ಪ್ರಾರ್ಥನೆ ದೀರ್ಘಕಾಲವಿರಲಿ..

0
16

ದೇವರಿಗೆ ಪ್ರಾರ್ಥನೆ ಅನಾದಿಕಾಲದಿಂದ ಬಂದ ಒಳ್ಳೆಯ ರೂಢಿ. ಅದನ್ನು ದೀರ್ಘಕಾಲ ಮಾಡಬೇಕಾಗುತ್ತದೆ. ಅಂದರೆ ಒಂದು ಪ್ರಾರ್ಥನೆಯನ್ನು ಅನೇಕ ದಿನಗಳ ಪರ್ಯಂತ ಪ್ರತಿನಿತ್ಯ ಮಾಡಬೇಕಾಗುತ್ತದೆ. ಒಂದು ಪೂಜೆಯಲ್ಲಿ ಸ್ವಲ್ಪ ದೀರ್ಘವಾದ ಸ್ತುತಿಯ ಮೂಲಕ ಪ್ರಾರ್ಥನೆಯನ್ನು ಹಿಗ್ಗಿಸಿ ಮಾಡುವುದೂ ಇದೆ. ಪ್ರಾರ್ಥನೆಯನ್ನು ದೀರ್ಘವಾಗಿ ಮಾಡುವುದು ಯಾತಕ್ಕೆ? ಪ್ರಾರ್ಥಿಸಿಕೊಂಡ ವಿಷಯ ಕೈಗೂಡುವುದಕ್ಕೆ. ಇದನ್ನು ಸ್ವಲ್ಪ ವಿವರಿಸಿ ಹೇಳಬೇಕಾಗುತ್ತದೆ.
ಪ್ರಾರ್ಥನೆಯೆಂಬ ಸಂಸ್ಕೃತ ಶಬ್ದಕ್ಕೆ ‘ಕೇಳಿಕೊಳ್ಳುವಿಕೆ’ ಎಂಬ ಕನ್ನಡ ಶಬ್ದವನ್ನು ಪರ್ಯಾಯವಾಗಿ ಕೊಡಬಹುದು. ಕೆಲವೊಮ್ಮೆ ದೇವರ ಸ್ತುತಿಯನ್ನೂ ಸೇರಿಸಿಕೊಂಡು ಪ್ರಾರ್ಥನೆ ಎನ್ನುತ್ತಾರೆ. ಪ್ರಾಯಶಃ ಪ್ರಾರ್ಥನೆ ದೀರ್ಘವಾಗುವುದು. ಅದರ ಜೊತೆ ಸೇರಿಕೊಂಡಿರುವ ಸ್ತುತಿಯ ಕಾರಣದಿಂದಲೇ. ಇಲ್ಲಿ ದೀರ್ಘತ್ವವನ್ನು ಇನ್ನೊಂದು ವಿಧದಿಂದಲೂ ಕಾಣಬಹುದು.
ಅನೇಕ ದಿನಗಳ ಕಾಲ ನಿತ್ಯವೂ ಒಂದು ಕಾಲ ಪರಿಮಿತಿಯಲ್ಲಿ ಪ್ರಾರ್ಥನೆ ‘ಕೇಳಿಕೊಳ್ಳುವಿಕೆ’ಗೆ ಬಲ ಬರಲು ಈ ಎರಡು ವಿಧದ ದೀರ್ಘತ್ವ ಅಗತ್ಯವಿದೆ. ಇಲ್ಲಿ ಬಲ ಎಂದರೇನು? ಭಕ್ತಿ, ಶ್ರದ್ಧಾ ಸಹಿತವಾದ ಅಚಲವಾದ ಮನಸ್ಥಿತಿ. ಅದು ಒಮ್ಮೆಲೆ ಬರುವುದಿಲ್ಲ. ದೀರ್ಘಕಾಲದ ಪ್ರಯತ್ನದಿಂದಲೇ ಬರುತ್ತದೆ. ಇಂತಹ ಮನಸ್ಥಿತಿಯಿಂದ ಕೂಡಿದ ‘ಕೇಳಿಕೊಳ್ಳುವಿಕೆ’ ಹೆಚ್ಚು ಫಲಿಸುತ್ತದೆ, ಬೇಗ ಫಲಿಸುತ್ತದೆ.
ಪ್ರಾರ್ಥನೆಯನ್ನು ಪ್ರಾರ್ಥಿಸುವವನ ಪ್ರಾರಬ್ಧ ಕರ್ಮಗಳು ತಡೆಯಾಗುತ್ತವೆ. ಈ ತಡೆಯ ನಿವಾರಣೆಗೆ ಬೇರೆ ಉಪಯಗಳೂ ಇವೆ. ಆ ಉಪಾಯಗಳ ಕಡೆಗೆ ಸಾಕಷ್ಟು ಪ್ರಮಾಣದಲ್ಲಿ ಹೊಗದಿದ್ದರೆ ಪ್ರಾರ್ಥನೆಯ ಬಲವೇ ಆ ತಡೆಗಳನ್ನು ನಿವಾರಿಸಿಬಿಡುತ್ತದೆ. ಹೀಗೆ ನೋಡಿದರೆ ಪ್ರಾರ್ಥನೆಗೆ ಎರಡು ಕೆಲಸವಿದೆ. ಒಂದು ಪ್ರಾರ್ಥಿಸುವವನ ಅಭೀಷ್ಟವು ದೊರೆಯುವಂತೆ ಮಾಡುವುದು ಮತ್ತು ಇನ್ನೊಂದು ಅದಕ್ಕೆ ಇರುವ ತಡೆಯನ್ನು ನಿವಾರಿಸಿಕೊಳ್ಳುವುದು. (ಇವೆರಡಕ್ಕೂ ಭಗವಂತನ ಅನುಗ್ರಹ ಕಾರಣವಾಗುವುದು ಇದ್ದೇ ಇದೆ. ಆದರೆ ಇಲ್ಲಿ ನಮ್ಮ ಕಡೆಯಿಂದ ಆಗುವ ಪ್ರಯತ್ನದ ಬಗ್ಗೆ ವಿವರಿಸುತ್ತಿದ್ದೇವೆ). ಪ್ರಾರಬ್ಧ ಕರ್ಮಗಳ ತಡೆ ನಿವಾರಣೆಯಾಗಬೇಕಾಗಿರುವುದರಿಂದ, ಅದಕ್ಕೆ ಹೆಚ್ಚು ಕಾಲಾವಕಾಶ ಬೇಕಾಗಿರುವುದರಿಂದ ಪ್ರಾರ್ಥನೆಯನ್ನು ದೀರ್ಘಕಾಲ ಮಾಡಬೆಕಾಗುತ್ತದೆ.
ಪ್ರಾರ್ಥಿಸಿಕೊಳ್ಳುವಿಕೆ ಸಕಾಮ ಭಕ್ತಿಯಲ್ಲಿ ಬರುತ್ತದೆ. ನಿಷ್ಕಾಮ ಭಕ್ತಿಗಿಂತ ಸಕಾಮ ಭಕ್ತಿಗೆ ಮಹತ್ವ ಕಡಿಮೆಯಾದರೂ ಸಕಾಮ ಭಕ್ತಿಯನ್ನು ಒಮ್ಮೆಲೆ ತ್ಯಜಿಸಬೇಕಾಗಿಲ್ಲ. ಸಕಾಮ ಭಕ್ತಿಗೂ ಅದರದ್ದೇ ಆದ ಮಹತ್ವವಿದೆ. `ಉದಾರಾಃ ಸರ್ವೇ ಏವೈತೇ’ ಎಂಬುದಾಗಿ. ಭಗವಂತನು ಸಕಾಮ ಭಕ್ತಿಯನ್ನು ನಿಷ್ಕಾಮ ಭಕ್ತಿಯೊಡನೆ ಗೌರವಿಸಿದ್ದಾನೆ.
ಆದ್ದರಿಂದ ತನ್ನ ಕಾಮನೆಗಳೊಂದಿಗೆ ದೇವರ ಮುಂದೆ ನಿಲ್ಲುವುದು ತಪ್ಪೇನಲ್ಲ. ಕೆಲವೊಮ್ಮೆ ಪ್ರಾರ್ಥಿಸಿಕೊಳ್ಳುತ್ತಿರುವ ವಿಷಯದಲ್ಲಿ ದೋಷವಿರಬಹುದು. ಅರಿಷಡ್ವರ್ಗಗಳಿಗೆ ಒಳಗಾಗಿ ಪ್ರಾರ್ಥಿಸಿಕೊಳ್ಳುತ್ತಿರಬಹುದು ಅಥವಾ ತನ್ನ ಪ್ರಾರ್ಥನೆಯು ನೆರವೇರಿದರೆ ಲೋಕದ ಕ್ಷೇಮಕ್ಕೆ ಭಂಗ ಬರಬಹುದು. ಪ್ರಾರ್ಥನೆಯಲ್ಲಿ ಇಂತಹ ದೋಷಗಳಿದ್ದರೆ ತನ್ನ ವಿವೇಚನೆಯಿಂದ ಬಿಡಬೇಕು ಅಥವಾ ದೋಷಪೂರಿತವಾದ ಪ್ರಾರ್ಥನೆಯನ್ನು ಬಿಡಬೆಕು.
ಇವನ್ನೆಲ್ಲ ಗಮನದಲ್ಲಿಟ್ಟುಕೊಂಡು ದೀರ್ಘಕಾಲ ನಿರಂತರ ಪ್ರಾರ್ಥನೆ ಅಭ್ಯುದಯಕ್ಕೆ ದಾರಿಯಾಗುವುದರಲ್ಲಿ ಸಂದೇಹವಿಲ್ಲ.

Previous articleಮುಚ್ಚುವ ಭೀತಿಯಲ್ಲಿ ಸರ್ಕಾರಿ ಶಾಲೆಗಳು
Next articleಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