ನಾಸಿಕ್ ದುರಂತ: ಬಾವಿಗೆ ಬಿದ್ದ ಕಾರು – ಒಂದೇ ಕುಟುಂಬದ 9 ಜೀವ ಬಲಿ
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ದಿಂಡೋರಿ ತಾಲ್ಲೂಕನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 9 ಮಂದಿ ಸಾವನ್ನಪ್ಪಿದ ಘಟನೆ ದೇಶವನ್ನು ಬೆಚ್ಚಿಬೀಳಿಸಿದೆ. ಶುಕ್ರವಾರ ತಡರಾತ್ರಿ ಸಂಭವಿಸಿದ ಈ ದುರಂತದಲ್ಲಿ ಮಕ್ಕಳು ಸೇರಿ 9 ಮಂದಿ ಮೃತಪಟ್ಟಿರುವುದು ದುಃಖವನ್ನು ಮತ್ತಷ್ಟು ಗಾಢಗೊಳಿಸಿದೆ.
ಹೇಗೆ ನಡೆದಿದೆ ದುರಂತ? : ದಿಂಡೋರಿ ತಾಲೂಕಿನ ಶಿವಾಜಿನಗರ ಪ್ರದೇಶದಲ್ಲಿ ನಡೆದ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕುಟುಂಬ, ರಾತ್ರಿ ಮನೆಗೆ ಹಿಂತಿರುಗುತ್ತಿತ್ತು. ಈ ವೇಳೆ ಅವರು ಪ್ರಯಾಣಿಸುತ್ತಿದ್ದ ಕಾರು ಏಕಾಏಕಿ ನಿಯಂತ್ರಣ ತಪ್ಪಿ ನೀರು ತುಂಬಿದ ಬಾವಿಗೆ ಉರುಳಿದೆ. ಸ್ಥಳೀಯರ ಪ್ರಕಾರ, ಬಾವಿ ರಸ್ತೆ ಪಕ್ಕದಲ್ಲೇ ಇದ್ದು, ಸುರಕ್ಷತಾ ಬೇಲಿ ಇಲ್ಲದಿರುವುದು ಅಪಘಾತಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ.
ಮೃತರ ವಿವರ : ದುರಂತದಲ್ಲಿ ಮೃತಪಟ್ಟವರನ್ನು ಒಂದೇ ಕುಟುಂಬದ ಸದಸ್ಯರೆಂದು ಗುರುತಿಸಲಾಗಿದೆ. ಇವರಲ್ಲಿ ಮಕ್ಕಳು ಮತ್ತು ಮಹಿಳೆಯರೂ ಸೇರಿದ್ದು, ಕುಟುಂಬ ಸಂಪೂರ್ಣವಾಗಿ ನಾಶವಾದಂತಾಗಿದೆ. ಮೃತರೆಲ್ಲರೂ ದಿಂಡೋರಿ ತಾಲೂಕಿನ ನಿವಾಸಿಗಳಾಗಿದ್ದರು. ದರ್ಗುಡೆ (27), ಆಶಾ ಅನಿಲ್ ದರ್ಗುಡೆ (32), ಖುಷಿ/ಶ್ರಿಷ್ಟಿ ಅನಿಲ್ ದರ್ಗುಡೆ (14), ಶ್ರೇಯಸ್ ಅನಿಲ್ ದರ್ಗುಡೆ (11), ರಾಖಿ/ಗುಣವಂತಿ ಸುನಿಲ್ ದರ್ಗುಡೆ, ಶ್ರಾವಣಿ ಅನಿಲ್ ದರ್ಗುಡೆ (11), ಸಮೃದ್ಧಿ ರಾಜೇಂದ್ರ ದರ್ಗುಡೆ (7), ಮಾಧುರಿ ಅನಿಲ್ ದರ್ಗುಡೆ (13) ಮತ್ತು ಸುನಿಲ್ ದತ್ತು ದರ್ಗುಡೆ (32) ಎಂದು ಗುರುತಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆ: ಅಪಘಾತದ ಮಾಹಿತಿ ತಿಳಿದ ತಕ್ಷಣ ಸ್ಥಳೀಯರು ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ನಂತರ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ತಂಡವೂ ಸ್ಥಳಕ್ಕೆ ಧಾವಿಸಿತು. ಆದರೆ ಬಾವಿಯ ಆಳ ಮತ್ತು ಜನಸಂದಣಿ ಹೆಚ್ಚಿದ್ದರಿಂದ ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಗಿತ್ತು. ತಡರಾತ್ರಿ ತನಕ ಕಾರ್ಯಾಚರಣೆ ಮುಂದುವರಿದಿದ್ದು, ಎಲ್ಲ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಪ್ರಾಥಮಿಕ ತನಿಖೆ : ಪ್ರಾಥಮಿಕ ಮಾಹಿತಿ ಪ್ರಕಾರ, ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಆದರೆ ನಿಖರ ಕಾರಣ ತಿಳಿಯಲು ದಿಂಡೋರಿ ಪೊಲೀಸ್ ಇಲಾಖೆ ತನಿಖೆ ಮುಂದುವರಿಸಿದೆ. ರಸ್ತೆ ಸುರಕ್ಷತಾ ಕ್ರಮಗಳ ಕೊರತೆ ಬಗ್ಗೆ ಕೂಡ ಪರಿಶೀಲನೆ ನಡೆಯುತ್ತಿದೆ.




















