ನವದೆಹಲಿ: ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯ ಕುರಿತು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ಪ್ರತಿಪಕ್ಷ ನಾಯಕರಿಗೆ ಅವಕಾಶ ನೀಡದಿರುವುದಕ್ಕೆ ಹಾಗೂ ಕಾಂಗ್ರೆಸಿನ ಎಂಟು ಸಂಸದರನ್ನು ಅಮಾನತು ಮಾಡಿದ ಸಭಾಪತಿ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ಗೊತ್ತುವಳಿಯ ನೋಟಿಸ್ ಅನ್ನು ಈಗ ವಿರೋಧ ಪಕ್ಷಗಳು ಸಲ್ಲಿಸಿವೆ.
ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಡಿಎಂಕೆ ಸೇರಿದಂತೆ ಹಲವಾರು ವಿರೋಧ ಪಕ್ಷಗಳ ಪರವಾಗಿ ಕಾಂಗ್ರೆಸ್ ಸಚೇತಕ ಕೆ. ಸುರೇಶ್ ಅವರು ಈ ನೋಟಿಸನ್ನು ಮಂಗಳವಾರ ಮಧ್ಯಾಹ್ನ 1.14ರ ವೇಳೆ ಲೋಕಸಭಾ ಕಾರ್ಯಾಲಯಕ್ಕೆ ಸಲ್ಲಿಸಿದ್ದಾರೆ. ಆದರೆ ಪ್ರತಿಪಕ್ಷಗಳ ಮಿತ್ರಕೂಟದ ಭಾಗವಾಗಿರುವ ಟಿಎಂಸಿಯ ಸಂಸದರು ಮಾತ್ರ ನೋಟಿಸಿಗೆ ಸಹಿ ಹಾಕಿಲ್ಲ. ಜೊತೆಗೆ ಈ ಕ್ರಮದಲ್ಲಿ ತಾವು ಭಾಗಿಯಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಗೊತ್ತುವಳಿ ನೋಟಿಸಿಗೆ ಪ್ರತಿಪಕ್ಷಗಳ ಒಟ್ಟು 118 ಸಂಸದರು ಸಹಿ ಹಾಕಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ, ರಾಹುಲ್ ಗಾಂಧಿ ಇದಕ್ಕೆ ಸಹಿ ಹಾಕಿಲ್ಲ. ಫೆ. 2ರಂದು ರಾಹುಲ್ ಗಾಂಧಿಗೆ ಲೋಕಸಭೆಯಲ್ಲಿ ಮಾತನಾಡಲು ಅವಕಾಶ ನೀಡಿಲ್ಲ ಎಂಬ ಕಾರಣಕ್ಕಾಗಿ ಪ್ರತಿಪಕ್ಷಗಳು ನಡೆಸುತ್ತಿರುವ ಸದಸ್ಯರ ಪ್ರತಿಭಟನೆ, ಗದ್ದಲದಿಂದಾಗಿ ಇದುವರೆಗೂ ಸದನದಲ್ಲಿ ಸರಿಯಾಗಿ ಕಲಾಪ ನಡೆಯುತ್ತಿಲ್ಲ. ಸಂವಿಧಾನದ 94ಸಿ ವಿಧಿಯಡಿ ಸಲ್ಲಿಸಿರುವ ಈ ನೋಟಿಸ್‌ನಲ್ಲಿ ಸಾರ್ವಜನಿಕವಾಗಿ ಮಹತ್ವದ ವಿಷಯಗಳನ್ನು ಚರ್ಚಿಸಲು ಸ್ಪೀಕರ್ ಅವಕಾಶ ನಿರಾಕರಿಸುತ್ತಿದ್ದಾರೆಂದು ಆರೋಪಿಸಲಾಗಿದೆ.
14 ದಿನಗಳ ಕಡ್ಡಾಯ ನೋಟಿಸಿನ ನಂತರ ಲೋಕಸಭೆಯಲ್ಲಿ ಪ್ರತಿಪಕ್ಷಗಳು ಮಂಡಿಸುವ ಅವಿಶ್ವಾಸ ನಿರ್ಣಯ ಗೆದ್ದಲ್ಲಿ ಮಾತ್ರ ಸ್ಪೀಕರ್ ಪದಚ್ಯುತಗೊಳಿಸಲು ಸಾಧ್ಯ. ತಮ್ಮ ವಿರುದ್ಧದ ಅವಿಶ್ವಾಸ ನಿರ್ಣಯ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಸದನ ಕಾರ್ಯಕಲಾಪ ಹಿಂದೆ ಸರಿದುಕೊಂಡಿರುವುದಾಗಿ ಸ್ಪೀಕರ್ ಓಂ ಬಿರ್ಲಾ ಸ್ಪಷ್ಟಪಡಿಸಿದ್ದಾರೆ.





















