ಮಾಸ್ಕೋ/ಹೊಸದಿಲ್ಲಿ: ಜಾಗತಿಕ ರಕ್ಷಣಾ ವಲಯದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತದ ವಾಯುಪಡೆಯ ಬಲವನ್ನು ಹೆಚ್ಚಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭರ್ಜರಿ ಆಫರ್ ನೀಡಿದ್ದಾರೆ. ವಿಶ್ವದ ಅತ್ಯಾಧುನಿಕ 5ನೇ ತಲೆಮಾರಿನ ‘Su-57 ಸ್ಟೆಲ್ತ್ ಫೈಟರ್ ಜೆಟ್’ ಮಾರಾಟ, ತಂತ್ರಜ್ಞಾನ ಹಂಚಿಕೆ ಹಾಗೂ ಭಾರತದಲ್ಲೇ ಇದನ್ನು ಜಂಟಿಯಾಗಿ ಉತ್ಪಾದಿಸುವ ಯೋಜನೆಗೆ ಯಾವುದೇ ಷರತ್ತುಗಳಿಲ್ಲದೆ ರಷ್ಯಾ ಒಪ್ಪಿಗೆ ಸೂಚಿಸಿದೆ.
ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳ ಮುಖ್ಯಸ್ಥರೊಂದಿಗಿನ ಸಂವಾದದಲ್ಲಿ ಭಾರತೀಯ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪುಟಿನ್, “ನಾವು ಈ ಹಿಂದೆಯೇ 5ನೇ ತಲೆಮಾರಿನ ಈ ಅತ್ಯಾಧುನಿಕ ಯುದ್ಧ ವಿಮಾನವನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲು ಭಾರತಕ್ಕೆ ಆಫರ್ ನೀಡಿದ್ದೆವು. ಆಗ ಭಾರತ ಕಾದು ನೋಡುವ ನಿರ್ಧಾರ ಮಾಡಿತ್ತು. ಆದ್ರೆ ಈ ಒಪ್ಪಂದವು ಭಾರತದ ರಕ್ಷಣಾ ಕಾರ್ಯತಂತ್ರಗಳನ್ನು ಅಮೂಲಾಗ್ರವಾಗಿ ಬದಲಾಯಿಸಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಏನಿದು FGFA ಪ್ರಾಜೆಕ್ಟ್ ಇತಿಹಾಸ?: ಭಾರತ ಮತ್ತು ರಷ್ಯಾ ನಡುವಿನ ಈ ಜಂಟಿ ಕನಸಿಗೆ ಒಂದು ದಶಕದ ಇತಿಹಾಸವಿದೆ. 2007 ರಲ್ಲಿ ಉಭಯ ದೇಶಗಳು ಜಂಟಿಯಾಗಿ ‘ಐದನೇ ತಲೆಮಾರಿನ ಫೈಟರ್ ಏರ್‌ಕ್ರಾಫ್ಟ್’ (FGFA) ಯೋಜನೆಯನ್ನು ಆರಂಭಿಸಿದ್ದವು. ಆದ್ರೆ ತಂತ್ರಜ್ಞಾನ ಹಸ್ತಾಂತರ, ಒಟ್ಟು ವೆಚ್ಚ ಮತ್ತು ಕಾರ್ಯಕ್ಷಮತೆಯ ವಿಚಾರದಲ್ಲಿ ಒಮ್ಮತ ಮೂಡದ ಕಾರಣ, 2018 ರಲ್ಲಿ ಭಾರತ ಈ ಯೋಜನೆಯಿಂದ ಅಧಿಕೃತವಾಗಿ ಹೊರಬಂದಿತ್ತು. ಆ ಬಳಿಕ ರಷ್ಯಾ ಏಕಾಂಗಿಯಾಗಿ Su-57 ಜೆಟ್‌ಗಳನ್ನು ಉತ್ಪಾದಿಸಿದರೂ, ಜಂಟಿ ಉತ್ಪಾದನೆಗಾಗಿ ಭಾರತಕ್ಕೆ ನಿರಂತರವಾಗಿ ಆಫರ್ ನೀಡುತ್ತಲೇ ಬಂದಿದೆ.
ರಕ್ಷಣಾ ವಲಯದಲ್ಲಿ ಮತ್ತಷ್ಟು ಸಹಕಾರ: ಕೇವಲ Su-57 ಮಾತ್ರವಲ್ಲದೆ, ಬ್ರಹ್ಮೋಸ್ ಕ್ಷಿಪಣಿ ಕಾರ್ಯಕ್ರಮ, ವಿವಿಧ ಫೈಟರ್ ಏರ್‌ಕ್ರಾಫ್ಟ್‌ಗಳು ಹಾಗೂ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಗಳ ತಂತ್ರಜ್ಞಾನದಲ್ಲೂ ನವದೆಹಲಿಯೊಂದಿಗೆ ಕೈಜೋಡಿಸಲು ಮಾಸ್ಕೋ ಸಿದ್ಧವಿದೆ ಎಂದು ಪುಟಿನ್ ಸ್ಪಷ್ಟಪಡಿಸಿದ್ದಾರೆ. ಉಭಯ ದೇಶಗಳ ನಡುವಿನ ಈ ದಶಕಗಳಷ್ಟು ಹಳೆಯದಾದ ರಾಜತಾಂತ್ರಿಕ ಮತ್ತು ರಕ್ಷಣಾ ಬಾಂಧವ್ಯವು ಜಾಗತಿಕ ಮಟ್ಟದಲ್ಲಿ ಭಾರಿ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.





















