ನಾ ಮುಂದು ತಾ ಮುಂದು ಎಂದು, ತಲೆಗೆ ಒಂದು ಹೇಳಿಕೆ…

0
19
ಸಾಂದರ್ಭಿಕ ಚಿತ್ರ

ಮುಖ್ಯಮಂತ್ರಿಗಳ ಅನುಮತಿ ಇಲ್ಲದೆ, ಸಂಪುಟದ ಗಮನಕ್ಕೆ ತರದೆ ಯಾರು ಏನು ಬೇಕಾದರೂ ಹೇಳಿಕೆ ಕೊಡಬಹುದೇ? ಮುಖ್ಯಮಂತ್ರಿಗಳ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲವೇ?

ಬೆಂಗಳೂರು: ಬಂಡೀಪುರ ಅಭಯಾರಣ್ಯ ಮಾರ್ಗದಲ್ಲಿ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸುವ ವಿಚಾರದಲ್ಲಿ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕ್‌ ಗಾಂಧಿ ಅವರನ್ನು ಮೆಚ್ಚಿಸಲು ನಾ ಮುಂದು ತಾ ಮುಂದು ಎಂದು ಪೈಪೋಟಿಗೆ ಬಿದ್ದಂತೆ ಆಡುತ್ತಿರುವ ಕಾಂಗ್ರೆಸ್ ನಾಯಕರು ತಲೆಗೆ ಒಂದು ಹೇಳಿಕೆ ಕೊಡುತ್ತಿದ್ದಾರೆ ಎಂದು ಆರ್‌.ಅಶೋಕ್‌ ವಿಪಕ್ಷ ನಾಯಕ ಟೀಕಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರಿಯಾಂಕ ಗಾಂಧಿ ಗೆದ್ದರೆ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅನುಮತಿ ಎಂದು ಚುನಾವಣಾ ಪ್ರಚಾರದಲ್ಲಿ ಡಿಸಿಎಂ ಡಿ. ಕೆ. ಶಿವಕುಮಾರ ಆಶ್ವಾಸನೆ ಕೊಡುತ್ತಾರೆ. ಮತ್ತೊಬ್ಬ ಸಿಎಂ ಆಕಾಂಕ್ಷಿ ಗೃಹ ಸಚಿವ ಪರಮೇಶ್ವರ್‌ ಅವರು ನಿಷೇಧ ತೆರವು ಬಗ್ಗೆ ಮತ್ತೆ ಪರಿಶೀಲನೆ ಎಂದು ಹೇಳಿಕೆ ಕೊಡುತ್ತಾರೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೂ ಸಹ ಅದೇ ರಾಗ ಹಾಡಿ ಹೈಕಮಾಂಡ್ ತಾಳಕ್ಕೆ ಕುಣಿಯುತ್ತಾರೆ.
ಈ ಹುಚ್ಚಾಟದ ವಿರುದ್ಧ ಜನ ತಿರುಗಿ ಬೀಳುತ್ತಿದ್ದಂತೆ ಸಿಎಂ ಸಿದ್ದರಾಮಯ್ಯನವರು ಎಂದಿನಂತೆ ಈ ಬಗ್ಗೆ ಚರ್ಚೆಯೇ ನಡೆದಿಲ್ಲ ಎಂದು ಉಲ್ಟಾ ಹೊಡೆಯುತ್ತಾರೆ.

ಈ ಕರ್ನಾಟಕ ಕಂಅರೆಸ್‌ ಸರ್ಕಾರದಲ್ಲಿ ಏನು ನಡೆಯುತ್ತಿದೆ? ಮುಖ್ಯಮಂತ್ರಿಗಳು, ಸಚಿವರ ಮಧ್ಯೆ ಪರಸ್ಪರ ತಾಳಮೇಳವೇ ಇಲ್ಲವೇ? ಮುಖ್ಯಮಂತ್ರಿಗಳ ಅನುಮತಿ ಇಲ್ಲದೆ, ಸಂಪುಟದ ಗಮನಕ್ಕೆ ತರದೆ ಯಾರು ಏನು ಬೇಕಾದರೂ ಹೇಳಿಕೆ ಕೊಡಬಹುದೇ? ಮುಖ್ಯಮಂತ್ರಿಗಳ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲವೇ? ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು, ಹೈಕಮಾಂಡ್ ನಾಯಕರ ಚುನಾವಣೆಯಲ್ಲಿ ಸಹಾಯ ಮಾಡಲು, ರಾಜ್ಯದ ಹಿತಾಸಕ್ತಿಯನ್ನೂ ಲೆಕ್ಕಿಸದೆ ಮನಬಂದಂತೆ ತೀರ್ಮಾನ ತೆಗೆದುಕೊಳ್ಳಬಹುದೇ? ರಾಹುಲ್ ಗಾಂಧಿ ಅವರನ್ನ ಮೆಚ್ಚಿಸಲು ವಯನಾಡಿನಲ್ಲಿ ಆನೆ ದಾಳಿಯಿಂದ ಮೃತನಾದ ವ್ಯಕ್ತಿಗೆ ಕನ್ನಡಿಗರ ತೆರಿಗೆ ಹಣದಿಂದ 15 ಲಕ್ಷ ರೂಪಾಯಿ ಕೊಡುತ್ತೀರಿ. ವಯನಾಡಿನ ಚುನಾವಣೆಯಲ್ಲಿ ಕರ್ನಾಟಕದ ಸಿಎಂ, ಡಿಸಿಎಂ ಫೋಟೋ ಇರುವ ಆಹಾರ ಕಿಟ್ ಗಳು ವಿತರಣೆ ಆಗುತ್ತವೆ. ಈಗ ಪ್ರಿಯಾಂಕ ಗಾಂಧಿ ಅವರನ್ನ ಮೆಚ್ಚಿಸಲು ಏಕಾಏಕಿ ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸುವ ಬಗ್ಗೆ ದಿಢೀರನೆ ಚರ್ಚೆಗಳು ಆರಂಭವಾಗುತ್ತವೆ. ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ, ಅಧಿಕಾರದ ಲಾಲಸೆಗಾಗಿ ತಾಯ್ನಾಡಿನ ವನ್ಯ ಸಂಪತ್ತು, ತಾಯ್ನಾಡಿನ ಹಿತಾಸಕ್ತಿಯನ್ನೇ ಬಲಿಕೊಡಲು ಹೇಸದ ಈ ಕರ್ನಾಟಕ ಕಾಂಗ್ರೆಸ್‌ ನಾಯಕರು ನಾಚಿಕೆಯಿಲ್ಲದೆ ನಾಡದ್ರೋಹಿಗಳು, ಉಂಡ ಮನೆಗೆ ಕೇಡು ಬಗೆಯುವ ವಂಚಕರು ಎಂದಿದ್ದಾರೆ.

Previous articleರಿಲ್ಯಾಕ್ಸ್ ಮೂಡ್‌ಗೆ ಜಾರಿದ ಅಭ್ಯರ್ಥಿಗಳು
Next articleಸ್ಟಾರ್ಟ್ ಅಪ್‌ಗಳಿಗೆ ಕರ್ನಾಟಕವೇ ನೆಚ್ಚಿನ ತಾಣ…