ನವದೆಹಲಿ: F4 ಇಂಡಿಯನ್ ಚಾಂಪಿಯನ್‌ಶಿಪ್ ಮತ್ತು ಇಂಡಿಯನ್ ರೇಸಿಂಗ್ ಲೀಗ್ (IRL) ಪಂದ್ಯದ 6 ತಂಡಗಳು ಆಟಗಾರರ ಪಟ್ಟಿ ಬಿಡುಗಡೆ ಮಾಡಿವೆ. ಮುಂಬೈನಲ್ಲಿ ಇಂದು ನಡೆದ ಡ್ರೈವರ್ ಡ್ರಾಫ್ಟ್‌ನಲ್ಲಿ 6 ಫ್ರಾಂಚೈಸ್ ಟೀಮ್‌ಗಳಿಂದ ಒಟ್ಟು 24 ಚಾಲಕರನ್ನು ಆಯ್ಕೆ ಮಾಡಲಾಯಿತು.
2025ರ ಋತುವಿನಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಲಿದ್ದು, ಪ್ರತಿ ತಂಡವು ಎರಡು ಕಾರುಗಳು ಮತ್ತು ನಾಲ್ಕು ರೇಸರ್‌ಗಳನ್ನು ಕಣಕ್ಕಿಳಿಸಬೇಕಾಗುತ್ತದೆ. ಇಂದು 6 ಫ್ರಾಂಚೈಸ್‌ಗಳು ತಲಾ 4 ಚಾಲಕರನ್ನು ಪ್ರಕಟಿಸಿವೆ. ಪ್ರತಿ ತಂಡವು ಕನಿಷ್ಠ ಓರ್ವ ಚಾಲಕಿಯನ್ನು ಹೊಂದುವುದು ಕಡ್ಡಾಯವಾಗಿದೆ.
ಕನ್ನಡ ಚಿತ್ರರಂಗದ ಸ್ಟಾರ್ ನಟ ಕಿಚ್ಚ ಸುದೀಪ್ ಈ ಬಾರಿ ಹೊಸದಾಗಿ ಐಆರ್‌ಎಲ್ ಪ್ರವೇಶ ಮಾಡಿದ್ದು, ಬೆಂಗಳೂರಿನ ಫ್ರಾಂಚೈಸಿಯನ್ನು ವಹಿಸಿಕೊಂಡಿದ್ದಾರೆ. ತಂಡಕ್ಕೆ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ಎಂದು ನಾಮಕರಣ ಮಾಡಿದ್ದಾರೆ. ತಂಡದಲ್ಲಿ ಕೈಲ್ ಕುಮಾರ, ನೀಲ್ ಜೈನ್, ರುಹಾನ್ ಆಳ್ವಾ ಹಾಗೂ ಚಾಲಕಿ ಜೆಮ್ ಹೆಪ್ವರ್ತ್ ಅವರನ್ನು ಈ ತಂಡ ಒಳಗೊಂಡಿದೆ.
ನಟ ಕಿಚ್ಚ ಸುದೀಪ್ ತಂಡದ ರುಹಾನ್ ಆಳ್ವಾ, ಭಾರತದ ಅತ್ಯಂತ ಕಿರಿಯ ವೈಸ್ ಚಾಂಪಿಯನ್ ಆಗಿದ್ದಾರೆ. ಇಟಾಲಿಯನ್ ಕಾರ್ಟಿಂಗ್‌ನಲ್ಲಿ 11ನೇ ವಯಸ್ಸಿನಲ್ಲಿ ವೈಸ್ ಚಾಂಪಿಯನ್ ಆಗಿದ್ದವರು. ರುಹಾನ್ 7ನೇ ವಯಸ್ಸಿನಲ್ಲಿ ತರಬೇತಿ ಪ್ರಾರಂಭಿಸಿದರು. 8ನೇ ವಯಸ್ಸಿನಲ್ಲಿ ಯುಕೆಯಲ್ಲಿ ಲಿಟಲ್ ಗ್ರೀನ್‌ಮ್ಯಾನ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಪ್ರವೇಶ ಮಾಡಿದರು.
