ನದಿಗೆ ಈಜಲು ಹೋದ ಸೈನಿಕ ಸೇರಿ ಇಬ್ಬರು ನೀರುಪಾಲು

ಬಾದಾಮಿ: ತಾಲೂಕಿನ ಮಣ್ಣೇರಿ ಗ್ರಾಮದ ಹತ್ತಿರದ ಬ್ರಿಡ್ಜ್ ಕಂ ಬ್ಯಾರೇಜ್‌ನಲ್ಲಿ ಈಜಲು ಹೋಗಿದ್ದ 14 ವರ್ಷದ ಬಾಲಕ ಮತ್ತು 23 ವರ್ಷದ ಸೈನಿಕ ನೀರುಪಾಲಾದ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ತಾಲೂಕಿನ ಹಂಸನೂರ ಗ್ರಾಮದ ಬಾಲಕ ಶೇಖರ ಮುತ್ತಪ್ಪ ಮೂಲಿಮನಿ ಮತ್ತು ರೋಣ ತಾಲೂಕಿನ ಬೆನಹಾಳ ಗ್ರಾಮದ ಸೈನಿಕ ಮಹಾಂತೇಶ ಹೂವಪ್ಪ ಹೊಸಮನಿ ನೀರು ಪಾಲಾದವರು. ಸೈನಿಕ ಮಹಾಂತೇಶ ರಜೆ ಮೇಲೆ ಬಂದಿದ್ದ. ಇನ್ನೆರಡು ದಿನಗಳಲ್ಲಿ ಕರ್ತವ್ಯಕ್ಕೆ ತೆರಳಲಿದ್ದ. ಬೇಸಿಗೆ ಬಿಸಿಲಿನ ತಾಪದಿಂದಾಗಿ ನದಿಯಲ್ಲಿ ಮಾವ ಮತ್ತು ಅಳಿಯ ಈಜಲು ಹೋಗಿದ್ದರು ಎನ್ನಲಾಗಿದೆ.
ಮಧ್ಯಾಹ್ನದಿಂದ ಗ್ರಾಮಸ್ಥರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದು, ಈ ಇಬ್ಬರೂ ಪತ್ತೆಯಾಗಿಲ್ಲ. ಶನಿವಾರ ಬೆಳಗ್ಗೆ ಬೋಟ್ ಜತೆ ಹುಡುಕಾಡಲಿದ್ದಾರೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.