ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಉತ್ತರಕರ್ನಾಟಕದ ಮೇಲೆ ಯಾಕಿಷ್ಟು ಅಸಡ್ಡೆ!? ಎಂದು ಬಿಜೆಪಿ ನೂತನ ಸಂಸದ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ನಮ್ಮದು ರೈತಪರ ಕಾಳಜಿ ಹೊಂದಿರುವ ಸರ್ಕಾರ ಎಂದು ಉದ್ದುದ್ದ ಭಾಷಣ ಬಿಡುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತರಿಗೆ ಬರ ಪರಿಹಾರ ಕೊಡದೆ, ಆರ್ಥಿಕವಾಗಿ ಕುಗ್ಗಿದ ಅನ್ನದಾತನನ್ನು ಸಾಲದ ಬವಣೆಗೆ ದೂಡಿ ತಾನು ಮಾತ್ರ ನಿರಂತರ ರಾಜ್ಯದ ಬೊಕ್ಕಸ ಬರಿದು ಮಾಡುವುದರಲ್ಲಿ ನಿರತವಾಗಿದೆ! ಕೇವಲ 15 ತಿಂಗಳಲ್ಲಿ 1,182 ಅನ್ನದಾತರು ಆತ್ಮಹತ್ಯೆಗೀಡಾಗಿದ್ದಾರೆ! ವಿಪರ್ಯಾಸವೆಂದರೆ, ನಮ್ಮ ಉತ್ತರಕರ್ನಾಟಕದವರೇ ಆಗಿರುವುದು ಸಹಿಸಲಸಾಧ್ಯ! ರಾಜ್ಯ ಸರ್ಕಾರಕ್ಕೆ ಉತ್ತರಕರ್ನಾಟಕದ ಮೇಲೆ ಯಾಕಿಷ್ಟು ಅಸಡ್ಡೆ!? ರೈತರ ಆತ್ಮಹತ್ಯೆಗೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ! ಅನ್ನದಾತರ ಹಿಡಿಶಾಪ ನಿಮಗೆ ತಟ್ಟದೇ ಬಿಡುವುದೇ!? ಎಂದಿದ್ದಾರೆ.