ರುಹಾನ್ ಇಂಡಿಯನ್ ರೇಸಿಂಗ್ ಲೀಗ್ ಮತ್ತು ಫಾರ್ಮುಲಾ 4ರಲ್ಲಿ 20 ಪಂದ್ಯಗಳಲ್ಲಿ 16 ಪೋಡಿಯಂ ಫಿನಿಶ್‌ಗಳನ್ನು ಪಡೆದಿದ್ದಾರೆ. 2023ರಲ್ಲಿ, ಇಂಡಿಯನ್ ರೇಸಿಂಗ್ ಲೀಗ್‌ನಲ್ಲಿ ಅತ್ಯಂತ ಕಿರಿಯ ರೇಸ್ ವಿಜೇತರಾಗಿದ್ದರು. ಅಲ್ಲದೆ ಫೆರಾರಿ ಡ್ರೈವರ್ ಅಕಾಡೆಮಿಗೆ ಆಯ್ಕೆಯಾದ ಮೊದಲ ಭಾರತೀಯರಾಗಿದ್ದಾರೆ. 2024 ರ ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸೀನಿಯರ್ ಮ್ಯಾಕ್ಸ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ತೆಲಗು ಚಿತ್ರರಂಗದ ನಟ ನಾಗಚೈತನ್ಯ ಒಡೆತನದ ಹೈದರಾಬಾದ್ ಬ್ಲ್ಯಾಕ್‌ಬರ್ಡ್ಸ್, ಬಾಲಿವುಡ್ ನಟ ಜಾನ್ ಅಬ್ರಹಾಂ ಅವರ ನೇತೃತ್ವದ ಗೋವಾ ಏಸಸ್ ಜೆಎ ರೇಸಿಂಗ್, ಭಾರತ ತಂಡದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಒಡೆತನದ ಕೋಲ್ಕತ್ತಾ ರಾಯಲ್ ಟೈಗರ್ಸ್, ಬಾಲಿವುಡ್ ನಟ ಅರ್ಜುನ್ ಕಪೂರ್ ಒಡೆತನದ ಸ್ಪೀಡ್ ಡೆಮನ್ಸ್ ದೆಹಲಿ ತಂಡ ಹಾಗೂ ಅಕಾರ್ಡ್ ಗ್ರೂಪ್ ಮತ್ತು ಭಾರತ್ ಇನ್ಸ್ಟಿಟ್ಯೂಟ್ ಒಡೆತನದ ಚೆನ್ನೈ ಟರ್ಬೋ ರೈಡರ್ಸ್ ಸೇರಿ ಎಲ್ಲಾ ತಂಡಗಳ ಲೈನ್‌ಅಪ್ ಪಟ್ಟಿ ಪ್ರಕಟಿಸಿದೆ.
ಇಂಡಿಯನ್ ರೇಸಿಂಗ್ ಫೆಸ್ಟಿವಲ್ 2025 ಈ ಆಗಸ್ಟ್‌ನಲ್ಲಿ ಆರಂಭವಾಗಲಿದ್ದು, ಬೆಂಗಳೂರು, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಚೆನ್ನೈ, ಗೋವಾ ಮತ್ತು ಇತರ ಪ್ರದೇಶಗಳ ಫ್ರಾಂಚೈಸಿ ತಂಡಗಳು ವಿಶ್ವ ದರ್ಜೆಯ ಟ್ರ್ಯಾಕ್‌ಗಳಲ್ಲಿ ಸ್ಪರ್ಧಿಸಲಿವೆ.
ಐದು ಸುತ್ತುಗಳನ್ನು ಒಳಗೊಂಡಿರುವ ಚಾಂಪಿಯನ್‌ಶಿಪ್ ಕೊಯಮತ್ತೂರಿನ ಕರಿ ಮೋಟಾರ್ ಸ್ಪೀಡ್‌ವೇ, ಚೆನ್ನೈನ ಮದ್ರಾಸ್ ರೇಸ್ ಇಂಟರ್ನ್ಯಾಷನಲ್ ಸರ್ಕ್ಯೂಟ್ ಮತ್ತು ಬೆಂಗಳೂರಿನ ಬ್ರೆನ್ ರೇಸ್‌ವೇಯಲ್ಲಿ ನಡೆಯಲಿದೆ.