ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ
ಕೊಟ್ಟಿದ್ದು ಕೆಟ್ಟಿತೆನಬೇಡ
ಮುಂದೆ ಕಟ್ಟಿಹುದು ಬುತ್ತಿ ಸರ್ವಜ್ಞ
ಮಹ್ಮದ ಪೈಗಂಬರರು ರಮಜಾನ ತಿಂಗಳಲ್ಲಿ ರೋಜಾ ಇದ್ದು ವ್ರತ ಮಾಡುವ ಸಮಯದಲ್ಲಿ ಒಂದು ದಿನ ಸಂಜೆ ಸೂರ್ಯಾಸ್ತ ಸಮಯದಲ್ಲಿ ರೋಜಾ ಬಿಡುವ ಸಮಯ ಇನ್ನೇನು ಉಪಹಾರ ಸೇವಿಸಬೇಕು ಎನ್ನುವಷ್ಟರಲ್ಲಿ ಒಬ್ಬ ಭಿಕ್ಷುಕ ಬಂದ ತಿನ್ನಲು ಏನಾದರೂ ಇದ್ದರೆ ಕೊಡಿ ಎಂದ ಪ್ರವಾದಿ ಮೊಹ್ಮದ ಪೈಗಂಬರರು ಉಪವಾಸ ಬಿಡಲು ಎರಡು ಖರ್ಜುರ ಗೋಟು ಇಟ್ಟಿದ್ದರು ಅದನ್ನು ಆತನಿಗೆ ಕೊಡುತ್ತಾರೆ. ತಾವು ನೀರು ಕುಡಿದು ಅಲ್ಹಾಹನಿಗೆ ಕೃತಜ್ಞತೆ ಹೇಳುತ್ತಾರೆ.
ಆದರೆ ಆ ಫಕೀರ ನನಗೆ ಇನ್ನೂ ಹಸಿವಾಗಿದೆ ಇನ್ನೂ ಏನಾದರೂ ಇದ್ದರೆ ಕೊಡಿ ಎಂದಾಗ ಮನೆಯ ಮೂಲೆಯಲ್ಲಿ ಬಿದ್ದಿದ್ದ ಗೋದಿ ತೆನೆಯ ಸೂಡಿನಿಂದ ಗೋದಿ ಬೇರ್ಪಡಿಸಿ ಕುಟ್ಟಿ ಹುಗ್ಗಿ ಮಾಡಿ ಭಿಕ್ಷುಕನಿಗೆ ನೀಡುತ್ತಾರೆ. ಮತ್ತೆ ಅದಕ್ಕೆ ಹಾಲು ಬೇಡುತ್ತಾನೆ. ಈವರೆಗೂ ಹಾಲು ಕರೆಯದೇ ಇದ್ದ ಆಡು ಹಾಲು ಕರೆಯುತ್ತದೆ. ಭಿಕ್ಷುಕನಿಗಾಗಿ ಹಾಲು ಕೊಟ್ಟಿತಲ್ಲವೆಂದು ಸಂತೋಷಿಸುತ್ತಾರೆ. ಪೈಗಂಬರರ ನಿಸ್ವಾರ್ಥ ಗುಣ ಮಾದರಿಯಾಗಿದೆ.
ನದಿಯಲ್ಲಿ ದುರ್ವಾಸ ಋಷಿಗಳು ಸ್ನಾನ ಮಾಡುತ್ತಿದ್ದಾಗ ಲಂಗೋಟಿ ಸೆಳುವಿಗೆ ಹೋಗಿ ಬಿಡುತ್ತದೆ. ನದಿ ತೀರಕ್ಕೆ ಬಟ್ಟೆ ಸೆಳೆಯಲು ದ್ರೌಪದಿ ಬಂದಿರುತ್ತಾಳೆ. ಋಷಿಗಳು ಸ್ನಾನ ಮಾಡಿಕೊಂಡು ಮೇಲೆ ಬರುವವರೆಗೂ ನೀರು ಮಲೀನ ಮಾಡಬಾರದು ಎಂದು ಬಹಳ ಹೊತ್ತಿನವರೆಗೂ ಕಾಯುತ್ತ ಕೂರುತ್ತಾಳೆ. ಋಷಿಗಳು ಮೇಲೆ ಬರುವುದೇ ಇಲ್ಲ. ಕೊನೆಗೆ ದ್ರೌಪದಿ ಋಷಿಗಳೇ ತಾವು ಮೇಲಕ್ಕೆ ಬಂದರೆ ತಾನು ಬಟ್ಟೆ ತೊಳೆಯುವದಾಗಿ ಹೇಳಿದಾಗ. ನನ್ನ ಮಾನ ಮುಚ್ಚುವ ವಸ್ತ್ರವೇ ಇಲ್ಲವೆಂದು ಹೇಳಿದಾಗ ತನ್ನ ಮೈಮೇಲಿನ ಸೀರೆ ತುಂಡು ಮಾಡಿ ಅವರತ್ತ ನೀಡುತ್ತಾಳೆ. ಅದನ್ನೇ ಧರಿಸಿ ಮೇಲೆ ಬಂದ ಋಷಿಗಳು ಖುಷಿಯಿಂದ ಆಪತ್ಕಾಲದಲ್ಲಿ ಮಾನ ಕಾಪಾಡಿದೆ ಇದೇ ಬಟ್ಟೆ ನಿನ್ನ ಮಾನ ಕಾಪಾಡುವಂತಾಗಲಿ ಎಂದು ಹರಸುತ್ತಾರೆ. ಮನುಷ್ಯ ತಾನು ಯಾವಾಗಲೂ ಪರೋಪಕಾರಿಯಾದರೆ ತನಗೆ ಒದಗಿದ ಸಂಕಷ್ಟ ಸಂದರ್ಭದಲ್ಲಿ ಅದು ಉಪಯೋಗಕ್ಕೆ ಬರುತ್ತದೆ. ಅದಕ್ಕೆ ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂದು ಹಿರಿಯರ ಮಾತು ಸತ್ಯವಾಗಿದೆ.