ಹಣವನ್ನು ಗಳಿಸುವ ಅತ್ಯುತ್ತಮ ವಿಧಾನವೇನು?

0
68

ಇಂದಿನ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ದೂರದರ್ಶನ ಮಾಜಿ ನಿರ್ದೇಶಕರಾದ ಜಿ.ಎಂ. ಶಿರಹಟ್ಟಿ ಅವರ ಗುರುಬೋಧೆ

ಸಂಪಾದಿಸಿದ ಹಣ ನಮ್ಮ ಸ್ವಂತ ಆಸ್ತಿ ಎಂದು ನಂಬುವ ಸಾಮಾನ್ಯ ಪ್ರವೃತ್ತಿ ಇದೆ. ಗಳಿಸಿದ ಹಣವನ್ನು ಯಾವುದೇ ನಿರ್ಬಂಧಗಳಿಲ್ಲದೆ ನಾವು ಬಯಸಿದಂತೆ ಖರ್ಚು ಮಾಡಬಹುದೆಂದು ಭಾವಿಸುತ್ತೇವೆ. `ಹಣ ಇದ್ದರೆ ಎಲ್ಲವೂ ಇದ್ದಂತೆ’ ಎಂಬ ದೃಢ ನಂಬಿಕೆಯೂ ನಮ್ಮಲ್ಲಿದೆ. ಹಣವು ನಮ್ಮ ಅಗತ್ಯಗಳನ್ನು ಪೂರೈಸುತ್ತದೆ ಹಾಗೂ ಉತ್ತಮ ಜೀವನ ನಡೆಸಲು ಸಹಾಯ ಮಾಡುತ್ತದೆ.

ಹಣವು ಗೊಂದಲ ಹುಟ್ಟಿಸುವ ಪ್ರಮುಖ ಮೂಲವಾಗಿದೆ. ಈ ಗೊಂದಲವನ್ನು ಕುರಾನಿನಲ್ಲಿ ಇಸ್ರಾಫ' ಎಂದು ಕರೆಯಲಾಗಿದೆ. ಇಸ್ರಾಫ ಎಂದರೆ, ಎಲ್ಲ ಮಿತಿಗಳನ್ನೂ ಮೀರುವುದು. ಹಣದ ಪ್ರಭಾವದಿಂದ ಎಲ್ಲ ಮೌಲ್ಯಗಳ ಮಿತಿ ಮೀರಿದಾಗ, ದುಂದುವೆಚ್ಚ - ವಿಲಾಸಪ್ರಿಯತೆಗಳಲ್ಲಿ ತೊಡಗಿದಾಗ ಹಣ ಹಾನಿಕಾರಕವಾಗುತ್ತದೆ. ಅದಕ್ಕೆಂದೇ ಕುರಾನಿನ ಈ ವಚನ (ಅಲ್ ಅತ್‌ರಾಫ: 7.31) ಎಚ್ಚರಿಕೆ ನೀಡುತ್ತದೆ,ನಿಮ್ಮ ಅಲಂಕಾರಗಳನ್ನು ಧರಿಸಿ, ತಿನ್ನಿರಿ, ಕುಡಿಯಿರಿ. ಆದರೆ ಅಪವ್ಯಯ ಮಾಡದಿರಿ. ದೇವರು ಅಪವ್ಯಯ ಮಾಡುವವರನ್ನು ಖಂಡಿತವಾಗಿಯೂ ಮೆಚ್ಚುವುದಿಲ್ಲ.’

ನಮ್ಮ ಹಣವನ್ನು ಖರ್ಚು ಮಾಡುವುದು ಕೇವಲ ಆಯ್ಕೆಯ ವಿಷಯವಲ್ಲ. ಹೇಗೆ ಬೇಕಾದ ಹಾಗೆ ಖರ್ಚು ಮಾಡುವುದು ನಮ್ಮ ನಿರ್ಧಾರವಲ್ಲ. ಇದರಲ್ಲಿ ಇತರ ಅಂಶಗಳನ್ನು ಕಾಣಬೇಕು. ಹಣವನ್ನು ಖರ್ಚು ಮಾಡಿ ಅನಾರೋಗ್ಯಕರ ಆಹಾರ-ಪಾನೀಯಗಳನ್ನು ಸೇವಿಸಿದಾಗ ನಮ್ಮ ದೈಹಿಕ ಸಾಮರ್ಥ್ಯ ಕಡಿಮೆ ಆಗುತ್ತದೆ.

