ಮುಕ್ತಿಗಾಗಿ ಮುಕುಂದನ ಚಿಂತನೆ ಬೇಕು

0
14

ಭಾಗೀರಥಿ ನದಿಯ ದಕ್ಷಿಣತೀರದಲ್ಲಿ ಮಹಾಪದ್ಮವೆಂಬ ನಗರವಿತ್ತು. ಅಲ್ಲಿ ಭೃಗು ಎಂಬ ಶ್ರೇಷ್ಠ್ಠ ಬ್ರಾಹ್ಮಣ ವಾಸವಾಗಿದ್ದನು. ಸತ್ಯ, ಅಹಿಂಸೆ, ಇಂದ್ರಿಯ ಜಯದಿಂದ ಸಾತ್ವಿಕವಾಗಿ ಬದುಕುತ್ತಿದ್ದನು. ಎಲ್ಲರೂ ಇವನನ್ನು ಶ್ರೇಷ್ಠ್ಠನನ್ನು ಬ್ರಾಹ್ಮಣ ಎಂದು ಹೊಗಳುತ್ತಿದ್ದರು. ಹೀಗಿದ್ದರೂ ಆ ಬ್ರಾಹ್ಮಣನಿಗೆ ಒಂದು ಚಿಂತೆ. ನನ್ನ ಜನ್ಮವು, ನನ್ನ ಯಾವ ಕಾರ್ಯದಿಂದ ಸಾರ್ಥಕವಾಗುತ್ತ ಎಂದು.
ಒಂದು ದಿನ ಅವನ ಮನೆಗೆ ಶ್ರೇಷ್ಠ ಬ್ರಾಹ್ಮಣನೊಬ್ಬ ಬಂದ. ಅವನನ್ನು ಚೆನ್ನಾಗಿ ಸತ್ಕರಿಸಿ ಈ ಚಿಂತೆಗೆ ಪರಿಹಾರ ಕೇಳಿದ. ಅದಕ್ಕೆ ಬ್ರಾಹ್ಮಣನು ಗೋಮತಿ ತೀರದ’ ನೈಮಿಷಾರಣ್ಯದಲ್ಲಿ ನಾಗರಾಜನಿದ್ದಾನೆ. ಅವನು ಪರಮ ಬ್ರಹ್ಮಜ್ಞಾನಿಯಾಗಿದ್ದಾನೆ. ಅವನ ಬಳಿ ಹೋದಲ್ಲಿ ಉತ್ತರ ಸಿಗುತ್ತದೆ ಎಂದು ತಿಳಿಸಿದ. ಭೃಗುವು ಯಾತ್ರೆ ಮಾಡಿಕೊಂಡು ನೈಮಿಷಾರಣ್ಯ ಸೇರಿದ. ಪದ್ಮನೆಂಬ ನಾಗರಾಜನ ಮನೆಗೂ ಹೋದ. ಆದರೆ, ನಾಗರಾಜನ ಪತ್ನಿಯು ಎದುರಾದಳು. ನಾಗರಾಜನು ಸೂರ್ಯನ ರಥವನ್ನೂ ಹೊರಲು ಹೋಗಿದ್ದಾನೆ, ಎಂಟು ದಿನದಲ್ಲಿ ಬರುತ್ತಾನೆ ಎಂದಳು. ಭೃಗುವು ನಾಗರಾಜನ ಪತ್ನಿಯ ಆತಿಥ್ಯ ಸ್ವೀಕರಿಸದೆ ಅದೇ ವನದಲ್ಲಿ ಉಪವಾಸದಿಂದ ಧ್ಯಾನಮಗ್ನನಾದನು. ಪದ್ಮನ ಭೃತ್ಯರು ಏನು ಕೊಟ್ಟರು ಸ್ವೀಕರಿಸಲಿಲ್ಲ. ಪದ್ಮನು ಸೂರ್ಯನ ಸೇವೆ ಮಾಡಿ ತನ್ನ ಮನೆಗೆ ಬಂದನು. ಆತನ ಸತಿಯು ಅರ್ಘಪಾದ್ಯಾದಿಗಳಿಂದ ಸತ್ಕರಿಸಿದಳು. ಆತನು ವಿಶ್ರಾಂತಿ ಪಡೆದು ಬಳಿ ಗಂಡನಿಗೆ ಭೃಗು ಎಂಬ ಬ್ರಾಹ್ಮಣನ ಆಗಮನದ ಕಥೆಯನ್ನು ನಿರೂಪಿಸಿದಳು. ಉಲ್ಲವನದಲ್ಲಿ ಉಪವಾಸದಿಂದ ಕಾದಿರುವ ಭೃಗುವನ್ನು ಕಂಡು ಬನ್ನಿ ಎಂದಳು. ಸತಿಯ ಮಾತಿಗೆ ಬೆಲೆಕೊಟ್ಟು ಉಲ್ಲವನಕ್ಕೆ ಬಂದ. ಭೃಗುವು ಪದ್ಮನ ಪಾದಪದ್ಮಕ್ಕೆರಗಿದ. ಭೃಗುವಿನ ಇಂಗಿತವೇನೆಂದು ಕೇಳಿದ.
ಭೃಗುವು ನಾಗರಾಜ ನಾನು ಧರ್ಮಾರಣ್ಯದಿಂದ ಬಂದಿದ್ದೇನೆ. ನನಗೆ ಧರ್ಮದ ಮರ್ಮವನ್ನು ಮತ್ತು ಸೂರ್ಯನ ಮಹಿಮೆಯನ್ನು ದಯಮಾಡಿ ತಿಳಿಸು ಎಂದನು. ಜ್ಞಾನಾರ್ಥಿಯಾಗಿದ್ದ ಭೃಗುಮಹರ್ಷಿ ಉಪವಾಸ ಮಾಡಿದನು. ಹೊಸ ವಿಷಯಗಳನ್ನು ತಿಳಿಯಲು ಉತ್ಸುಕನಾಗಿದ್ದನು. ಹಾಗಾಗಿ ಜ್ಞಾನ ಪಿಪಾಸುವಾದವನಿಗೆ ಹಸಿವೆ ಮತ್ತು ತೃಷೆ ಅಲ್ಲದೇ ಪ್ರತಿಷ್ಠೆಗಳು ಇರಕೂಡದು ಎಂಬುದು ಇದರಿಂದ ವಿದಿತವಾಗುತ್ತದೆ.

Previous articleಜಾತಿ ಸಮೀಕ್ಷೆ ಅಂಗೀಕಾರ ಜೇನುಗೂಡಿಗೆ ಕಲ್ಲು ಖಚಿತ
Next articleಬೆಳಕಿಗಾಗಿ ಮುಳುಗಡೆ, ಸಂಕಟಕ್ಕಿಲ್ಲ ಬಿಡುಗಡೆ