ಬೆಂಗಳೂರು: ವಿಜಯೇಂದ್ರನನ್ನು ಅಧ್ಯಕ್ಷ ಹುದ್ದೆಯಿಂದ ತೆಗೆದರೆ, ಯತ್ನಾಳ ಅವರನ್ನು ಪಕ್ಷದಿಂದ ಹೊರಗೆ ಹಾಕದಿದ್ದರೆ ನೇಣು ಹಾಕಿಕೊಳ್ಳುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಬ್ಲ್ಯಾಕ್‌ಮೇಲ್ ಮಾಡಿದ್ದರು. ಅದಕ್ಕಾಗಿ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಕೆಳಮಟ್ಟದ ರಾಜಕೀಯ ಮಾಡಿ, ಕೊನೆ ದಿನಗಳನ್ನು ಎಣಿಸುತ್ತಿದ್ದಾರೆ. ತಾನು ಸಾಯುವ ಮುಂಚೆ ವಿಜಯೇಂದ್ರನನ್ನು ಸಿಎಂ ಮಾಡುವುದು ಅವರ ಆಸೆಯಾಗಿದೆ. ಹೀಗಾಗಿ ತಮ್ಮ ಮಗನ ರಕ್ಷಣೆಗಾಗಿ ಅಹೋರಾತ್ರಿ ಧರಣಿಯಲ್ಲಿ ಭಾಗಿಯಾಗಿದ್ದಾರೆ. ಜಗತ್ತಿನ ಉಳಿದ ರಾಷ್ಟ್ರಗಳಲ್ಲಿಯೂ ಆಸ್ತಿ ಮಾಡಲು ಈ ಹೋರಾಟವನ್ನು ಯಡಿಯೂರಪ್ಪ, ವಿಜಯೇಂದ್ರ ಮಾಡುತ್ತಿದ್ದಾರೆ. ರೈತರು, ಬಡವರ ಪರವಾಗಿ ಯಡಿಯೂರಪ್ಪ ಪ್ರತಿಭಟನೆಯಲ್ಲಿ ಭಾಗಿಯಾಗಿಲ್ಲ. ತನ್ನ ಮಗನ ಕುರ್ಚಿ ಗಟ್ಟಿ ಮಾಡಲು ಹೋರಾಟದಲ್ಲಿ ಭಾಗಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯಲ್ಲಿ ಈ ಕೆಟ್ಟ ಯಡಿಯೂರಪ್ಪ ಕುಟುಂಬ ಮುಂದುವರೆದರೆ ಹೊಸ ಪಕ್ಷದ ಬಗ್ಗೆ ಚಿಂತನೆ ಮಾಡುತ್ತೇವೆ. ಈ ಕೆಟ್ಟ ಕುಟುಂಬ ತೆಗೆದರೆ ಮಾತ್ರ ಬಿಜೆಪಿಗೆ ಕರ್ನಾಟಕದಲ್ಲಿ ಭವಿಷ್ಯ ಇದೆ. ಇವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಕೊರೊನಾ, ಡಿ-ನೋಟಿಫಿಕೇಶನ್ ಹಗರಣ ನಡೆದಿವೆ ಎಂದು ಆರೋಪಿಸಿದರು.