ಧ್ಯಾನ ಮಾಡುತ್ತಿರುವಾಗ, ಮನಸ್ಸು ಅಲೆದಾಡುತ್ತ, ಅನೇಕ ಅಸಂಬದ್ಧ ಹಾಗೂ ಅಪ್ರಯೋಜಕ ಆಲೋಚನೆಗಳು ಬಂದುಹೋಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಈ ಆಲೋಚನೆಗಳು ಬಂದುಹೋಗಲು ಬಿಡಿ. ಅವು ನಿಮ್ಮ ಗಮನಕ್ಕೆ ಬಂದಾಗ ಮತ್ತೆ ಉಸಿರಾಟದತ್ತ ಗಮನ ಹರಿಸಿ. ಅಲೆದಾಟ ತಾನಾಗಿಯೇ ಅಂತ್ಯವಾಗುತ್ತದೆ. ಕೆಲವು ಅಸಂಬದ್ಧ ಆಲೋಚನೆಗಳು ಮನಸ್ಸಿನಲ್ಲಿ ತೇಲಿ ಬಂದುಹೋಗುತ್ತವೆ. ಇದು ಒತ್ತಡದಿಂದ ಬಿಡುಗಡೆಯ ಪ್ರಕ್ರಿಯೆಯೇ ಆಗಿದೆ.
ಧ್ಯಾನ ಮಾಡುವಾಗ ಕೆಲವೊಮ್ಮೆ ಅತೀ ಪ್ರಬುದ್ಧ ಅಥವಾ ಅತೀ ಕೆಟ್ಟ ಆಲೋಚನೆಗಳೂ ಬರಬಹುದು. ಇದಕ್ಕೆ ತೀರ್ಪು ನೀಡುವುದು ಅಥವಾ ಉದ್ರೇಕಗೊಳ್ಳುವುದು ಬೇಡ. ಈ ಆಲೋಚನೆಗಳನ್ನು ವಿಸರ್ಜಿಸಿ ಶಾಂತವಾಗಿ ಕುಳಿತುಕೊಳ್ಳಿ. ಧ್ಯಾನ ಮಾಡುವಾಗ ಅದ್ಭುತ ಆಲೋಚನೆಗಳು ಬಂದಲ್ಲಿ ಅವುಗಳನ್ನು ಬರೆದಿಟ್ಟುಕೊಳ್ಳಿ. ಈ ಆಲೋಚನೆಗಳು ಪದ್ಯಗಳು, ಸೃಜನಶೀಲ ಚಿಂತನೆಗಳು, ಅಥವಾ ಹೊಸ ಪ್ರೇರಣೆಗಳಿಗೆ ಕಾರಣವಾಗಬಹುದು.
ಧ್ಯಾನದಲ್ಲಿ ಕೆಲವರಿಗೆ ಬಣ್ಣಗಳು ಕಾಣಬಹುದು, ದೃಶ್ಯಗಳು ಕಾಣಬಹುದು, ಅಥವಾ ಸುವಾಸನೆಯ ಅನುಭವವಾಗಬಹುದು. ಇದು ಐದು ಇಂದ್ರಿಯಗಳಲ್ಲಿ ಯಾವುದಾದರೂ ಒಂದು ಇಂದ್ರಿಯದ ಅನುಭವವಾಗಿರಬಹುದು. ಕೆಲವರ ಅಂತಃಸ್ಫುರಣೆ ಜಾಗೃತವಾಗಬಹುದು. ಇವೆಲ್ಲವೂ ಸಹಜ. ಈ ಅನುಭವಗಳು ನಮ್ಮ ನರವ್ಯವಸ್ಥೆಯನ್ನು ಶುದ್ಧ ಮತ್ತು ಸೂಕ್ಷ್ಮಗೊಳಿಸುತ್ತವೆ. ಆದರೆ ಈ ಅನುಭವಗಳೊಂದಿಗೆ ಸಿಲುಕಿಕೊಳ್ಳಬಾರದು. ಅವುಗಳನ್ನು ಅಲ್ಲಿಗೇ ಬಿಡಿ. ಇಲ್ಲವಾದರೆ ಧ್ಯಾನದ ಆಳವನ್ನು ಸಾಧಿಸಲು ಸಾಧ್ಯವಾಗದು.
ಧ್ಯಾನದಲ್ಲಿ ಇನ್ನೊಂದು ಮುಖ್ಯ ವಿಷಯವೆಂದರೆ, ನಿಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳಬಾರದು. ಅವರ ಅನುಭವಗಳು ಅವರದ್ದಾಗಿದ್ದು, ನಿಮ್ಮ ಅನುಭವಗಳು ನಿಮ್ಮದಾಗಿರುತ್ತದೆ. ನಿಮ್ಮನ್ನು ನಿಮಗೇ ಹೋಲಿಸಿಕೊಳ್ಳಿ. ಎರಡು ಅಥವಾ ಮೂರು ವರ್ಷಗಳ ಹಿಂದೆ ನೀವು ಹೇಗಿದ್ದಿರೋ ಅದನ್ನು ನಿಮ್ಮ ಈಗಿನ ಸ್ವಭಾವ ಮತ್ತು ಮನಃಸ್ಥಿತಿಯೊಂದಿಗೆ ಹೋಲಿಸಿ. ಇದೇ ಆರೋಗ್ಯಕರವಾದ ದೃಷ್ಟಿಕೋನ.