್’ (Common Cause) ತೀರ್ಪಿನ ಮಾರ್ಗಸೂಚಿಗಳನ್ನು ವೈಯಕ್ತಿಕ ಪ್ರಕರಣವೊಂದರಲ್ಲಿ ಪ್ರಾಯೋಗಿಕವಾಗಿ ಅನ್ವಯಿಸುತ್ತಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ.