ತಾನು ಉಣ್ಣದ ಪರರಿಗಿಕ್ಕದ ಧನವಿದ್ದೇತಕೆ?

0
6

ಈ ಪ್ರಪಂಚದಲ್ಲಿ ಕೆಲವರಿಗೆ ಧನವನ್ನು ಗಳಿಸುವುದು ಮಾತ್ರ ಗೊತ್ತು ತಾನೂ ಉಪಭೋಗಿಸುವುದಿಲ್ಲ. ಇನ್ನೊಬ್ಬರಿಗೆ ಕೊಡುವುದಂತೂ ದೂರದ ಮಾತು. ಧನಸಂಗ್ರಹದಲ್ಲೇ ಅವರಿಗೆ ಏನೋ ಒಂದು ಬಗೆಯ ನೆಮ್ಮದಿ. ಗಳಿಸಿ ಉಳಿಸುವುದಂತೂ ಅವರಿಗೆ ಎಲ್ಲಿಲ್ಲದ ಹರ್ಷ ತರುತ್ತದೆ. ತಾನು ಉಣ್ಣದ ಪರರಿಗಿಕ್ಕದ ಧನವಿದ್ದೇತಕೆ? ಎಂದು ಪ್ರಶ್ನಿಸುವ ಮೂಲಕ ದಾಸರು ಕೃಪಣರ ಧನದ ವ್ಯರ್ಥತೆಯನ್ನು ಬಣ್ಣಿಸಿದ್ದಾರೆ.
ಒಂದು ಊರಲ್ಲಿ ಬದುಕುತ್ತಿದ್ದ ಗಂಡ ಹೆಂಡತಿ ಇಬ್ಬರೂ ಕೃಪಣಪಿತಾಮಹರು. ಜಿಪುಣತನದಲ್ಲಿ ಇಬ್ಬರೂ ಒಬ್ಬರಿಗೊಬ್ಬರು ಹೇಳಿ ಮಾಡಿಸಿದ ಜೋಡಿ, ಗಂಡ ಪರ ಊರಿಗೆ ಹೊರಟಿದ್ದ. ತನ್ನ ಸಾಮಾನು ಪ್ಯಾಕ್ ಮಾಡಿಕೊಳ್ಳುವುದಕ್ಕಾಗಿ ದೀಪ ಹಚ್ಚಿಕೊಂಡಿದ್ದ. ಅವಸರದಲ್ಲಿ ದೀಪ ಆರಿಸದೇ ಹೊರನಡೆದ, ಮೂರು ಮೈಲಿ ದಾರಿ ನಡೆದು ಬಂದನಂತರ ದೀಪ ಆರಿಸದೇ ಬಂದುದರ ನೆನಪಾಗಿ ಆರಿಸಿ ಬರಲು ಮರಳಿ ಮನೆ ಕಡೆಗೆ ತಿರುಗಿದ. ಬಾಗಿಲು ತಟ್ಟಿ ಪತ್ನಿಯನ್ನು ಎಚ್ಚರಿಸಿದ. ಬಂದು ಬಾಗಿಲ ತೆರೆದ ಅವಳು “ಊರಿಗೆ ಹೊರಟವರು ತಿರುಗಿ ಯಾಕೆ ಬಂದ್ರಿ? ಏನಾದರೂ ಮರೆತು ಹೋಗಿದ್ದಿರೇನು?” ಎಂದು ಕೇಳಿದಳು. ಒಳಗೆ ಬಂದ ಅವನು “ಹೌದು ಹಚ್ಚಿದ ದೀಪ ಆರಿಸುವುದನ್ನು ಮರೆತಿದ್ದೆ, ನೀ ಆರಿಸಿದಿಯೋ ಇಲ್ಲವೋ, ನೋಡಿ ಹೇಳಿ ಹೋಗೋಣವೆಂದು ಬಂದೆ.” ಎಂದ. ಆಗವಳು ನಗುತ್ತ ಎದೆ ತಟ್ಟಿ “ನಾನು ನಿಮ್ಮ ಹೆಂಡತಿ! ನೀವು ಇನ್ನೂ ಹೊಸ್ತಿಲ ದಾಟಿರಲಿಕ್ಕಿಲ್ಲ ನಾನಾಗಲೇ ದೀಪ ಆರಿಸಿದ್ದೆ, ಅದಿರಲಿ ನೀವು ಎಷ್ಟು ಮೈಲಿ ಹೋಗಿ ತಿರುಗಿ ಬಂದ್ರಿ’ ಎಂದು ಕೇಳಿದಳು. ಆಗವನು “ಹೆಚ್ಚೇನಿಲ್ಲ ಮೂರು ಮೈಲಿ’ ಎಂದ. ಅದಕ್ಕೆ ಅವಳು “ಏನ್ರಿ ಹೋಗುವಾಗ ಮೂರು ಮೈಲು ಬರುವಾಗ ಮೂರು ಮೈಲು ಹಿಂಗ ಒಟ್ಟು ಆರು ಮೈಲು ನಡೆದಾಡಿದ್ರಿ ಕಾಲೊಳಗಿನ ಚಪ್ಪಲ್ ಎಷ್ಟು ಸವೆದವು ! ವಿಚಾರ ಮಾಡಿದರೇನು?” ಎಂದು ಅವನನ್ನ ತರಾಟೆಗೆ ತೆಗೆದುಕೊಂಡಳು. ಅವನು “ನಾನು ನಿನ್ನ ಗಂಡ ಇದೀನಿ. ಹೋಗುವಾಗ ಮಾತ್ರ ಚಪ್ಪಲ್ ಹಾಕಿ ನಡೆದದ್ದು, ಬರುವಾಗ ಬರಿಗಾಲಲ್ಲಿ ಹಿಡಿದುಕೊಂಡು ಬಂದಿರುವೆ ನೋಡಿಲ್ಲಿ” ಎಂದು ಕಂಕುಳದಲ್ಲಿಯೇ ಹಿಡಿದು ತಂದ ಚಪ್ಪಲ್ ತೋರಿಸಿದನಂತೆ.
ಇಂತಹ ಕೃಪಣರು ಇನ್ನೊಬ್ಬರಿಗೆ ನೀಡುವುದೂ ಇಲ್ಲ, ತಾವೂ ಉಪಭೋಗಿಸುವುದಿಲ್ಲ. ಗಳಿಸಿದ್ದನ್ನೆಲ್ಲ ಸಂಗ್ರಹಿಸಿಯೇ ಒಂದೆಡೆ ಇಟ್ಟು ಕೊನೆಗೆ ಎಲ್ಲವನ್ನು ಇಲ್ಲಿಯೇ ಬಿಟ್ಟು ಮೃತ್ಯುವಿಗೆ ತುತ್ತಾಗುತ್ತಾರೆ. ಅವರು ಗಳಿಸಿದ್ದು ಕೊನೆಗೆ ಇನ್ನೊಬ್ಬರ ಪಾಲಾಗುತ್ತದೆ. ಈ ಕಾರಣಕ್ಕಾಗಿಯೇ ವ್ಯಂಗ್ಯೋಕ್ತಿಕಾರರು ಕೃಪಣನಂಥ ದಾನಿ ಮತ್ತಾರೂ ಅಲ್ಲ ಎಂದು ಹೇಳುತ್ತಾರೆ. ಏಕೆಂದರೆ ಸಾಮಾನ್ಯವಾಗಿ ದಾನ ಮಾಡುವವನು ತಾನು ಉಪಯೋಗಿಸಿ ಉಳಿದುದನ್ನು ದಾನ ಮಾಡುತ್ತಾನೆ. ಆದರೆ ಕೃಪಣ ತಾನು ತನಗಾಗಿ ಸಹ ಉಪಯೋಗಿಸದೇ ಎಲ್ಲವನ್ನು ಪರರಿಗೆ ಬಿಟ್ಟು ಹೋಗುತ್ತಾನೆ.

Previous articleದೂದ್ ಸಾಗರ್ – ಸೊನೌಲಿಮ್ ಮಾರ್ಗದಲ್ಲಿ ರೈಲು ಸಂಚಾರ ಪುನಾರಂಭ
Next articleರಾಜಕೀಯ ಕವಲುಗಳ ಕೂಡಿಕೆಯ ಯಜ್ಞ