ಶ್ರೀಹರಿಕೋಟಾ (ಆಂಧ್ರಪ್ರದೇಶ): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಮತ್ತೊಮ್ಮೆ ದೇಶದ ತಾಂತ್ರಿಕ ಸಾಮರ್ಥ್ಯವನ್ನು ವಿಶ್ವಕ್ಕೆ ತೋರಿಸಲು ಸಜ್ಜಾಗಿದೆ. ದೇಶದ ಅತ್ಯಂತ ಭಾರವಾದ ಸಂವಹನ ಉಪಗ್ರಹ CMS-03 (ಅಥವಾ ಜಿಸ್ಯಾಟ್-7ಆರ್) ಉಡಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ಉಡಾವಣೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಡೆಯಲಿದೆ.
ಈ ಉಪಗ್ರಹವನ್ನು ಇಸ್ರೋದ ಅತ್ಯಂತ ಶಕ್ತಿಶಾಲಿ ಉಡಾವಣಾ ವಾಹನವಾದ ಎಲ್‌ವಿಎಂ-3 ರಾಕೆಟ್ ಹೊತ್ತೊಯ್ಯಲಿದೆ. ಇದು “ಭಾರತದ ಬಾಹುಬಲಿ ರಾಕೆಟ್” ಎಂದೇ ಪ್ರಸಿದ್ಧಿ ಪಡೆದಿದೆ. ಸುಮಾರು 4,410 ಕೆಜಿ ತೂಕದ CMS-03 ಉಪಗ್ರಹವು ಭಾರತದ ಇತಿಹಾಸದಲ್ಲೇ ಅತ್ಯಂತ ಭಾರವಾದ ಸಂವಹನ ಉಪಗ್ರಹವಾಗಿದೆ.
CMS-03 ಉಪಗ್ರಹವು ಬಹು-ಬ್ಯಾಂಡ್ ಸಂವಹನ ಸೇವೆಗಳನ್ನು ಒದಗಿಸಲಿದೆ. ಇದು ಭಾರತೀಯ ಭೂಪ್ರದೇಶ ಮಾತ್ರವಲ್ಲ, ಭಾರತೀಯ ಸಾಗರ ಪ್ರದೇಶಕ್ಕೂ ವ್ಯಾಪಕ ಸಂಪರ್ಕ ಮತ್ತು ಸಂವಹನ ಸೇವೆಗಳನ್ನು ನೀಡಲಿದೆ ಎಂದು ಇಸ್ರೋ ಪ್ರಕಟಿಸಿದೆ.
ಜಿಸ್ಯಾಟ್-7ಆರ್ ಸರಣಿಯ ಭಾಗವಾಗಿರುವ ಈ ಉಪಗ್ರಹವು ರಕ್ಷಣಾ ಕ್ಷೇತ್ರಕ್ಕೂ ಪ್ರಮುಖ ಬಲ ನೀಡುವ ಸಾಧ್ಯತೆ ಇದೆ. ಇದರ ಮೂಲಕ ನೌಕಾಪಡೆ, ವಾಯುಪಡೆ, ಭೂಪಡೆ ಸೇರಿದಂತೆ ಹಲವಾರು ಇಲಾಖೆಗಳಿಗೆ ಸುರಕ್ಷಿತ ಮತ್ತು ವೇಗದ ಸಂವಹನ ಸಂಪರ್ಕ ಸಿಗಲಿದೆ.
ಎಲ್‌ವಿಎಂ-3 ರಾಕೆಟ್ ಇದಕ್ಕೂ ಮೊದಲು ಚಂದ್ರಯಾನ-3 ಮಿಷನ್ ಯಶಸ್ವಿಯಾಗಿ ನಡೆಸಿ, ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವಾಗುವ ಗೌರವ ಭಾರತಕ್ಕೆ ತಂದಿತ್ತು. ಈಗ ಅದೇ ರಾಕೆಟ್ CMS-03 ಉಪಗ್ರಹವನ್ನು ಕಕ್ಷೆಗೆ ಸೇರಿಸಲು ಸಜ್ಜಾಗಿದೆ.
ಇಸ್ರೋ ಪ್ರಕಾರ, ಉಡಾವಣೆ ಯಶಸ್ವಿಯಾದ ಬಳಿಕ ಈ ಉಪಗ್ರಹವು ಮುಂದಿನ ಕೆಲವು ವಾರಗಳಲ್ಲಿ ತನ್ನ ಕಾರ್ಯಾಚರಣಾ ಕಕ್ಷೆಯಲ್ಲಿ ಸ್ಥಿರಗೊಳ್ಳಲಿದ್ದು, ಭಾರತದ ಬಾಹ್ಯಾಕಾಶ ಸಂವಹನ ತಂತ್ರಜ್ಞಾನಕ್ಕೆ ಹೊಸ ಭರವಸೆ ನೀಡಲಿದೆ.


























