ಪುಸ್ತಕ ನೋಂದಣಿ: ರಾಜ್ಯದ ಮಾದರಿಗೆ ಕೊಕ್

0
24

ರಾಜು ಮಳವಳ್ಳಿ
ಬೆಂಗಳೂರು: ರಾಜ್ಯದಲ್ಲಿ ಪ್ರಕಟವಾಗುವ ಪುಸ್ತಕಗಳ ನೋಂದಣಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ತಮಿಳುನಾಡು ಮಾದರಿಯನ್ನು ಅಳವಡಿಸಿಕೊಂಡಿರುವ ಅನಪೇಕ್ಷಿತ ಬೆಳವಣಿಗೆ ಬೆಳಕಿಗೆ ಬಂದಿದೆ..!
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಧಿನಿಯಮ ೧೯೬೫ರ ತಿದ್ದುಪಡಿಯನ್ವಯ ೧೮೬೭ರ ಮುದ್ರಣಾಲಯ ಹಾಗೂ ಪುಸ್ತಕಗಳ ನೋಂದಣಿ ಅಧಿನಿಯಮದ ೨೦ರಡಿ ರೂಪಿಸಲಾಗಿರುವ ನಿಯಮ ೪ರಂತೆ ಕರ್ನಾಟಕದಲ್ಲಿ ಪ್ರತಿ ವರ್ಷ ಪ್ರಕಟಗೊಳ್ಳುವ ಎಲ್ಲಾ ಪುಸ್ತಕಗಳನ್ನು ಗ್ರಂಥಾಲಯ ಇಲಾಖೆಯಲ್ಲಿ ನೋಂದಾಯಿಸುವುದು ಕಡ್ಡಾಯ. ಈ ನೋಂದಣಿಯೇ ಪುಸ್ತಕಗಳ ಖರೀದಿಗೆ ರಹದಾರಿ. ಬಹುವರ್ಷಗಳಿಂದ ಈ ನೋಂದಣಿ ಪ್ರಕ್ರಿಯೆ ಮತ್ತು ನೋಂದಣಿ ಪ್ರಮಾಣಪತ್ರ ನೀಡಿಕೆಯಲ್ಲಿ ಕನ್ನಡದ ನಿರ್ದಿಷ್ಟ, ಸರಳ ಮಾದರಿಯನ್ನು ಅನುಸರಿಸಲಾಗುತ್ತಿತ್ತು. ಇದೀಗ ಪುಸ್ತಕಗಳ ನೋಂದಣಿ ಅರ್ಜಿ ನಮೂನೆ ಮತ್ತು ಪ್ರಮಾಣಪತ್ರವನ್ನು ಹೊಸ ಕಾಲಘಟ್ಟಕ್ಕನುಗುಣವಾಗಿ ಸುಧಾರಿಸುವ ನೆಪದಲ್ಲಿ ಕರ್ನಾಟಕದ ಮಾದರಿಗೆ ತಿಲಾಂಜಲಿ’ ಹೇಳಿರುವ ಗ್ರಂಥಾಲಯ ಇಲಾಖೆ, ತಮಿಳುನಾಡಿನಲ್ಲಿ ಜಾರಿಯಲ್ಲಿರುವ ಪುಸ್ತಕಗಳ ನೋಂದಣಿ ಅರ್ಜಿ ನಮೂನೆ ಮತ್ತು ಪ್ರಮಾಣಪತ್ರ ನೀಡಿಕೆಯ ತಮಿಳುನಾಡಿನ ಮಾದರಿಯನ್ನು ಅಳವಡಿಸಿಕೊಂಡು ಏಕಾಏಕಿ ಜಾರಿಗೆ ತಂದುಬಿಟ್ಟಿದೆ..! ಹಿರಿಯ ಐಎಎಸ್ ಅಧಿಕಾರಿ ಕನಕವಲ್ಲಿ ಅವರು ಗ್ರಂಥಾಲಯ ಇಲಾಖೆಯ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಈ ಬದಲಾವಣೆಗಾಗಿಯೇ ಸುಮಾರು ಒಂದೂವರೆ ತಿಂಗಳ ಕಾಲ ಪುಸ್ತಕಗಳ ನೋಂದಣಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದ ಗ್ರಂಥಾಲಯ ಇಲಾಖೆ, ತನ್ನ ಮೂವರು ಸಿಬ್ಬಂದಿಗಳನ್ನು ತಮಿಳುನಾಡಿಗೆ ಕಳುಹಿಸಿತ್ತೆನ್ನಲಾಗಿದೆ. ತಮಿಳುನಾಡಿನಲ್ಲಿರುವ ಪುಸ್ತಕಗಳ ನೋಂದಣಿ ಪ್ರಕ್ರಿಯೆಯನ್ನು ಅಧ್ಯಯನ ನಡೆಸಿದ ಅಧಿಕಾರಿಗಳು ನೀಡಿದ ವರದಿಯನ್ನಾಧರಿಸಿ ಹೊಸಮಾದರಿ’ಯನ್ನು ಅನುಷ್ಠಾನಗೊಳಿಸಲಾಗಿದೆ. ಈ ಇಡೀ ಪ್ರಕ್ರಿಯೆಯಲ್ಲಿ ರಾಜ್ಯದ ಯಾವೊಬ್ಬ ಪ್ರಕಾಶಕರನ್ನಾಗಲಿ, ಮುದ್ರಕರನ್ನಾಗಲಿ ಇಲ್ಲವೇ ಸಾಹಿತಿ-ತಜ್ಞರನ್ನಾಗಲಿ ಇಲಾಖೆಯ ಅಧಿಕಾರಿಗಳು ಸಂಪರ್ಕಿಸಿಲ್ಲ, ಸಲಹೆಯನ್ನೂ ಕೇಳಿಲ್ಲ..!