ಕುರಾನಿನ ಇನ್ನೊಂದು ಅಧ್ಯಾಯದ (ಬನಿಇಸ್ರಾಯಿಲ್: 17.26-27) ವಚನಗಳಲ್ಲಿ, ದುಂದುವೆಚ್ಚ ಮಾಡಬೇಡಿರಿ' ಎಂಬ ಎಚ್ಚರಿಕೆಯ ಜೊತೆಗೆ,ದುಂದುಗಾರರು ಶೈತಾನನ ಸೋದರರಾಗುತ್ತಾರೆ’ ಎಂದು ಹೇಳಲಾಗಿದೆ. ಪ್ರವಾದಿವರ್ಯ ಮುಹಮ್ಮದ (ಸ) ಅವರು, ಅಲ್ಲಾಹನ ದಾಸರು ವಿಲಾಸಪ್ರಿಯರಾಗಿರುವುದಿಲ್ಲ' ಎಂದಿದ್ದಾರೆ. (ಅಹ್ಮದ) ವಾಸ್ತವವಾಗಿ ಹಣವು,ಧನಾತ್ಮಕ’ – `ಋಣಾತ್ಮಕ’ ಎಂದು ಎರಡು ವಿಭಿನ್ನ ಅಂಶಗಳನ್ನು ಹೊಂದಿದೆ. ಹಣದ ಸಕಾರಾತ್ಮಕ ಖರ್ಚು ಒಳ್ಳೆಯದಾದರೆ, ನಕಾರಾತ್ಮಕ ಖರ್ಚು ಕೆಟ್ಟದು. ಹಣದ ಸರಿಯಾದ ಬಳಕೆ ಮನುಷ್ಯನನ್ನು ಎಲ್ಲ ರೀತಿಯ ಪ್ರಗತಿಯತ್ತ ಕರೆದೊಯ್ಯುತ್ತದೆ. ಆದರೆ ಅದರ ತಪ್ಪು ಬಳಕೆಯು ಮನುಷ್ಯವನ್ನು ವಿನಾಶದ ಗುಂಡಿಗೆ ತಳ್ಳುತ್ತದೆ.

ಕುರಾನಿನ ಬಹಳಷ್ಟು ಅಧ್ಯಾಯಗಳಲ್ಲಿರುವ, ಅನಾಥರ ಸಂಪತ್ತನ್ನು ಅವರಿಗೆ ಒಪ್ಪಿಸಿ. ಅವರ ಸಂಪತ್ತನ್ನು ಅಪವ್ಯಯ ಮಾಡಬೇಡಿ' (ಅನಿಸಾ 4:6),ದುಂದುವೆಚ್ಚ ಮಾಡುವವನು ಖಂಡಿತ ಶೈತಾನನ ಸಹೋದರ’ (ಅಲ್ ಪುರಕಾನ್ 25:67) ಮುಂತಾದ ವಚನಗಳಲ್ಲಿ ದುಂದುವೆಚ್ಚ, ವಿಲಾಸಪ್ರಿಯ ಜೀವನದ ಕುರಿತು ಎಚ್ಚರಿಕೆ ನೀಡಲಾಗಿದೆ.

ಖರ್ಚು ಮಾಡುವಾಗ ನಿಜವಾದ ಅಗತ್ಯಗಳತ್ತ ಗಮನ ಹರಿಸಬೇಕೆಂದು ಅರ್ಥಶಾಸ್ತ್ರಿಗಳು ಸಲಹೆ ನೀಡುತ್ತಾರೆ. ಹಣವು ವ್ಯರ್ಥವಾಗಲು ಆಧುನಿಕ ಕಾಲದ ಕೊಳ್ಳುಬಾಕತನವು ಒಂದು ಪ್ರಮುಖ ಕಾರಣವಾಗಿದೆ. ಹಣವನ್ನು ಗಳಿಸುವ ಒಂದು ಅತ್ಯುತ್ತಮ ಸಾಧನವೆಂದರೆ ಕಡಿಮೆ ಖರ್ಚು ಮಾಡುವುದು' ಎಂಬುದನ್ನು ಅರ್ಥಶಾಸ್ತ್ರಿಗಳೂ ಒಪ್ಪುತ್ತಾರೆ.ನಾವು ಹಣವನ್ನು ಉಳಿಸಿದರೆ ಅದು ನಮ್ಮನ್ನು ಉಳಿಸುತ್ತದೆ’ ಎಂಬ ನುಡಿಯನ್ನೂ ಹೇಳಲಾಗುತ್ತದೆ. ನಾವು ಗಳಿಸಿದ ಹಣದ ನಿಜವಾದ ಪ್ರಯೋಜನ ಪಡೆಯಬೇಕಾದರೆ ಸಕಾರಾತ್ಮಕ ವಸ್ತುಗಳಿಗಾಗಿ ಹಣ ಖರ್ಚು ಮಾಡಬೇಕು. ದುಂದುವೆಚ್ಚದಿಂದ ಆರ್ಥಿಕ ದಾರಿದ್ರ‍್ಯ ಉಂಟಾಗುತ್ತದೆ.

Previous articleBelagavi: ಮಹಾ ಮಳೆ: ಮತ್ತೆ ಪ್ರವಾಹ ಭೀತಿ, ಮುಳುಗಡೆಯ ಹಂತಕ್ಕೆ ದತ್ತ ಮಂದಿರ
Next articleUPI ಪೇಮೆಂಟ್ ತಂದ ಸಂಕಷ್ಟ: ಡಿಜಿಟಲ್‌ ಹಣ ಸ್ವೀಕಾರಕ್ಕೆ ವ್ಯಾಪಾರಿಗಳ ಹಿಂದೇಟು!

LEAVE A REPLY

Please enter your comment!
Please enter your name here