ಮುಂಬೈ: ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಸಾರಿಗೆ ಬಸ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡ ಘಟನೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಬಳಿಯ ಫೋರ್ಟ್ ಪ್ರದೇಶದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇ-ಎಸಿ ಡಬಲ್ ಡೆಕ್ಕರ್ ಪ್ರಯಾಣಿಕರನ್ನು ಬ್ಯಾಕ್‌ಬೇ ಡಿಪೋಗೆ ಕರೆದೊಯ್ಯುತ್ತಿತ್ತು. ಸಿದ್ಧಾರ್ಥ್ ಕಾಲೇಜು ಸಿಗ್ನಲ್ ಸಮೀಪಿಸುತ್ತಿದ್ದಂತೆ, ಬಸ್ ಮುಂಭಾಗದ ಎಡ ಟೈರ್‌ನ ಪಕ್ಕದಲ್ಲಿರುವ ಹೈ-ವೋಲ್ಟೇಜ್ ಬ್ಯಾಟರಿ ವಿಭಾಗದ ಬಳಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಬಸ್ ಕಂಡಕ್ಟರ್ ಅಗ್ನಿಶಾಮಕ ದಳ ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಸ್ (MH 43 CE-1709) ಭಾಟಿಯಾ ಬಾಗ್‌ನಿಂದ ಬ್ಯಾಕ್‌ಬೇ ಡಿಪೋಗೆ ಹೋಗುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿತು. ಪ್ರಾಥಮಿಕ ವರದಿಗಳ ಪ್ರಕಾರ, ಬೆಂಕಿಯು ಮುಂಭಾಗದ ಎಡಭಾಗದ ಟೈರ್ ಬಳಿ, ಹೈ ವೋಲ್ಟೇಜ್ ಬ್ಯಾಟರಿ ಇರುವ ಸ್ಥಳದಲ್ಲಿ ಬೆಂಕಿ ಹುಟ್ಟಿಕೊಂಡಿದೆ ಎಂದು ಹೇಳಲಾಗಿದೆ.
ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಬಳಿಯ ಫೋರ್ಟ್ ಪ್ರದೇಶದಲ್ಲಿ 138ನೇ ಮಾರ್ಗದಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ಬೆಳಿಗ್ಗೆ 9.15ರ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದೆ. ಆದರೆ, ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಬೆಂಕಿ ಪತ್ತೆಯಾದ ತಕ್ಷಣವೇ ಬಸ್ ಕಂಡಕ್ಟರ್ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಕ್ಷಿಪ್ರವಾಗಿ ಆಗಮಿಸಿ, ತಕ್ಷಣವೇ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಸ್‌ಗೆ ಬೆಂಕಿ ತಗುಲಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂದು ತಿಳಿಯಲು ತನಿಖೆ ಆರಂಭಿಸಲಾಗಿದ್ದು, ಹೆಚ್ಚಿನ ತಾಂತ್ರಿಕ ಪರೀಕ್ಷೆಗಾಗಿ ಬಸ್ ನಿಯಂತ್ರಣದ ಉಪ ಎಂಜಿನಿಯರ್‌ಗೆ ಸೂಚಿಸಲಾಗಿದೆ.
ಕಳೆದ ಮೂರು ವರ್ಷಗಳಿಂದ ಬಿಇಎಸ್‌ಟಿ ವಿದ್ಯುತ್ ಚಾಲಿತ ಡಬಲ್ ಡೆಕ್ಕರ್ ಬಸ್ ಸೇವೆಯನ್ನು ನೀಡುತ್ತಿದೆ. ಇದೇ ಮೊದಲ ಬಾರಿಗೆ ಈ ರೀತಿಯ ಘಟನೆ ಸಂಭವಿಸಿದೆ. ಮುಂಬೈ ನಾಗರಿಕ ಸಂಸ್ಥೆಯ ಸಾರಿಗೆ ವಿಭಾಗವಾಗಿರುವ ಬೆಸ್ಟ್, ಸ್ವಿಚ್ ಮೊಬಿಲಿಟಿಯಿಂದ ಸುಮಾರು 50 ಡಬಲ್ ಡೆಕ್ಕರ್‌ಗಳು ಸೇರಿದಂತೆ ಸುಮಾರು 950 ಎಲೆಕ್ಟ್ರಿಕ್ ಬಸ್‌ಗಳು ಸೇವೆ ನೀಡುತ್ತಿವೆ.