ಪ್ರತಿಯೊಂದು ಧರ್ಮದಲ್ಲಿ ತ್ಯಾಗಕ್ಕೆ ವಿಶಿಷ್ಟ ಸ್ಥಾನವುಂಟು. ಧರ್ಮದ ಸಾಧಕ ಗುರುವಿಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ ಸಮರ್ಪಿಸಿ ತ್ಯಾಗಮಯ ಬದುಕನ್ನು ಅಳವಡಿಸಿಕೊಳ್ಳುತ್ತಾನೆ. ಇಂತಹ ತ್ಯಾಗಕ್ಕೆ ಧರ್ಮದ ಪರಿಭಾಷೆಯಲ್ಲಿ ದಾನವೆಂತಲೂ ಹೆಸರು. ಸಾಧಕನು ಪೂಜ್ಯರಾದ ಗುರು-ಲಿಂಗ-ಜಂಗಮರಿಗೆ ತನು-ಮನ-ಧನಗಳನ್ನು ಅತ್ಯಂತ ಸಹಜವಾಗಿ ಸಮರ್ಪಿಸುವ ಮೂಲಕ ತನ್ನ ನಿಷ್ಠೆಯನ್ನು ಬಲಪಡಿಸಿಕೊಳ್ಳುತ್ತಾನೆ. ಈ ದಾನ ಯಾವುದೇ ಸಕಾಮ ಭಾವ ರಹಿತವಾಗಿದ್ದು ಸಹಜವಾಗಿ ಘಟಿಸಬೇಕು.
ವೀರಶೈವ ಸಿದ್ಧಾಂತವು ಮೂರು ಪ್ರಕಾರದ ದಾನಗಳನ್ನು ಪ್ರತಿಪಾದಿಸುತ್ತದೆ. ೧. ಸೋಪಾಧಿಕ ದಾನ ೨. ನಿರುಪಾಧಿಕ ದಾನ ಮತ್ತು ೩. ಸಹಜದಾನ. ಸಿದ್ಧಾಂತ ಶಿಖಾಮಣಿಯು ಈ ಮೂರು ಪ್ರಕಾರದ ದಾನಗಳ ಲಕ್ಷಣಗಳನ್ನು ವಿವರಿಸಿದೆ.
ಫಲಾಭಿಸಂಧಿಸಂಯುಕ್ತಂ ದಾನಂ ಯದ್ವಿಹಿತಂ ಭವೇತ್ |
ತತ್ಸೋಪಾಧಿಕಮಾಖ್ಯಾತಂ ಮುಮುಕ್ಷುಭಿರನಾದೃತಂ ||
ಫಲಾಭಿಸಂಧಿನಿರ್ಮುಕ್ರಮೀಶ್ವರಾರ್ಪಿತಕಾಂಕ್ಷಿತಂ |
ನಿರುಪಾಧಿಕಮಾಖ್ಯಾತಂ ದಾನಂ ದಾನ ವಿಶಾರದೈಃ ||
ಆದಾತ್ಮದಾತೃದೇಯಾನಾಂ ಶಿವಭಾವಂ ವಿಚಿಂತ್ಯ ಹಿ |
ಆತ್ಮನೋsಕರ್ತೃಭಾವಂ ಚ ಯುದ್ದತ್ತಂ ಸಹಜಂ ತು ತತ್ ||
ಮನದಲ್ಲಿ ಫಲದ ಅಪೇಕ್ಷೆಯನ್ನಿರಿಸಿಕೊಂಡು ಆ ಫಲಪ್ರಾಪ್ತಿಯ ಉದ್ದೇಶದಿಂದ ನೀಡುವ ದಾನ ಸೋಪಾಧಿಕ. ಇದು ಮೋಕ್ಷಾಪೇಕ್ಷಿಗಳಿಗೆ ಪ್ರಶಸ್ತವಲ್ಲ. ಯಾವುದೇ ಫಲದ ಆಕಾಂಕ್ಷೆಯಿಲ್ಲದೇ ಈಶ್ವರಾರ್ಪಣ ಬುದ್ಧಿಯಿಂದ ನೀಡುವ ದಾನ ನಿರುಪಾಧಿಕ. ಕೊಡುವವನೂ ಶಿವನೇ, ಕೊಳ್ಳುವವನೂ ಶಿವನೇ, ಕೊಡುವ ಕೊಳ್ಳುವ ಕ್ರಿಯೆಯೂ ಕೂಡ ಶಿವರೂಪವೆಂಬ ಭಾವ ಬಲಿದು ತಾನು ಯಾವುದಕ್ಕೂ ಕರ್ತೃವಲ್ಲವೆಂದು ನಂಬಿ ಸಹಜಭಾವದಿಂದ ನೀಡುವ ದಾನ ಸಹಜದಾನ.