ರಾಜ್ಯದಲ್ಲಿ ಈ ಮುನ್ನ ಅನುಷ್ಠಾನದಲ್ಲಿದ್ದ ನೋಂದಣಿ ಅರ್ಜಿ ನಮೂನೆಯ ಕರ್ನಾಟಕದ ಮಾದರಿ ಪ್ರತಿ ಪ್ರಕಾಶಕರು ಮತ್ತು ಲೇಖಕರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿದ್ದುದ್ದಲ್ಲದೆ, ಅರ್ಜಿ ಭರ್ತಿ ಮಾಡುವಿಕೆ ಮತ್ತು ನೋಂದಣಿ ಪ್ರಮಾಣಪತ್ರ ನೀಡಿಕೆ ಎರಡೂ ಸರಳವಾಗಿತ್ತೆನ್ನಲಾಗಿದೆ. ಆದರೆ, ಸದ್ಯ ಜಾರಿಗೆ ಬಂದಿರುವ ತಮಿಳುನಾಡು ಪ್ರಣೀತ ನೋಂದಣಿ ಅರ್ಜಿ ಅನೇಕ ಗೊಂದಲಗಳಿಂದ ಕೂಡಿದ್ದು ಪ್ರಕಾಶಕರನ್ನು ಪೇಚಿಗೆ ಸಿಲುಕಿಸಿದೆ. ಅರ್ಜಿಯಲ್ಲಿ ನಮೂದಿಸಿರುವ ವಿವಿಧ ಕಾಲಂ’ಗಳ ಗೂಡಾರ್ಥ ತಿಳಿಯದಂತಾಗಿದ್ದರೆ, ನೋಂದಣಿ ಪ್ರಮಾಣಪತ್ರ ಕೆಲವೇ ಸಾಲುಗಳಿಗೆ ಸೀಮಿತವಾಗಿದ್ದು ಮಾಮೂಲಿನಂತಿದೆ ಎಂದು ಹೇಳಲಾಗುತ್ತಿದೆ. ಪ್ರಕಾಶಕರ ಆಕ್ರೋಶ: ರಾಜ್ಯದ ಸಾಹಿತಿ-ಪ್ರಕಾಶಕರನ್ನು ಪರಿಗಣನೆಗೆ ತೆಗೆದುಕೊಳ್ಳದೇ ಪುಸ್ತಕಗಳ ನೋಂದಣಿಗೆ ತಮಿಳುನಾಡು ಮಾದರಿಯನ್ನು ಅನುಸರಿಸಿರುವುದು (ಹೇರಿರುವುದು) ಇದೀಗ ಪ್ರಕಾಶಕರ ವಲಯವನ್ನು ಕೆರಳಿಸಿದೆ. ಕನ್ನಡದ ಮಾದರಿಯ ಸುಧಾರಣೆಗೆ ಹತ್ತಾರು ಮಾರ್ಗಗಳಿದ್ದವು, ತಜ್ಞರ ಸಲಹೆಯನ್ನು ಪಡೆಯಬಹುದಿತ್ತು. ಅಷ್ಟಕ್ಕೂ ತಮಿಳುನಾಡಿನ ಮಾದರಿ ಅನುಸರಿಸಲೇಬೇಕೆಂಬ ಹಠವಿದ್ದಲ್ಲಿ ತಮಿಳುನಾಡಿನಲ್ಲಿರುವ ಸುಸಜ್ಜಿತಅಣ್ಣಾ ಗ್ರಂಥಾಲಯ’ದ ಮಾದರಿಯಲ್ಲಿ ರಾಜ್ಯದ ಗ್ರಂಥಾಲಯಗಳ ಸುಧಾರಣೆ ಮಾಡಬಹುದಿತ್ತು. ಅದನ್ನು ಬಿಟ್ಟು ಅರ್ಜಿ ನಮೂನೆಯಂತಹ ವಿಷಯದಲ್ಲಿ ನೆರೆರಾಜ್ಯದ ಮಾದರಿ ಅನುಸರಿಸುವ ಅಗತ್ಯವಿರಲಿಲ್ಲವೆಂಬುದು ಪ್ರಕಾಶಕರ ಆಕ್ಷೇಪಿತ ಅಭಿಪ್ರಾಯ.
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಈ ಕನ್ನಡವಿರೋಧಿ ಧೋರಣೆ ಮತ್ತು ಕನ್ನಡ ತಜ್ಞರ ಕಡೆಗಣನೆಗೆ ತೀವ್ರ ಆಕೋಶ ವ್ಯಕ್ತಪಡಿಸಿರುವ ಪ್ರಕಾಶಕರ ವಲಯ, ಪುಸ್ತಕಗಳ ನೋಂದಣಿಗಿದ್ದ ಹಳೇ ಮಾದರಿಯನ್ನೇ ಮರು ಅನುಷ್ಠಾನಗೊಳಿಸಬೇಕೆಂದು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

Previous articleಗುಡದಯ್ಯನ ಶ್ರೀದೇವಿ ಪುರಾಣ
Next articleಮೃತ್ಯು ಮುಟ್ಟದವರಾರು..?