ಬಿಗ್ ಬ್ಯಾಂಗ್‌ನಿಂದ ಉಂಟಾದ ಸ್ಫೋಟವೇ ಬ್ರಹ್ಮಾಂಡದ ಉಗಮಕ್ಕೆ ನಾಂದಿಯಾಯಿತು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಲಕ್ಷಾಂತರ ವರ್ಷಗಳ ಪ್ರಕ್ರಿಯೆಯ ಪರಿಣಾಮದಿಂದಾಗಿ ಉಂಟಾಗಿರುವ ಬ್ರಹ್ಮಾಂಡದಲ್ಲಿ
ಭೂಮಿ, ಸೂರ್ಯ, ಚಂದ್ರ, ನಕ್ಷತ್ರ ಪುಂಜಗಳು, ಲಕ್ಷಾಂತರ ಗ್ಯಾಲಕ್ಸಿಗಳು ಇವೆ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ ನಂತರವೂ ಬ್ರಹ್ಮಾಂಡದ ವ್ಯಾಪಕತೆ ನಮಗೆಲ್ಲಾ ಅರ್ಥವಾಗಿರುವುದು ಕೇವಲ ಶೇಕಡಾ ೪ರಷ್ಟು ಮಾತ್ರ.
ಇನ್ನುಳಿದ ಶೇ. ೯೬ರಷ್ಟು ಬ್ರಹ್ಮಾಂಡದಲ್ಲಿ ಏನೇನು ಅಡಗಿದೆ ಎನ್ನುವುದನ್ನು ಪ್ರಸ್ತುತ ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನದಿಂದ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ, ಭವಿಷ್ಯದಲ್ಲಿಯೂ ಸಾಧ್ಯವಾಗುತ್ತದೆ ಎನ್ನುವ ಭರವಸೆಯಿಲ್ಲ ಎಂದು ವಿಜ್ಞಾನಿಗಳು ಹೇಳಿರುವುದನ್ನು ಗಮನಿಸಿದರೆ ಬ್ರಹ್ಮಾಂಡದ ಅಗಾಧತೆಯ ಬಗ್ಗೆ ಮನುಷ್ಯನಿಗಿರುವ ಸೀಮಿತತೆಯ ಬಗ್ಗೆ ಆಶ್ಚರ್ಯವಾಗುತ್ತದೆ. ಇಂತಹ ಸೀಮಿತ ಪರಿಧಿಯೊಳಗೆ ನೆಲೆಸಿರುವ ಮಾನವ ಇಡೀ ಬ್ರಹ್ಮಾಂಡದ ಮೇಲೆ ಹಿಡಿತ ಸಾಧಿಸಿದವನಂತೆ ವರ್ತಿಸುತ್ತ ಭೂಮಿಯ ಪರಿಸರವನ್ನು ತಾನು ನೆಲೆಸಿರುವ ಪ್ರದೇಶದ ನೆಮ್ಮದಿಯನ್ನು ಕೆಡಿಸುತ್ತಿದ್ದಾನೆ.
ಇದೆಲ್ಲ ಕೇವಲ ತನ್ನ ಸ್ವಾರ್ಥಕ್ಕಾಗಿ, ತನ್ನ ಸುಖ- ವೈಭೋಗಗಳಿಗಾಗಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವವರಿಗೆ ಸುಖ- ಸಂತೋಷ ಹೊಂದುವುದೇ ಜೀವನದ ಅಂತಿಮ ಗುರಿಯಲ್ಲ ಎನ್ನುವುದು ಅರ್ಥವಾಗಬೇಕು. ಸರಳತೆ, ಪ್ರಾಮಾಣಿಕತೆ, ಪರಿಶ್ರಮ, ಪರರ ಸಂಕಷ್ಟಗಳಿಗೆ ಸ್ಪಂದಿಸುವುದು, ಇತರರಿಗೆ ಕೇಡಾಗದಂತೆ ಜೀವಿಸುವುದೂ ಕೂಡ ಅತ್ಯಂತ ಪ್ರಮುಖವೆಂಬುದನ್ನು ಅರ್ಥ ಮಾಡಿಕೊಂಡು ಮುನ್ನಡೆಯಬೇಕು. ಏಕೆಂದರೆ ಜಗತ್ತು ಚಲನಶೀಲವಾದುದು ಇಲ್ಲಿ ಯಾವುದೂ, ಯಾರೂ ಕೂಡ ಅಂತಿಮವಲ್ಲ. ಕೋಟಿ,ಕೋಟಿ ವರ್ಷಗಳ ಆಯಸ್ಸು ಹೊಂದಿರುವ ಈ ಬ್ರಹ್ಮಾಂಡದಲ್ಲಿ ಮಿಲಿಯಾಂತರ ಜನರು ಆಗಿ ಹೋಗಿದ್ದಾರೆ. ಈಗ ನಮ್ಮ ಸರದಿ ಅಷ್ಟೇ ಎನ್ನುವ ಕಟು ವಾಸ್ತವವನ್ನು ಅರ್ಥೈಸಿಕೊಂಡು ಅರ್ಥಪೂರ್ಣ ಬಾಳು ನಡೆಸೋಣ.