ಸೋಪಾಧಿಕ ದಾನವು ಹೆಸರಿಗೆ ಮಾತ್ರ ದಾನ. ಏಕೆಂದರೆ ಕೊಡುವ ಕ್ರಿಯೆಯ ಹಿಂದೆ ಪಡೆಯುವ ಉದ್ದೇಶ ತುಂಬಿರುತ್ತದೆ. ಇಲ್ಲಿ ಕೊಡಬೇಕೆಂಬ ಭಾವಕ್ಕಿಂತಲೂ ಪಡೆಯಬೇಕೆಂಬ ಭಾವವೇ ವ್ಯಾಪಕವಾಗಿರುತ್ತದೆ. ತಾನು ಪಡೆಯಬೇಕೆಂದು ಬಯಸಿದ ವಸ್ತು ತನ್ನಲ್ಲಿರುವ ಇನ್ನೊಂದು ವಸ್ತುವನ್ನು ನೀಡಿದಾಗಲೇ ದೊರೆಯುವುದೆಂದು ತಿಳಿದಾಗ ಅದನ್ನು ಪಡೆಯಲೋಸುಗ ತನ್ನದನ್ನು ಬಿಡಲು ಸಿದ್ದನಾಗುವನು. ಅಂದರೆ ಕೊಡುವುದಕ್ಕಾಗಿ ಕೊಡುವುದಿಲ್ಲ. ಪಡೆಯುವುದಕ್ಕಾಗಿ ಕೊಡುತ್ತಾನೆ. ಅಂದ ಮೇಲೆ ಇದಕ್ಕೆ ದಾನವೆಂದು ಕರೆಯುವುದಾದರೂ ಏಕೆ? ಎಂದು ಸಂದೇಹ ಸಹಜವಾಗಿಯೇ ಮನವನ್ನು ಪ್ರವೇಶಿಸುತ್ತದೆ. ಯಾವುದೇ ಕಾರಣಕ್ಕಾಗಿ ಯಾವುದೇ ಪ್ರಸಂಗದಲ್ಲಿಯೂ ಯಾರಿಗೂ ನೀಡದೆ ಸ್ವಾರ್ಥಪರನಾಗಿ ಬದುಕುವವನಿಗಿಂತ ಪುಣ್ಯ ಅಥವಾ ಸ್ವರ್ಗದ ಅಪೇಕ್ಷೆಯಿಂದಲಾದರೂ ನೀಡುವವನು ಉತ್ತಮನೆಂಬ ಕಾರಣಕ್ಕಾಗಿ ಸೋಪಾಧಿಕ ದಾನಕ್ಕೆ ದಾನವೆಂದು ಕರೆಯಬೇಕಾಗಿದೆ. ಆದ್ದರಿಂದ ಸಹಜದಾನವೇ ಎಲ್ಲ ದಾನಗಳಲ್ಲಿ ಪ್ರಶಸ್ತವಾದುದು. ಎಲ್ಲ ದಾನಿಗಳು ಈ ಪ್ರಕಾರದ ದಾನವನ್ನೇ ಮಾಡಲು ಪ್ರಯತ್ನಿಸಬೇಕು.