ನಂಬಿದ ಸ್ನೇಹಿತನಿಗೆ ಎಂದೂ ದ್ರೋಹ ಬೇಡ

0
8

ಪರಿಪೂರ್ಣವಾಗಿ ನಂಬಿದ ಸ್ನೇಹಿತನಿಗೆ ಎಂದೂ ದ್ರೋಹವನ್ನು ಬಗೆಯಬಾರದು. ಉಪಕಾರವನ್ನು ಪಡೆದು ಮರೆಯಬಾರದು. ನಂಬಿದವರಿಗೆ ಮೋಸ ಮಾಡಬಾರದು. ಇದಕ್ಕೆ ವಿರುದ್ಧವಾಗಿ ನಡೆದರೆ ಸೂರ್ಯಚಂದ್ರರಿರುವ ತನಕ ನರಕದಲ್ಲಿ ಬೀಳಬೇಕಾಗುತ್ತದೆ. ಆದ್ದರಿಂದ ಮುಖವನ್ನು ಪದ್ಮದಂತೆ ಸೊಗಸಾಗಿ ಮಾಡಿಕೊಂಡು, ಚಂದನದಂತೆ ಮಾತು ತಂಪು ಮಾಡಿಕೊಂಡು ಹೃದಯವನ್ನು ಮಾತ್ರ ಕತ್ತರಿ ಮಾಡಿಕೊಳ್ಳುವ ಸ್ವಭಾವ ಎಂದೆಂದೂ ಹೊಂದಬಾರದು.
ಉತ್ತಮರಿಗೆ ಎಚ್ಚರಿಕೆ: ಉತ್ತಮ ಸ್ಥಾನವನ್ನು ಹೊಂದಿದವರು. ಉತ್ತಮದಾಗಲು ಬಯಸುವವರು ಎಂದೂ ಅಪ್ರಾಮಾಣಿಕವಾಗಿ ನಡೆದುಕೊಳ್ಳುವಂತಿಲ್ಲ. ಉತ್ತಮರು ಯಾವುದನ್ನು ಆಚರಿಸುತ್ತಾರೋ, ಬೇರೆಯವರು ಅದರಂತ ನಡೆದುಕೊಳ್ಳುತ್ತಾರೆ. ಉತ್ತಮರು ಯಾವುದನ್ನು ಪ್ರಮಾಣವೆನ್ನುತ್ತಾರೋ, ಬೇರೆಯವರು ಅದನ್ನೇ ಪ್ರಮಾಣ ಎನ್ನುತ್ತಾರೆ. ಹೀಗೆ ಭಾಗವತವು ಉತ್ತಮರನ್ನು ಎಚ್ಚರಿಸಿದೆ.
ಮಾಡಿದ್ದನ್ನು ಅನುಭವಿಸು: ಕೆಲವರು ಧೈರ್ಯವಾಗಿ ಕೆಟ್ಟ ಕೆಲಸವನ್ನು ಮಾಡುತ್ತಾರೆ. ಇದರಿಂದ ನನಗೇನೂ ಆಗುವುದಿಲ್ಲ ಎಂದು ಬೀಗುತ್ತಾರೆ. ಕೆಲವರು ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ. ಇದರಿಂದ ನನಗೆ ಒಳ್ಳೆ ಫಲ ಸಿಗಲಿಲ್ಲ ಎಂದು ಕೊರಗುತ್ತಾರೆ.
ಇವೆರಡೂ ಕೂಡ ತಪ್ಪು. ಕೆಟ್ಟ ಕೆಲಸ ಮಾಡಿದವನು ಶಿಕ್ಷೆಯನ್ನು ಅನುಭವಿಸಲೇಬೇಕು. ಒಳ್ಳೆಯ ಕೆಲಸ ಮಾಡಿದವನಿಗೆ ಒಳ್ಳೆಯ ಕಾಲ ಬಂದೇ ಬರುತ್ತದೆ. ಮಾಡಿದ ಒಳ್ಳೆಯ ಅಥವಾ ಕೆಟ್ಟ ಕರ್ಮಗಳ ಫಲವನ್ನು ಅನುಭವಿಸದೇ ಇರಲು ಸಾಧ್ಯವಿಲ್ಲ. ಕಲ್ಪಕೋಟಿಗಳು ಕಳೆದರೂ ಅನುಭವಿಸದೆ ಕರ್ಮ ಮುಗಿಯುವುದಿಲ್ಲ.
ಹೀಗೆ ಗರುಡ ಪುರಾಣದಲ್ಲಿ ತಿಳಿಸಲಾಗಿದೆ. ಉತ್ತಮವಾದದ್ದು ಜಗತ್ತಿನಲ್ಲಿ ಯಾವದು ಎಂಬುದನ್ನು ಮೊದಲು ನಿಶ್ಚಿಯಿಸಿಕೊಳ್ಳಬೇಕು. ನಿಮ್ಮ ಹೃದಯದ ಮಾತು ಕೇಳಿಯೇ ಮುಂದುವರಿಯಬೇಕು. ನಂಬಿಕೆಗೆ ಮಾಡುವ ದ್ರೋಹ ಸರಿಯಾದ ಕ್ರಮವಲ್ಲ. ಉಪಕಾರಕ್ಕೆ ಕೃತಾರ್ಥ ಭಾವ ವ್ಯಕ್ತಪಡಿಸಬೇಕೇ ವಿನಃ ಉದಾಸೀನ ಮಾಡುವುದು. ತುಚ್ಛರೀತಿಯಿಂದ ನೋಡುವುದೂ ಕೂಡ ತರವಲ್ಲ.

Previous articleಇಡಿ ನಿರ್ದೇಶಕರ ನೇಮಕ ಕೇಂದ್ರಕ್ಕೆ ಸುಪ್ರೀಂ ತಪರಾಕಿ
Next articleಲಾಲಸೆ, ಮಾತ್ಸರ್ಯ ಕುಣಿತದ ಮಧ್ಯೆ ಏಕರೂಪ ಹೊಸ ಶಾಸನದ ಜಾಗಟೆ